Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

33 ವರ್ಷ ಪೊಲೀಸ್ ಸೇವೆ ಬಳಿಕ ಹೋರಾಟಕ್ಕೆ ಧುಮುಕಿದ ಕೋದಂಡರಾಮಯ್ಯ: ಚಿತ್ರದುರ್ಗಕ್ಕೆ ಭದ್ರಾ ನೀರು ಹರಿಸಿದ ಹೋರಾಟದ ಕಥೆ.!

---Advertisement---

ಗೌನಹಳ್ಳಿ ಗೋವಿಂದಪ್ಪ,
ಸಂಪಾದಕರು,
ಜನಾಶಯ ಪ್ರಭ
ಚಿತ್ರದುರ್ಗ
ಮೊ : 88809 99001

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಬಯಲುಸೀಮೆಯ ಒಣಭೂಮಿಯ ದಾಹ ತಣಿಸಲು ಖಾಕಿ ಸಮವಸ್ತ್ರ ಕಳಚಿ ಜನಪರ ಚಳವಳಿಗೆ ಧುಮುಕಿದ ನಿವೃತ್ತ ಐಪಿಎಸ್ ಅಧಿಕಾರಿ, ಮಾಜಿ ಸಂಸದ ಪಿ. ಕೋದಂಡರಾಮಯ್ಯ ಅವರ ಬದ್ಧತೆ ಚಿತ್ರದುರ್ಗದ ಪಾಲಿಗೆ ವರದಾನವಾಯಿತು. ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಗಟ್ಟಿ ಅಡಿಪಾಯ ಹಾಕಿದರು. ಅಂದು ಕಂಡ ಕನಸು ಇಂದು ನನಸಾಗಿ ಚಿತ್ರದುರ್ಗಕ್ಕೆ ಭದ್ರಾ ನೀರು ಹರಿದಿರುವ ಸಂಭ್ರಮದ ಸಂದರ್ಭದಲ್ಲಿ, ಅವರ ಹೋರಾಟದ ಹಾದಿ ಹೇಗಿತ್ತು ಎಂಬುದರ ಬಗ್ಗೆ ಜನಾಶಯ ಪ್ರಭ ಪತ್ರಿಕೆಯ ಸಂಪಾದಕ ಗೌನಹಳ್ಳಿ ಗೋವಿಂದಪ್ಪಅವರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಡಾ.ರಾಮ್ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ತತ್ವಗಳಿಂದ ಪ್ರಭಾವಿತರಾಗಿದ್ದ ಪಿ.ಕೋದಂಡರಾಮಯ್ಯ, ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬಂಗಾಳಕೊಲ್ಲಿಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ನಕ್ಕವಾರಿಪಾಳ್ಯಂ ಎಂಬ ಕುಗ್ರಾಮದ ರೈತ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಲ್ಲಿ ಕೆಸರುಗದ್ದೆಯಲ್ಲಿ ಕೃಷಿ ಮಾಡಿದ ಅವರು, ತಮ್ಮ ಕುಟುಂಬದಲ್ಲಿ ಮೊಟ್ಟಮೊದಲ ಬಾರಿಗೆ ಶಾಲೆಯ ಮೆಟ್ಟಿಲು ಹತ್ತಿ ಉನ್ನತ ಶಿಕ್ಷಣ ಪಡೆದರು.

ಭದ್ರಾ ನೀರು ಚಿತ್ರದುರ್ಗ ಜಿಲ್ಲೆಗೆ ಹರಿದಿದೆ ಎಂಬ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಕೋಟೆನಾಡಿಗೆ ಬಂದಿದ್ದ ಅವರು, ತಮ್ಮ ಹಳೆಯ ನೆನಪುಗಳನ್ನು ಜನಾಶಯ ಪ್ರಭ ಕನ್ನಡ ದಿನಪತ್ರಿಕೆಯೊಂದಿಗೆ ಹಂಚಿಕೊಂಡರು.

ಪದವಿ ಪೂರ್ಣಗೊಳಿಸಿದ ಬಳಿಕ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ನ ಆಧಾರದಲ್ಲಿ 13 ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ಅವಕಾಶ ದೊರೆಯಿತು. ಅವುಗಳಲ್ಲಿ ಐಪಿಎಸ್ ಸೇವೆಯನ್ನು ಆಯ್ಕೆ ಮಾಡಿಕೊಂಡರು. ಬಳಿಕ ಕರ್ನಾಟಕ ಕೇಡರ್ಗೆ ನಿಯೋಜನೆಗೊಂಡು 33 ವರ್ಷಗಳ ಕಾಲ ರಾಜ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.

ಸಿಐಡಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ನರಗುಂದ ರೈತರ ಹೋರಾಟದ ಪರಿಸ್ಥಿತಿಯನ್ನು ಹತೋಟಿಗೆ ತರಲು ಅವರನ್ನು ನಿಯೋಜಿಸಲಾಗಿತ್ತು. ಹುಬ್ಬಳ್ಳಿಗೆ ತೆರಳುವಾಗ ಶಿರಾ, ಚಿತ್ರದುರ್ಗ, ಭರಮಸಾಗರ ಮಾರ್ಗದಲ್ಲಿ ಕಂಡ ಬರಪೀಡಿತ ಒಣಭೂಮಿ ಅವರ ಮನಸ್ಸಿನಲ್ಲಿ ಆಳವಾದ ಪ್ರಶ್ನೆ ಮೂಡಿಸಿತು. ಈ ಭಾಗದ ಜನರು ನೀರಿಗಾಗಿ ಏಕೆ ಇಷ್ಟು ಸಂಕಷ್ಟಪಡಬೇಕು? ಎಂಬ ಚಿಂತನೆ ಅಂದಿನಿAದಲೂ ಅವರನ್ನು ಕಾಡತೊಡಗಿತು.

33 ವರ್ಷಗಳ ಸೇವಾವಧಿಯಲ್ಲಿ 22 ಬಾರಿ ವರ್ಗಾವಣೆಯನ್ನು ಕಂಡರು. ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ ರಾಜೀನಾಮೆ ನೀಡಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದರು. ರಾಜಕೀಯಕ್ಕೆ ಬರಲು ಎಚ್.ಡಿ.ದೇವೇಗೌಡರು ಅಂಕಿತ ಹಾಕಿದರು ಎಂದು ಸ್ಮರಿಸಿದರು. ನಂತರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು.

ಸಂಸದರಾಗಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಅವರನ್ನು ಭೇಟಿಯಾಗಿ ಸಮಿತಿಯ ಅಧ್ಯಕ್ಷರಾಗುವಂತೆ ಆಹ್ವಾನಿಸಿದರು. ಹೋರಾಟಗಾರರ ಆಹ್ವಾನ ಒಪ್ಪಿಕೊಂಡು ಅಧ್ಯಕ್ಷರಾದ ಬಳಿಕ ಬಚಾವತ್ ಆಯೋಗದ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರು.

ಅಪ್ಪರ್ ಭದ್ರಾ ಯೋಜನೆಗೆ ಕಾಯ್ದಿರಿಸಲಾಗಿದ್ದ ನೀರಿನ ಅಂಶವನ್ನು ಗಮನಿಸಿ, ಅದರ ಆಧಾರದ ಮೇಲೆಯೇ ಬಯಲುಸೀಮೆ ನೀರಾವರಿ ಹೋರಾಟಕ್ಕೆ ಅಡಿಪಾಯ ಹಾಕಲಾಯಿತು. ರಸ್ತೆ ತಡೆ, ಧರಣಿ, ಪ್ರತಿಭಟನೆ, ತಾಲ್ಲೂಕು ಬಂದ್, ಜಾಥ ಸೇರಿದಂತೆ ಹಲವು ರೀತಿಯ ಹೋರಾಟಗಳನ್ನು ನಿರಂತರವಾಗಿ ನಡೆಸಲಾಯಿತು. ಕೆಲ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಬಯಲುಸೀಮೆಯ ಜನರ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದಾಗಿ ಅವರು ಹೇಳಿದರು.

ಹೋರಾಟದ ಪ್ರಕರಣವೂ ನೆನಪಿದೆ :
ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಹೋರಾಟವೊಂದನ್ನು ಕೋದಂಡರಾಮಯ್ಯ ನೆನಪಿಸಿಕೊಂಡರು. ವಿಧಾನಸೌಧದ ಬಳಿ ನೀರಾವರಿಗಾಗಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ನನ್ನ ವಿರುದ್ಧವೂ, ತುಮಕೂರು ಸಂಸದ ಬಸವರಾಜು, ಉಗ್ರಪ್ಪ ಸೇರಿದಂತೆ ಕೆಲವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಅಂದು ನನ್ನ ಅಧೀನದಲ್ಲೇ ಕೆಲಸ ಮಾಡಿದ್ದ ಐಪಿಎಸ್ ಅಧಿಕಾರಿಯೊಬ್ಬರು ಕಮಿಷನರ್ ಆಗಿದ್ದರು. ಅವರೇ ಪ್ರಕರಣ ದಾಖಲಿಸಿದ್ದರು. ಏಕೆ ಆ ಪ್ರಕರಣ ದಾಖಲಿಸಲಾಯಿತು ಎಂಬುದು ಇಂದಿಗೂ ಗೊತ್ತಿಲ್ಲ ಎಂದು ಅವರು ಹೇಳಿದರು.

ಬಂಧನದ ಬಳಿಕ ಪ್ರಕರಣ ಮುಗಿಯಬಹುದು  ಎಂದುಕೊಂಡಿದ್ದರೂ, ನ್ಯಾಯಾಲಯಕ್ಕೆ ಅಲೆದಾಡಬೇಕಾಯಿತು. ಬಳಿಕ ಸುಪ್ರೀಂ ಕೋರ್ಟ್ನ ತೀರ್ಪೊಂದನ್ನು ಆಧಾರವಾಗಿಸಿಕೊಂಡು ಪ್ರಕರಣವನ್ನು ರದ್ದುಪಡಿಸಿಕೊಳ್ಳಲಾಯಿತು ಎಂದು ವಿವರಿಸಿದರು.

ಅವರು ನನ್ನ ಸ್ನೇಹಿತರೇ ಆಗಿದ್ದರು. ಆದರೆ, ತಮ್ಮ ಕರ್ತವ್ಯವನ್ನು ಅವರು ಮಾಡಿದರು; ನಾನು ನನ್ನ ಕೆಲಸ ಮಾಡಿದೆ ಎಂಬುದು ಅವರ ನಿಲುವಾಗಿತ್ತು.
ಸಂಸತ್ತಿನಲ್ಲೂ ಬಯಲುಸೀಮೆಯ ಧ್ವನಿ
ಸಂಸತ್ತಿನಲ್ಲಿ ಬಯಲುಸೀಮೆಯ ನೀರಿನ ಸಮಸ್ಯೆ ಕುರಿತು ಸುಮಾರು 15 ನಿಮಿಷ ಮಾತನಾಡಿದ್ದಾಗಿ ಕೋದಂಡರಾಮಯ್ಯ ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗ ಭಾಗಕ್ಕೆ ರೈಲು ಸಂಪರ್ಕದ ಅಗತ್ಯವನ್ನೂ ಪ್ರಸ್ತಾಪಿಸಿದ್ದರು.

ಆಗಿನ ರೈಲ್ವೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಹಾಗೂ ನೀರಾವರಿ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ಗಮನಕ್ಕೂ ಈ ಭಾಗದ ಸಮಸ್ಯೆಗಳನ್ನು ತಂದಿದ್ದರು. ರೈಲ್ವೆ ವಿಚಾರದಲ್ಲಿ ಸರ್ವೆ ನಡೆಸಲು ತಂಡ ಕಳುಹಿಸುವುದಾಗಿ ರಾಮ್ವಿಲಾಸ್ ಪಾಸ್ವಾನ್ ಭರವಸೆ ನೀಡಿದ್ದರು. ಆದರೆ ನೀರಾವರಿ ವಿಚಾರದಲ್ಲಿ ಅಂದಿನ ಸಚಿವರಿಂದ ನಿರೀಕ್ಷಿತ ಮುಂದುವರಿಕೆ ದೊರೆಯಲಿಲ್ಲ ಎಂದರು.

ಹೋರಾಟ ಆರಂಭಿಸಿದ ದಿನದಿಂದ ಇಂದಿನವರೆಗೂ ನನ್ನ ವಿರುದ್ಧ ಯಾರೂ ಏನೂ ಮಾಡಿಲ್ಲ ಎನ್ನಬಹುದು. ಭದ್ರಾ ಮೇಲ್ದಂಡೆ ಮಂಜೂರು ಮಾಡಿಸುವುದೇ ಗುರಿಯಾಗಿತ್ತು. ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾಗಬೇಕು ಎನ್ನುವುದು ನನ್ನ ಗುರಿಯಾಗಿತ್ತು. ಅದನ್ನು ಮಂಜೂರು ಮಾಡಿಸಿದ್ದೇನೆ. ಈಗ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಆಗುವ ಲೋಪಗಳನ್ನು ಸ್ಥಳೀಯರು ಗಮನಿಸಬೇಕು. ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಗಮನಕ್ಕೆ ತಂದರೆ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಕೋದಂಡರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರ ನೀಡಿರುವ ಭರವಸೆಯಂತೆ ನಡೆದುಕೊಳ್ಳಬೇಕು. ಬಿಜೆಪಿಯ ಎಲ್ಲ ಸಂಸದರೂ ಕೇಂದ್ರ ಸರ್ಕಾರದಿಂದ ಯೋಜನೆಗೆ ಅಗತ್ಯ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now