ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 21 : ಭೀಕರವಾಗಿ ಹತ್ಯೆಗೀಡಾಗಿರುವ ವಿದ್ಯಾರ್ಥಿನಿ ವರ್ಷಿತಾಳ ಆತ್ಮಕ್ಕೆ ಶಾಂತಿ ಕೋರಿ ಮುಸ್ಲಿಂ ಸಮಾಜದ ಯುವಕರು ಗುರುವಾರ ಸಂಜೆ ನಗರದಲ್ಲಿ ಕ್ಯಾಂಡಲ್ ಮೆರವಣಿಗೆ ನಡೆಸಿದರು.
ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಯುವಕರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಹಾಗೂ ಒನಕೆ ಓಬವ್ವ ವೃತ್ತದ ಬಳಿ ಅತ್ಯಾಚಾರಿ ವಿರುದ್ದ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ ವರ್ಷಿತಾಳನ್ನು ಬರ್ಬರವಾಗಿ ಕೊಲೆಗೈದು ದೇಹವನ್ನು ಸುಟ್ಟು ಹಾಕಿರುವವರು ಯಾರೆ ಆಗಿರಲಿ ಕಠಿಣ ಶಿಕ್ಷೆ ವಿಧಿಸಬೇಕು. ಇದರ ಹಿಂದೆ ಯಾರ್ಯಾರಿದ್ದಾರೆನ್ನುವುದನ್ನು ಪತ್ತೆ ಹಚ್ಚಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಇಂತಹ ಘಟನೆ ಚಿತ್ರದುರ್ಗದಲ್ಲಿ ಮತ್ತೆ ಮರುಳಿಸಬಾರದೆಂದರೆ ವರ್ಷಿತಾಳನ್ನು ಹತ್ಯೆಗೈದವರಿಗೆ ಉಗ್ರ ಶಿಕ್ಷೆಯಾಗಬೇಕು. ನಿಸ್ಪಕ್ಷಪಾತ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರಲು ಸಾಧ್ಯ ಎಂದು ಸರ್ಕಾರವನ್ನು ಒತ್ತಾಯಿಸಿದರು. ಅಫಾನ್ ಮಾತನಾಡಿ ವರ್ಷಿತಾಳನ್ನು ಕ್ರೂರವಾಗಿ ಕೊಲೆಗೈದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಯಾವುದೇ ವ್ಯತ್ಯಾಸವಾಗದೆ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಅತ್ಯಾಚಾರದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆನ್ನುವುದು ಬಯಲಿಗೆ ಬರಲಿದೆ. ಶಾಂತಿಗೆ ಹೆಸರುವಾಸಿಯಾಗಿರುವ ಚಿತ್ರದುರ್ಗದಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿರುವುದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಮೃತಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಆರ್.ಕೆ.ನಯಾಜ್‍ಬಾಬು, ಅಲಿ, ಮುನಿರ್, ವಲಿ, ಮೆಹಬೂಬ್, ರಫಿಕ್, ಫೈರೋಜ್, ಯಾಸಿನ್, ಹೆಚ್.ಪ್ಯಾರೆಜಾನ್, ಸಯಿದು ಇನ್ನು ಅನೇಕರು ಕ್ಯಾಂಡಲ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.











