ವಿಶೇಷ ಲೇಖನ: ✍️ ಶಶಿಧರ್ ರಾವ್
(ಲೇಖಕರು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳ ಹಿರಿಯ ತಜ್ಞರು ಮತ್ತು ಔದ್ಯಮಿಕ ಸಲಹೆಗಾರರು).
ಬೆಂಗಳೂರು – ಚಿತ್ರದುರ್ಗ.
9108320131.
ಒಂದು ಪ್ರಾಸ್ತಾವಿತ ಸಮಗ್ರ ದೂರದೃಷ್ಟಿಯ ಸಾಧ್ಯತೆಯ ಪರಿಚಯ:
21ನೇ ಶತಮಾನದ ಜಾಗತಿಕ ಆರ್ಥಿಕತೆಯು ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ (Innovation) ಅಡಿಪಾಯದ ಮೇಲೆ ನಿಂತಿದೆ. ಭಾರತದಂತಹ ಯುವ ರಾಷ್ಟ್ರವು ತನ್ನ ‘ಜನಸಂಖ್ಯಾ ಲಾಭಾಂಶವನ್ನು’ (Demographic Dividend) ಆರ್ಥಿಕ ಶಕ್ತಿಯಾಗಿ ಪರಿವರ್ತಿಸಲು, ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಜೊತೆಜೊತೆಗೆ, ಪ್ರಾಯೋಗಿಕ ಮತ್ತು ಔದ್ಯೋಗಿಕ ಮೌಲ್ಯವುಳ್ಳ ಜಾಗತಿಕ ಮಟ್ಟದ ವರ್ಕಿಂಗ್ ಮಾಡೆಲ್ ಗಳನ್ನೂ ರೂಢಿಸಿಕೊಳ್ಳಬೇಕಾಗಿದೆ.
ಕೇವಲ ಪದವಿ ಹಾಗೂ ಸ್ನಾತಕೋತ್ತರ ಕಲಿಕಾ ಪ್ರಕ್ರಿಯೆಗಳ ನಿರ್ವಹಣೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸುವುದಷ್ಟೇ ಅಲ್ಲದೇ ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ‘ಉದ್ಯೋಗ ಸೃಷ್ಟಿಕರ್ತರನ್ನು’ ಬೆಳೆಸುವ ಕಾವುಪೆಟ್ಟಿಗೆಗಳಾಗಬೇಕು (Incubators).
ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಅಳಿಸಿಹಾಕಲು, ಪ್ರತಿಯೊಂದು ಕ್ಯಾಂಪಸ್‌ನಲ್ಲಿಯೂ ಕೈಗಾರಿಕಾ ಸಹಭಾಗಿತ್ವದೊಂದಿಗೆ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್” (Hyperactive Innovation Hubs) ಗಳನ್ನು ಹಾಗೂ ಕೈಗಾರಿಕೆಗಳಿಂದ ಪ್ರಾಜೆಕ್ಟ್ ಗಳನ್ನು ಪಡೆದು ವಿದ್ಯಾರ್ಥಿಗಳಿಂದ ಅಭಿವೃದ್ಧಿಪಡಿಸುವುದಕ್ಕೆ ವ್ಯವಸ್ಥೆಗಳನ್ನು ಕ್ಯಾಂಪಸ್ ಗಳಲ್ಲಿ ಮಾಡುವ “ಪ್ರಾಜೆಕ್ಟ್ ಡೆಲಿವೆರಿ ಸೆಂಟರ್” ಗಳನ್ನು ಸ್ಥಾಪಿಸುವುದು ಮತ್ತು ಅವುಗಳನ್ನು ಅತ್ಯಂತ ಸಕ್ರಿಯವಾಗಿ ನಿರ್ವಹಿಸುವುದು ಇಂದಿನ ಅತ್ಯಂತ ತುರ್ತು ಮತ್ತು ಅನಿವಾರ್ಯ ಅಗತ್ಯವಾಗಿದೆ.

1: ಪೀಠಿಕೆ:
ಪ್ರಸ್ತುತ ಸನ್ನಿವೇಶ ಮತ್ತು ಬದಲಾವಣೆಯ ತುರ್ತು
ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯಮ ರಂಗದ ಬೇಡಿಕೆಗಳ ನಡುವೆ ಅಗಾಧವಾದ ಕಂದಕವಿದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಂದ ತೇರ್ಗಡೆಯಾಗುತ್ತಿದ್ದಾರೆ, ಆದರೆ ಕೈಗಾರಿಕಾ ವರದಿಗಳ ಪ್ರಕಾರ, ಅವರಲ್ಲಿ ಶೇ. 50ಕ್ಕೂ ಹೆಚ್ಚು ಮಂದಿ ನೇರವಾಗಿ ಉದ್ಯೋಗವನ್ನು ಮಾಡುವಷ್ಟು ಕೌಶಲ್ಯಗಳನ್ನು ಹೊಂದಿದವರಾಗಿರುವುದಿಲ್ಲ.
ಥಿಯರಿ ಆಧಾರಿತ ಪ್ರಸ್ತುತ ಪಠ್ಯಕ್ರಮವನ್ನು ಉನ್ನತೀಕರಿಸಿ ಪ್ರಾಯೋಗಿಕ ಪಠ್ಯಕ್ರಮದ ಅಳವಡಿಕೆ ಅನಿವಾರ್ಯ:
ನಮ್ಮ ಪಠ್ಯಕ್ರಮವು ಇನ್ನೂ ದಶಕಗಳ ಹಿಂದಿನ ಥಿಯರಿ ಆಧಾರಿತ ಕ್ರಮಗಳಲ್ಲೇ ಬೋಧಿಸುತ್ತಿದೆ. ಪ್ರಾಕ್ಟಿಕಲ್ ಸ್ಕಿಲ್ಸ್ ಕಲಿಕೆ ವಿದ್ಯಾರ್ಥಿ ದೆಸೆಯಲ್ಲಿಯೇ ಎಲ್ಲಾ ಕೋರ್ಸ್ ಗಳ ಎಲ್ಲಾ ಹಂತದಲ್ಲಿಯೇ ಆಗಬೇಕು.
ಕೈಗಾರಿಕಾ ಸಂಪರ್ಕದ ಕೊರತೆ:
ಬಹುತೇಕ ವಿದ್ಯಾರ್ಥಿಗಳಿಗೆ ನೈಜ-ಪ್ರಪಂಚದ ಸಮಸ್ಯೆಗಳ (Real-world problem statements) ಪರಿಚಯವಿಲ್ಲ.
ಸಂಶೋಧನೆಗೆ ಸಿಗಬೇಕು ಹೆಚ್ಚಿನ ಪ್ರಾಮುಖ್ಯತೆ: ಸಂಶೋಧನೆಗಳು ವಾಸ್ತವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಬೇಕು.
ಇಂಡಸ್ಟ್ರಿ 4.0 (Industry 4.0) ಯುಗದಲ್ಲಿ ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಬ್ಲಾಕ್‌ಚೈನ್, ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ನಂತಹ ತಂತ್ರಜ್ಞಾನಗಳು ಪ್ರತಿಯೊಂದು ಕ್ಷೇತ್ರವನ್ನೂ ಆವರಿಸಿಕೊಳ್ಳುತ್ತಿರುವಾಗ, ಥಿಯರಿ ಆಧಾರಿತ ತರಗತಿಗಳಷ್ಟೇ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಏಕೈಕ ಪರಿಹಾರವೆಂದರೆ ಕ್ಯಾಂಪಸ್‌ನೊಳಗೇ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸುವುದು.
2: ಕ್ಯಾಂಪಸ್ ಗಳಲ್ಲಿ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್” ಹಾಗೂ “ಪ್ರಾಜೆಕ್ಟ್ ಡೆಲಿವರಿ ಸೆಂಟರ್”ಗಳ ಸ್ಥಾಪನೆ
ಪರಿಕಲ್ಪನೆ ಮತ್ತು ಸ್ವರೂಪ
’ಇನ್ನೋವೇಷನ್ ಹಬ್’ ಎನ್ನುವುದು ಕೇವಲ ಕೆಲವು ಕಂಪ್ಯೂಟರ್‌ಗಳು ಮತ್ತು ಯಂತ್ರಗಳಿರುವ ಕೊಠಡಿಯಲ್ಲ. ಅದೊಂದು ‘ಜೀವಂತ ಪರಿಸರ ವ್ಯವಸ್ಥೆ’ (Living Ecosystem). “ಹೈಪರ್-ಆಕ್ಟಿವ್” (Hyperactive) ಎಂಬ ಪದವು ಇಲ್ಲಿ ಅತ್ಯಂತ ಪ್ರಸ್ತುತ. ಅಂದರೆ, ಇದು ವರ್ಷದ 365 ದಿನಗಳೂ, ದಿನದ 24 ಗಂಟೆಗಳ ಕಾಲವೂ ಕ್ರಿಯಾಶೀಲವಾಗಿರುವ, ನಿರಂತರ ಹೊಸ ಐಡಿಯಾಗಳು, ಚರ್ಚೆಗಳು, ಪ್ರಯೋಗಗಳು ಮತ್ತು ಮೂಲಮಾದರಿಗಳ (Prototypes) ನಿರ್ಮಾಣ ನಡೆಯುವ ತಾಣವಾಗಿರಬೇಕು.
ಒಂದು ಆದರ್ಶ ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್‌ನ ಲಕ್ಷಣಗಳು:
ಬಹುಶಿಸ್ತೀಯ ಕ್ಷೇತ್ರಗಳು (Multidisciplinary) ಹಾಗೂ ನಿರ್ವಹಣಾ ವ್ಯವಸ್ಥೆ: ಇಲ್ಲಿ ಇಂಜಿನಿಯರಿಂಗ್, ಕಲೆ, ವಾಣಿಜ್ಯ, ವೈದ್ಯಕೀಯ ಹೀಗೆ ಎಲ್ಲ ವಿಭಾಗದ ವಿದ್ಯಾರ್ಥಿಗಳು ಒಗ್ಗೂಡಿ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸಬೇಕು.
ಕೈಗಾರಿಕಾ ಮಾರ್ಗದರ್ಶನ (Industry Mentorship):
ಕಾರ್ಪೊರೇಟ್ ವಲಯದ ತಜ್ಞರು ಇಲ್ಲಿ ನಿಯಮಿತವಾಗಿ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಗಳಿರಬೇಕು.
ಮುಕ್ತ ವಾತಾವರಣ (Open Innovation):
ಪರಿಪಕ್ವ ಕೌಶಲ್ಯಯುತರನ್ನು ರೂಪಿಸುವ ನಿಟ್ಟಿನಲ್ಲಿ ತಪ್ಪುಮಾಡುವ, ವಿಫಲರಾಗುವ ಮತ್ತು ಅದರಿಂದ ಕಲಿಯುವ ಮುಕ್ತ ವಾತಾವರಣ ಇಲ್ಲಿರಬೇಕಾಗುತ್ತದೆ.
ಅತ್ಯಾಧುನಿಕ ಮೂಲಸೌಕರ್ಯ (State-of-the-art Infrastructure): 3D ಪ್ರಿಂಟರ್‌ಗಳು, AI ಲ್ಯಾಬ್‌ಗಳು, ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯಗಳಿರಬೇಕು.
3: ರೂಪಾಂತರದ ತ್ರಿವಳಿಗಳು (The Triad of Transformation):
ಈ ಇನ್ನೋವೇಷನ್ ಹಬ್‌ಗಳು ಮೂರು ಪ್ರಮುಖ ಆಯಾಮಗಳಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿವೆ:

3.1 ಉದ್ಯೋಗ ಸೃಷ್ಟಿ (Job Creation: ಉದ್ಯೋಗಾಕಾಂಕ್ಷಿಯಿಂದ ಉದ್ಯೋಗದಾತನೆಡೆಗೆ)
ನವೋದ್ಯಮಗಳ (Startups) ಉಗಮ: ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಾಗಿ ಕಾಯದೆ, ತಮ್ಮದೇ ಆದ ನವೋದ್ಯಮಗಳನ್ನು ಸ್ಥಾಪಿಸಲು ಹಬ್‌ಗಳು ಪ್ರೇರೇಪಿಸುತ್ತವೆ.
ಪರಿಕಲ್ಪನೆಯಿಂದ ಮಾರುಕಟ್ಟೆಗೆ (Concept to Market): ವಿದ್ಯಾರ್ಥಿಗಳ ಐಡಿಯಾಗಳನ್ನು ವ್ಯವಹಾರ ಮಾದರಿಯನ್ನಾಗಿ (Business Model) ಪರಿವರ್ತಿಸಲು, ಸೀಡ್ ಫಂಡಿಂಗ್ (Seed funding) ಒದಗಿಸಲು ಹಬ್‌ಗಳು ವೇದಿಕೆಯಾಗುತ್ತವೆ.
ಒಂದು ಯಶಸ್ವಿ ನವೋದ್ಯಮವು ಕ್ಯಾಂಪಸ್‌ನಿಂದ ಹೊರಬಂದರೆ, ಅದು ಕನಿಷ್ಠ 5-25 ಜನರಿಗೆ ನೇರ ಉದ್ಯೋಗ ಮತ್ತು ನೂರಾರು ಜನರಿಗೆ ಪರೋಕ್ಷ ಉದ್ಯೋಗ ನೀಡುತ್ತದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವು ಸಿಲಿಕಾನ್ ವ್ಯಾಲಿಯನ್ನು ಸೃಷ್ಟಿಸಿದ ಉದಾಹರಣೆ ನಮ್ಮ ಮುಂದಿದೆ.
3.2 ಕೌಶಲ್ಯ ಅಭಿವೃದ್ಧಿ (Skill Development: 21ನೇ ಶತಮಾನದ ಕೌಶಲ್ಯಗಳು)
ಪ್ರಾಯೋಗಿಕ ಕಲಿಕೆ (Experiential Learning): ವಿದ್ಯಾರ್ಥಿಗಳು ಕೇವಲ ಪುಸ್ತಕದ ಥಿಯರಿಗಳನ್ನು ಕಲಿಯುವುದಿಲ್ಲ. ಕಂಪನಿಗಳು ನೀಡುವ ನೈಜ ಸಮಸ್ಯೆಗಳನ್ನು ಬಿಡಿಸುವ ಮೂಲಕ ‘ಕ್ರಿಟಿಕಲ್ ಥಿಂಕಿಂಗ್’ (Critical Thinking) ಮತ್ತು ‘ಪ್ರಾಬ್ಲಂ ಸಾಲ್ವಿಂಗ್’ (Problem Solving) ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾರೆ.
ಅಡಾಪ್ಟಬಿಲಿಟಿ (Adaptability): ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ಹಬ್‌ಗಳಲ್ಲಿ ನಿರಂತರವಾಗಿ ಹೊಸ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಮತ್ತು ಮರು-ಕಲಿಯುವ (Learn, Unlearn, and Relearn) ಕೌಶಲ್ಯ ಬೆಳೆಯುತ್ತದೆ.
ಸಂವಹನ, ನಾಯಕತ್ವ, ಮತ್ತು ತಂಡದೊಂದಿಗೆ ಕೆಲಸ ಮಾಡುವ (Teamwork) ಮೃದು ಕೌಶಲ್ಯಗಳು (Soft skills) ಸಹಜವಾಗಿಯೇ ವಿಕಸನಗೊಳ್ಳುತ್ತವೆ.
3.3 ಸದೃಢ ಆರ್ಥಿಕತೆ (Robust Economy: ಜ್ಞಾನಾಧಾರಿತ ಆರ್ಥಿಕತೆಯ ನಿರ್ಮಾಣ)
ಬೌದ್ಧಿಕ ಆಸ್ತಿಯ ಸೃಷ್ಟಿ (Creation of Intellectual Property – IP): ನಮ್ಮ ವಿಶ್ವವಿದ್ಯಾಲಯಗಳು ಪೇಟೆಂಟ್‌ಗಳನ್ನು (Patents) ಉತ್ಪಾದಿಸುವ ಕಾರ್ಖಾನೆಗಳಾಗಬೇಕು. ಹೊಸ ಸಂಶೋಧನೆಗಳ ಪೇಟೆಂಟ್‌ನಿಂದ ಬರುವ ರಾಯಲ್ಟಿಗಳು ವಿಶ್ವವಿದ್ಯಾಲಯವನ್ನು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ.
ಸ್ಥಳೀಯ ಸಮಸ್ಯೆಗಳಿಗೆ ಜಾಗತಿಕ ಪರಿಹಾರ (Local Solutions, Global Market): ಕೃಷಿ, ಆರೋಗ್ಯ, ನೈರ್ಮಲ್ಯ ಮುಂತಾದ ಸ್ಥಳೀಯ ಸಮಸ್ಯೆಗಳಿಗೆ ಈ ಹಬ್‌ಗಳಲ್ಲಿ ಪರಿಹಾರ ಕಂಡುಹಿಡಿದು, ಅದನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವುದರಿಂದ ಆರ್ಥಿಕತೆ ಸದೃಢವಾಗುತ್ತದೆ.
ಕೌಶಲ್ಯವಂತರನ್ನು ದೇಶದಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳು (Preventing Brain Drain): ಅತ್ಯುತ್ತಮ ಪ್ರತಿಭೆಗಳು ವಿದೇಶಕ್ಕೆ ವಲಸೆ ಹೋಗುವುದನ್ನು ತಡೆಯಲು, ಅವರಿಗೆ ಕ್ಯಾಂಪಸ್‌ನಲ್ಲೇ ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಒದಗಿಸುವುದು ಅತ್ಯಗತ್ಯ.
4: ಕೈಗಾರಿಕೆಗಳ ಸಹಭಾಗಿತ್ವದ ಅನಿವಾರ್ಯತೆ (The Imperative of Industry Partnership):
ವಿಶ್ವವಿದ್ಯಾಲಯಗಳು ಏಕಾಂಗಿಯಾಗಿ ಈ ಹಬ್‌ಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಕೈಗಾರಿಕೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಜೀವನಾಡಿಯಾಗಿದೆ.
ನಿಧಿಯ ಒದಗಿಸುವಿಕೆ (Funding and CSR): ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಿಎಸ್ಆರ್ (Corporate Social Responsibility – CSR) ನಿಧಿಯನ್ನು ಈ ಹಬ್‌ಗಳ ಮೂಲಸೌಕರ್ಯ ನಿರ್ಮಾಣಕ್ಕೆ ಮತ್ತು ಸಂಶೋಧನಾ ಅನುದಾನವಾಗಿ (Research Grants) ನೀಡಬಹುದು.

ನೈಜ ಪ್ರಪಂಚದ ಸಮಸ್ಯೆಗಳು (Real-world Problem Statements): ಕೈಗಾರಿಕೆಗಳು ತಾವು ಎದುರಿಸುತ್ತಿರುವ ತಾಂತ್ರಿಕ ಅಥವಾ ವ್ಯವಹಾರಿಕ ಸಮಸ್ಯೆಗಳನ್ನು ಹಬ್‌ಗಳಿಗೆ ಪ್ರಾಜೆಕ್ಟ್‌ಗಳ ರೂಪದಲ್ಲಿ ನೀಡಬೇಕು. ವಿದ್ಯಾರ್ಥಿಗಳು ಪ್ರೊಫೆಸರ್‌ಗಳ ಮಾರ್ಗದರ್ಶನದಲ್ಲಿ ಇದಕ್ಕೆ ಪರಿಹಾರ ಒದಗಿಸಬೇಕು.
ಸಲಕರಣೆ ಮತ್ತು ತಂತ್ರಜ್ಞಾನ ಹಸ್ತಾಂತರ (Tech Transfer): ಆಧುನಿಕ ಸಾಫ್ಟ್‌ವೇರ್‌ಗಳು, ಯಂತ್ರೋಪಕರಣಗಳು ಮತ್ತು ಡೇಟಾಸೆಟ್‌ಗಳನ್ನು (Datasets) ಕೈಗಾರಿಕೆಗಳು ಹಬ್‌ಗಳಿಗೆ ಒದಗಿಸಬೇಕು.
ಅತಿಥಿ ಉಪನ್ಯಾಸಕರು ಮತ್ತು ಮಾರ್ಗದರ್ಶಕರು (EIR – Entrepreneurs in Residence): ಉದ್ಯಮದ ಪರಿಣತರು ಕ್ಯಾಂಪಸ್‌ನಲ್ಲಿ ಸಮಯ ಕಳೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂಸ್ಕೃತಿ ಬೆಳೆಯಬೇಕು.
5: ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್‌ನ ವಾಸ್ತುಶಿಲ್ಪ ಮತ್ತು ಕಾರ್ಯವಿಧಾನ:
ಒಂದು ಯಶಸ್ವಿ ಹಬ್ ಈ ಕೆಳಗಿನ ರಚನೆಗಳನ್ನು ಹೊಂದಿರಬೇಕು:
ಐಡಿಯೇಶನ್ ಝೋನ್ (Ideation Zone): ಮುಕ್ತವಾಗಿ ಕುಳಿತು ಚರ್ಚಿಸಲು, ಬ್ರೈನ್‌ಸ್ಟಾರ್ಮಿಂಗ್ (Brainstorming) ಮಾಡಲು ಪೂರಕವಾದ, ಉತ್ತಮ ವಿನ್ಯಾಸವುಳ್ಳ ಸ್ಥಳ.

ಮೇಕರ್ ಸ್ಪೇಸ್ / ಫ್ಯಾಬ್ ಲ್ಯಾಬ್ (Maker Space / Fab Lab): ಕಲ್ಪನೆಗಳಿಗೆ ಭೌತಿಕ ರೂಪ ನೀಡಲು (Prototyping) ಬೇಕಾದ 3D ಪ್ರಿಂಟರ್, CNC ಮೆಷಿನ್, ಎಲೆಕ್ಟ್ರಾನಿಕ್ಸ್ ಕಿಟ್‌ಗಳಿರುವ ಲ್ಯಾಬ್.
ಇನ್ಕ್ಯುಬೇಷನ್ ಸೆಂಟರ್ (Incubation Center): ಐಡಿಯಾ ವರ್ಕೌಟ್ ಆದ ನಂತರ, ಆ ತಂಡಕ್ಕೆ ತಮ್ಮ ಕಂಪನಿಯನ್ನು ಪ್ರಾರಂಭಿಸಲು ಬೇಕಾದ ಆಫೀಸ್ ಸ್ಪೇಸ್, ಕಾನೂನು ಮತ್ತು ಆರ್ಥಿಕ ಸಲಹೆಗಾರರ (Legal & Financial Advisors) ಸೌಲಭ್ಯ.
ತಂತ್ರಜ್ಞಾನ ವರ್ಗಾವಣೆ ಕಚೇರಿ (Technology Transfer Office – TTO): ವಿದ್ಯಾರ್ಥಿಗಳ ಸಂಶೋಧನೆಗಳಿಗೆ ಪೇಟೆಂಟ್ ಪಡೆಯಲು ಮತ್ತು ಅದನ್ನು ವಾಣಿಜ್ಯೀಕರಣ (Commercialization) ಮಾಡಲು ಸಹಾಯ ಮಾಡುವ ವಿಭಾಗ.
ಹೂಡಿಕೆದಾರರ ಸಂಪರ್ಕ ವೇದಿಕೆ (Investor Connect Pitching Arena): ಏಂಜೆಲ್ ಹೂಡಿಕೆದಾರರು (Angel Investors) ಮತ್ತು ವೆಂಚರ್ ಕ್ಯಾಪಿಟಲಿಸ್ಟ್‌ಗಳ (VCs) ಮುಂದೆ ವಿದ್ಯಾರ್ಥಿಗಳು ತಮ್ಮ ಐಡಿಯಾ ಪ್ರಸ್ತುತಪಡಿಸಲು ಮೀಸಲಾದ ವೇದಿಕೆ.
6: ಜಾಗತಿಕ ವಾಸ್ತವಾಂಶಗಳು (Global Facts & Best Practices)
ಸ್ಟ್ಯಾನ್‌ಫೋರ್ಡ್ ಮತ್ತು ಎಂಐಟಿ (MIT) ಮಾದರಿ:
ಅಮೆರಿಕದ ಆರ್ಥಿಕತೆಯ ಬಹುದೊಡ್ಡ ಪಾಲು ಈ ಎರಡು ವಿಶ್ವವಿದ್ಯಾಲಯಗಳ R&D ಮತ್ತು ಅವು ಹುಟ್ಟುಹಾಕಿದ ಸ್ಟಾರ್ಟ್‌ಅಪ್‌ಗಳಿಂದ ಬರುತ್ತದೆ. ಗೂಗಲ್ (Google), ಸನ್ ಮೈಕ್ರೋಸಿಸ್ಟಮ್ಸ್ ನಂತಹ ದೈತ್ಯ ಕಂಪನಿಗಳು ಕ್ಯಾಂಪಸ್ ಪ್ರಾಜೆಕ್ಟ್‌ಗಳಿಂದಲೇ ಹುಟ್ಟಿದವು.
ಭಾರತದ NEP 2020ರ ಬೆಂಬಲ: ಭಾರತದ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಕೂಡ ಸಂಶೋಧನೆ ಮತ್ತು ನಾವೀನ್ಯತೆಗೆ ಅತಿ ದೊಡ್ಡ ಒತ್ತು ನೀಡಿದೆ. NRF (National Research Foundation) ಸ್ಥಾಪನೆಯು ಕ್ಯಾಂಪಸ್‌ಗಳಲ್ಲಿ ಸಂಶೋಧನಾ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ.

7: ಅನುಷ್ಠಾನದಲ್ಲಿನ ಸವಾಲುಗಳು ಮತ್ತು ಕಾರ್ಯತಂತ್ರದ ಪರಿಹಾರಗಳು (Challenges & Mitigation Strategies)
ಯಾವುದೇ ಬೃಹತ್ ಬದಲಾವಣೆಯು ಸವಾಲುಗಳಿಂದ ಮುಕ್ತವಾಗಿರುವುದಿಲ್ಲ. ಈ ಹಬ್‌ಗಳ ಯಶಸ್ವಿ ಅನುಷ್ಠಾನಕ್ಕೆ ಎದುರಾಗಬಹುದಾದ ಪ್ರಮುಖ ಅಡೆತಡೆಗಳು ಮತ್ತು ಅವುಗಳನ್ನು ಮೀರುವ ಸೂಕ್ತ ಮಾರ್ಗೋಪಾಯಗಳನ್ನು ಕೆಳಗೆ ವಿವರಿಸಲಾಗಿದೆ:
ಎ. ಆಡಳಿತಾತ್ಮಕ ಸುಲಲಿತತೆಯ ಅಗತ್ಯತೆ
ಸವಾಲು: ವಿಶ್ವವಿದ್ಯಾಲಯಗಳ ಆಡಳಿತಾತ್ಮಕ ವಿಳಂಬ ನೀತಿ, ಅನುದಾನ ಬಿಡುಗಡೆಯಲ್ಲಿನ ತೊಡಕುಗಳು ಮತ್ತು ಕಠಿಣ ನಿಯಮಗಳು.

ಕಾರ್ಯತಂತ್ರದ ಪರಿಹಾರ (Operational Autonomy): ಇನ್ನೋವೇಷನ್ ಹಬ್‌ಗಳನ್ನು ಸೆಕ್ಷನ್ 8 (Section 8 – ಲಾಭರಹಿತ) ಕಂಪನಿಗಳಾಗಿ ನೋಂದಾಯಿಸಿ, ಮುಖ್ಯ ಆಡಳಿತದಿಂದ ಪ್ರತ್ಯೇಕಿಸಿ ಸಂಪೂರ್ಣ ಆರ್ಥಿಕ ಮತ್ತು ಆಡಳಿತಾತ್ಮಕ ಸ್ವಾಯತ್ತತೆ ನೀಡುವುದು.
ಬಿ. ಬೋಧಕರ ಕೌಶಲ್ಯದ ಕೊರತೆ ಮತ್ತು ಅದರ ಸರಿದೂಗಿಸುವಿಕೆಗೆ ಅಗತ್ಯ ಕ್ರಮಗಳು (Faculty Skill Gap):
ಸವಾಲು: ಬಹುಪಾಲು ಪ್ರಾಧ್ಯಾಪಕರಿಗೆ ಶೈಕ್ಷಣಿಕ ಹಿನ್ನೆಲೆಯಿದ್ದು, ಉದ್ಯಮದ ಇತ್ತೀಚಿನ ತಂತ್ರಜ್ಞಾನ ಮತ್ತು ಪ್ರಾಯೋಗಿಕ ಅನುಭವವಿಲ್ಲದಿರುವುದು.
ಕಾರ್ಯತಂತ್ರದ ಪರಿಹಾರ (Faculty Up-skilling): ಪ್ರೊಫೆಸರ್‌ಗಳಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಕನಿಷ್ಠ 1-2 ತಿಂಗಳು ಕೈಗಾರಿಕೆಗಳಲ್ಲಿ ಕಡ್ಡಾಯ ‘ಸಬ್ಯಾಟಿಕಲ್’ (Sabbatical/ಇಂಟರ್ನ್‌ಶಿಪ್) ಕಳುಹಿಸುವುದು ಮತ್ತು ಉದ್ಯಮದ ತಜ್ಞರನ್ನು ಸಹ-ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳುವುದು.
ಸಿ. ಮೌಲ್ಯಮಾಪನ ವ್ಯವಸ್ಥೆಯನ್ನು (Outdated Evaluation) ಸರಿಪಡಿಸುವ ಅಗತ್ಯತೆ
ಸವಾಲು:
ಕೇವಲ ಬರವಣಿಗೆಯ, ಕಂಠಪಾಠ ಆಧಾರಿತ ಪರೀಕ್ಷೆಗಳಿಗೆ ಅಂಕ ನೀಡುತ್ತಿರುವುದು, ಆವಿಷ್ಕಾರಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲದಿರುವುದು.
ಕಾರ್ಯತಂತ್ರದ ಪರಿಹಾರ (Credit based on Innovation): ಪಠ್ಯಕ್ರಮವನ್ನು ಪ್ರಾಯೋಗಿಕ ಆಧಾರಿತವಾಗಿ ಉನ್ನತೀಕರಿಸಿ, ಪೇಟೆಂಟ್ ಫೈಲಿಂಗ್, ಪ್ರೋಟೋಟೈಪ್ ನಿರ್ಮಾಣ ಅಥವಾ ಸ್ಟಾರ್ಟ್‌ಅಪ್ ಹುಟ್ಟುಹಾಕುವುದಕ್ಕೆ ನೇರವಾಗಿ ಅಕಾಡೆಮಿಕ್ ಕ್ರೆಡಿಟ್ (Credits) ನೀಡುವುದು.
ಡಿ. ಆರ್ಥಿಕ ಸಂಪನ್ಮೂಲಗಳ ಕೊರತೆ (Lack of Sustained Funds)
ಸವಾಲು: ಆರಂಭಿಕ ಉತ್ಸಾಹದ ನಂತರ ಹಬ್‌ಗಳನ್ನು ನಿರ್ವಹಿಸಲು ಮತ್ತು ಯೋಜನೆಗಳಿಗೆ ಧನಸಹಾಯ ನೀಡಲು ನಿಧಿಯ ಕೊರತೆ ಉಂಟಾಗುವುದು.

ಕಾರ್ಯತಂತ್ರದ ಪರಿಹಾರ (Hybrid Funding Model): ಸರ್ಕಾರಿ ಅನುದಾನ, ಅಲುಮ್ನಿ (ಹಳೆಯ ವಿದ್ಯಾರ್ಥಿಗಳು) ನೆಟ್‌ವರ್ಕ್ ದೇಣಿಗೆ ಮತ್ತು ಕಾರ್ಪೊರೇಟ್ CSR ನಿಧಿಗಳನ್ನು ಕ್ರೋಢೀಕರಿಸಿ ‘ಇನ್ನೋವೇಷನ್ ಕಾರ್ಪಸ್ ಫಂಡ್’ (ಮಿಶ್ರ ನಿಧಿ ಮಾದರಿ) ಸ್ಥಾಪನೆ.
ಈ. ವಿದ್ಯಾರ್ಥಿಗಳ ಮನಸ್ಥಿತಿ ಮತ್ತು ಅರಿವಿನ ಕೊರತೆ (Student Mindset)
ಸವಾಲು: ವಿದ್ಯಾರ್ಥಿಗಳಲ್ಲಿ ಸಾಂಪ್ರದಾಯಿಕ ಉದ್ಯೋಗದತ್ತ ಮಾತ್ರ ಒಲವಿರುವುದು ಮತ್ತು ಉದ್ಯಮಶೀಲತೆಯ (Entrepreneurship) ಅಪಾಯಗಳ ಬಗ್ಗೆ ಭಯವಿರುವುದು.
ಕಾರ್ಯತಂತ್ರದ ಪರಿಹಾರ (Awareness & Incentives): ಮೊದಲ ವರ್ಷದಿಂದಲೇ ‘ಇನ್ನೋವೇಷನ್ ಬೂಟ್‌ಕ್ಯಾಂಪ್’ಗಳನ್ನು ನಡೆಸುವುದು, ಯಶಸ್ವಿ ನವೋದ್ಯಮಿಗಳಿಂದ ನಿರಂತರ ಸಂವಾದ, ಮತ್ತು ‘ವಿಫಲತೆಗಳನ್ನು’ (Failure) ಸಹಜವಾಗಿ ಸ್ವೀಕರಿಸುವ ಸಂಸ್ಕೃತಿ ಬೆಳೆಸುವುದು.
ಎಫ್. ಕೈಗಾರಿಕೆಗಳ ಉದಾಸೀನತೆ (Industry Indifference)
ಸವಾಲು: ವಿಶ್ವವಿದ್ಯಾಲಯಗಳ ಸಾಮರ್ಥ್ಯದ ಮೇಲೆ ಕೈಗಾರಿಕೆಗಳಿಗೆ ನಂಬಿಕೆಯ ಕೊರತೆ ಅಥವಾ ತ್ವರಿತ ಆದಾಯದ ನಿರೀಕ್ಷೆ.
ಕಾರ್ಯತಂತ್ರದ ಪರಿಹಾರ (Joint IP Rights): ಕೈಗಾರಿಕೆಗಳು ನೀಡುವ ಸಮಸ್ಯೆಗಳನ್ನು ಬಿಡಿಸಿದಾಗ ಆವಿಷ್ಕಾರದ ಹಕ್ಕುಸ್ವಾಮ್ಯದಲ್ಲಿ (IP/Patents) ಕಂಪನಿಗಳಿಗೆ ಜಂಟಿ ಪಾಲುದಾರಿಕೆ ಒದಗಿಸುವುದು.
ಜಿ. ವಿಭಾಗಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವುದು (Working in Silos)
ಸವಾಲು: ಇಂಜಿನಿಯರಿಂಗ್, ವಾಣಿಜ್ಯ, ವಿಜ್ಞಾನ ಮತ್ತು ಕಲಾ ವಿಭಾಗಗಳು ಒಂಟಿಯಾಗಿ ಕಾರ್ಯನಿರ್ವಹಿಸುವುದು.
ಕಾರ್ಯತಂತ್ರದ ಪರಿಹಾರ (Cross-disciplinary Teams): ಯಾವುದೇ ಪ್ರಮುಖ ಪ್ರಾಜೆಕ್ಟ್‌ಗೆ ಕನಿಷ್ಠ 2 ಅಥವಾ 3 ವಿಭಿನ್ನ ವಿಭಾಗಗಳ ವಿದ್ಯಾರ್ಥಿಗಳ ತಂಡ (ಉದಾ: ಟೆಕ್ + ಫೈನಾನ್ಸ್ + ಡಿಸೈನ್) ಕಡ್ಡಾಯಗೊಳಿಸುವುದು.
ಎಚ್. ಮೂಲಸೌಕರ್ಯಗಳ ನಿರ್ವಹಣೆ (Infrastructure Maintenance)
ಸವಾಲು: ಆರಂಭದಲ್ಲಿ ಲ್ಯಾಬ್‌ಗಳನ್ನು ಸ್ಥಾಪಿಸಿದರೂ, ಕಾಲಕ್ರಮೇಣ ಯಂತ್ರಗಳು ಕೆಡುವುದು ಅಥವಾ ಹಳೆಯದಾಗುವುದು.
ಕಾರ್ಯತಂತ್ರದ ಪರಿಹಾರ (Sustainable Maintenance): ಯಂತ್ರೋಪಕರಣಗಳ ಪೂರೈಕೆದಾರರೊಂದಿಗೆ ‘ವಾರ್ಷಿಕ ನಿರ್ವಹಣಾ ಒಪ್ಪಂದ’ (AMC) ಕಡ್ಡಾಯಗೊಳಿಸುವುದು ಮತ್ತು ನಿರ್ವಹಣೆಗಾಗಿಯೇ ವಿದ್ಯಾರ್ಥಿ ತಾಂತ್ರಿಕ ಸಮಿತಿ (Student Tech Committees) ರಚನೆ.
8: ನೀತಿ ನಿರೂಪಕರಿಗೆ ಮತ್ತು ಕುಲಪತಿಗಳಿಗೆ / ಉಪಕುಲಪತಿಗಳಿಗೆ ಶಿಫಾರಸುಗಳು (Policy Recommendations):
ಕಡ್ಡಾಯ ನೀತಿ (Mandatory Compliance): ಯುಜಿಸಿ (UGC) ಮತ್ತು ಎಐಸಿಟಿಇ (AICTE) ಗಳು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯ ಮನ್ನಣೆ (Accreditation) ಪ್ರಕ್ರಿಯೆಯಲ್ಲಿ ‘ಇನ್ನೋವೇಷನ್ ಹಬ್‌ನ ಸಕ್ರಿಯತೆ ಮತ್ತು ಅಲ್ಲಿಂದ ಹೊರಬಂದ ಸ್ಟಾರ್ಟ್‌ಅಪ್‌ಗಳ ಸಂಖ್ಯೆಯನ್ನು’ ಪ್ರಮುಖ ಮಾನದಂಡವನ್ನಾಗಿ (Key Performance Indicator – KPI) ಮಾಡಬೇಕು.
ವಿದ್ಯಾರ್ಥಿ ನವೋದ್ಯಮ ನೀತಿ (Student Startup Policy): ರಾಜ್ಯ ಸರ್ಕಾರಗಳು ಪ್ರತ್ಯೇಕ ವಿದ್ಯಾರ್ಥಿ ಸ್ಟಾರ್ಟ್‌ಅಪ್ ನೀತಿಯನ್ನು ತಂದು, ಕ್ಯಾಂಪಸ್‌ನಲ್ಲೇ ಕಂಪನಿ ರಿಜಿಸ್ಟರ್ ಮಾಡಲು ತ್ವರಿತ ಸೌಲಭ್ಯ ಮತ್ತು ತೆರಿಗೆ ವಿನಾಯಿತಿ ನೀಡಬೇಕು. ಹಾಜರಾತಿಯಲ್ಲಿ (Attendance) ಸ್ಟಾರ್ಟ್‌ಅಪ್ ನಡೆಸುವ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಬೇಕು.
ಗ್ರಾಮೀಣ ವಿಶ್ವವಿದ್ಯಾಲಯಗಳ ಮೇಲೆ ಗಮನ: ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಕೃಷಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಅಗ್ರಿ-ಟೆಕ್ (Agri-tech) ಇನ್ನೋವೇಷನ್ ಹಬ್‌ಗಳನ್ನು ತೆರೆಯಬೇಕು. ಇದು ಗ್ರಾಮೀಣ ಆರ್ಥಿಕತೆಯನ್ನು ಕ್ರಾಂತಿಕಾರಕವಾಗಿ ಬದಲಾಯಿಸುತ್ತದೆ.
ವಾರ್ಷಿಕ ಇನ್ನೋವೇಷನ್ ಹಬ್ಬಗಳು (Annual Innovation Festivals): ರಾಜ್ಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ನಡುವೆ ಸ್ಪರ್ಧೆ ಏರ್ಪಡಿಸಿ, ಅತ್ಯುತ್ತಮ ಆವಿಷ್ಕಾರಗಳಿಗೆ ಅತಿ ದೊಡ್ಡ ಮೊತ್ತದ ಬಹುಮಾನ ಮತ್ತು ಹೂಡಿಕೆ ಒದಗಿಸಬೇಕು.
9: 2030 ಮತ್ತು ಮುಂದಿನ ಹಾದಿ – ಭವಿಷ್ಯದ ದೃಷ್ಟಿಕೋನ (Vision 2030):
ಮುಂಬರುವ ದಶಕದಲ್ಲಿ, ಜಗತ್ತು ಊಹಿಸಲಾಗದ ವೇಗದಲ್ಲಿ ಬದಲಾಗಲಿದೆ. ಸಾಂಪ್ರದಾಯಿಕ ಉದ್ಯೋಗಗಳು ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ (Automation) ನಿಂದ ಕಣ್ಮರೆಯಾಗಲಿವೆ. ಇಂತಹ ಸಂದರ್ಭದಲ್ಲಿ, “ಮಾನವನ ಸೃಜನಶೀಲತೆ ಮತ್ತು ನಾವೀನ್ಯತೆ” (Human Creativity and Innovation) ಮಾತ್ರವೇ ಉಳಿಯುವ ಏಕೈಕ ಕೌಶಲ್ಯ.
ನಾವು 2030ರ ವೇಳೆಗೆ ಭಾರತವನ್ನು ವಿಶ್ವದ ನಾವೀನ್ಯತಾ ರಾಜಧಾನಿಯನ್ನಾಗಿ (Global Innovation Capital) ಮಾಡಬೇಕಾದರೆ, ಪ್ರತಿ ಕ್ಯಾಂಪಸ್‌ನಿಂದ ಕನಿಷ್ಠ ಐದು ಯಶಸ್ವಿ ಸ್ಟಾರ್ಟ್‌ಅಪ್‌ಗಳು ಹೊರಹೊಮ್ಮಬೇಕು. ಶಿಕ್ಷಣ ಸಂಸ್ಥೆಗಳು ಕೇವಲ ‘ಜ್ಞಾನ ಪ್ರಸರಣೆ’ಯ ಕೇಂದ್ರಗಳಾಗದೆ, ‘ಜ್ಞಾನ ಸೃಷ್ಟಿಯ’ (Creation of knowledge) ಮತ್ತು ‘ಸಂಪತ್ತು ಸೃಷ್ಟಿಯ’ (Creation of wealth) ಪವಿತ್ರ ದೇಗುಲಗಳಾಗಬೇಕು. ಈ ಹೈಪರ್-ಆಕ್ಟಿವ್ ಹಬ್‌ಗಳು ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ನಿಂದ 10 ಟ್ರಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಆರ್ಥಿಕ ಇಂಜಿನ್‌ಗಳಾಗಲಿವೆ.
ಉಪಸಂಹಾರ (Conclusion):
”ಉದ್ಯೋಗವನ್ನು ಹುಡುಕುವವರನ್ನು ಸೃಷ್ಟಿಸುವ ಬದಲು, ಉದ್ಯೋಗವನ್ನು ನೀಡುವವರನ್ನು ಸೃಷ್ಟಿಸುವುದು” ಇಂದಿನ ಶಿಕ್ಷಣದ ಪರಮ ಗುರಿಯಾಗಬೇಕು. ಈ ಗುರಿಯನ್ನು ಸಾಧಿಸಲು ಕೈಗಾರಿಕೆಗಳ ಹೆಗಲಿಗೆ ಹೆಗಲು ಕೊಟ್ಟು ನಡೆಯುವ “ಸಕ್ರಿಯ ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣವೊಂದೇ ನಮ್ಮ ಮುಂದಿರುವ ರಾಜಮಾರ್ಗ. ಇದು ಕೇವಲ ಶೈಕ್ಷಣಿಕ ಸುಧಾರಣೆಯಲ್ಲ, ಇದೊಂದು ರಾಷ್ಟ್ರ ನಿರ್ಮಾಣದ ಮಹತ್ಕಾರ್ಯ. ಸರ್ಕಾರ, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು ಮತ್ತು ವಿದ್ಯಾರ್ಥಿ ಸಮುದಾಯ ಒಟ್ಟಾಗಿ ಕೈಜೋಡಿಸಿದರೆ, ಕೌಶಲ್ಯಭರಿತ, ಉದ್ಯೋಗಶೀಲ ಮತ್ತು ಆರ್ಥಿಕವಾಗಿ ಸದೃಢವಾದ ನವಭಾರತದ ನಿರ್ಮಾಣ ನಿಶ್ಚಿತ.

























