ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಹಾಗೂ ಹೊಂಗಿರಣ ಪಬ್ಲಿಕ್ ಸ್ಕೂಲ್ ವಿ.ಪಿ. ಬಡಾವಣೆ ಚಿತ್ರದುರ್ಗ ಜಂಟಿಯಾಗಿ ಆಯೋಜಿಸಿದ್ದ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಭವ್ಯ ಸಮಾರಂಭವು ನಗರದ ವಿ.ಪಿ. ಬಡಾವಣೆಯಲ್ಲಿರುವ ಹೊಂಗಿರಣ ಪಬ್ಲಿಕ್ ಶಾಲೆಯಲ್ಲಿ ದಿನಾಂಕ 15 ಆಗಸ್ಟ್ 2026, ಶನಿವಾರ ಬೆಳಗ್ಗೆ ನೆರವೇರಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಕ್ಷೇತ್ರಗಳ ಹಿರಿಯ ತಜ್ಞರು ರೋ. ಶಶಿಧರ್ ರಾವ್ ಹಾಗೂ ಶಾಲೆಯ ಕಾರ್ಯದರ್ಶಿಗಳಾದ ದೇವರಾಜ್ ಕೆ. ರವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಶಿಷ್ಟಾಚಾರಬದ್ಧವಾಗಿ, ಶಿಸ್ತುಬದ್ಧವಾಗಿ ಕಾರ್ಯಕ್ರಮವು ಸುಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ರೋ. ಶಶಿಧರ್ ರಾವ್, ಭಾರತಕ್ಕೆ ಸ್ವಾತಂತ್ರ್ಯವು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳಿಂದ ಲಭಿಸಿದೆ.
ಇಂತಹ ಘನ ಸ್ವಾತಂತ್ರ್ಯದ ಹಿಂದಿರುವ ವ್ಯಕ್ತಿತ್ವಗಳನ್ನು ಸ್ಮರಿಸುವ ಕೈಂಕರ್ಯಗಳು ಚಿರಸ್ಥಾಯಿಯಾಗಿ ಸದಾ ನಡೆಯುತ್ತಿರಬೇಕು.
ತಂತ್ರಜ್ಞಾನದ ವೇಗದ ಯುಗದಲ್ಲಿ ಮೌಲ್ಯಗಳನ್ನು ಮರೆಯದೇ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳ ಪರಿಚಯ ಮಾಡಿಕೊಡುತ್ತಿರಬೇಕು. ವಿಶ್ವಭ್ರಾತೃತ್ವ, ಜಗತ್ತೆಲ್ಲವೂ ಒಂದೇ ಕುಟುಂಬವೆಂಬ ಭಾವನೆ, ಸಮಾನತೆ, ಏಕತೆ, ಸೌಹಾರ್ದತೆ, ಭಾವೈಕ್ಯತೆಗಳು ಹಾಗೂ ಜಗತ್ತಿನ ಸರ್ವರ ಹಿತಚಿಂತನೆ ಇವುಗಳು ಭಾರತದ ಅಂತಃಸತ್ವದ ಜೀವಾಳ. ಇಂತಹ ಮಹೋನ್ನತ ಚಿಂತನೆಗಳಿಂದಲೇ ಭಾರತವು ಜಗತ್ತಿನಲ್ಲಿ ಗೌರವಯುತ ಸ್ಥಾನಗಳನ್ನು ಗಳಿಸಿದೆ. ನಿಸ್ವಾರ್ಥ ಸೇವೆ, ಶಾಂತಿ, ಸೌಹಾರ್ದತೆಯ ಮೌಲ್ಯಗಳೂ ರೋಟರಿ ಮೌಲ್ಯಗಳೂ ಆಗಿರುವುದು ವಿಶೇಷ. ತಂತ್ರಜ್ಞಾನ, ಶಿಕ್ಷಣ, ಬಾಹ್ಯಾಕಾಶ, ಆರೋಗ್ಯ, ಇನ್ನೋವೇಷನ್, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆ ಜಗತ್ತಿನಲ್ಲಿ ಗುರುತಿಸಲ್ಪಡುತ್ತಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತದ ಸಮಗ್ರ ಅಭಿವೃದ್ಧಿಗೆ ಯುವ ಮನಸುಗಳಲ್ಲಿ, ವಿದ್ಯಾರ್ಥಿಗಳಲ್ಲಿ, ಮಕ್ಕಳಲ್ಲಿ ಕನಸುಗಳನ್ನು ಬಿತ್ತಬೇಕು ಎಂದರು.
ಹೊಂಗಿರಣ ಪಬ್ಲಿಕ್ ಸ್ಕೂಲ್ ಅನೇಕ ವರ್ಷಗಳಿಂದ ಸತ್ವಯುತ – ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು ಈ ಶ್ಲಾಘನೀಯ ಕಾರ್ಯ ಮುಂದುವರಿಯಲಿ ಎಂದು ಆಶಿಸಿದರು. ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗದ ಕಾರ್ಯದರ್ಶಿಗಳ ಸಕ್ರಿಯತೆಯನ್ನು ಶ್ಲಾಘಿಸಿ, ಕ್ಲಬ್ ನ ಖಜಾಂಚಿಗಳು, ನಿರ್ದೇಶಕ ಮಂಡಳಿಯ ಸರ್ವರನ್ನೂ, ಎಲ್ಲಾ ಪೂರ್ವ ಅಧ್ಯಕ್ಷರುಗಳು, ಎಲ್ಲಾ ಪೂರ್ವ ಕಾರ್ಯದರ್ಶಿಗಳು, ಸರ್ವ ಸದಸ್ಯರನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಶಾಲೆಯ ಕಾರ್ಯದರ್ಶಿಗಳು, ಮುಖ್ಯ್ಯೋಪಾಧ್ಯಾಯರು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಕಾರ್ಯದರ್ಶಿಗಳಾದ ನವೀಕರಿಸಬಹುದಾದ ಇಂಧನ ಬಳಕೆ ಹಿರಿಯ ತಜ್ಞರು ರೋ. ಮಂಜುನಾಥ್ ಭಾಗ್ವತ್ ಮಾತನಾಡುತ್ತಾ ರಾಷ್ಟ್ರಧ್ವಜದ ಮೂರು ಬಣ್ಣಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ
ತಿಳಿಸಿದರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರ ಉಪಕ್ರಮಗಳನ್ನು, ಕಾರ್ಯಕ್ರಮ ಯೋಜನೆಗಳ ಚಿಂತನಾ ವಿಧಾನವನ್ನು ಶ್ಲಾಘಿಸಿದರು. ಮೌಲ್ಯಯುತ ಶಿಕ್ಷಣದೆಡೆಗೆ ಶಾಲೆಯ ಪ್ರಮುಖರೆಲ್ಲರ ಬದ್ಧತೆಯನ್ನು ಶ್ಲಾಘಿಸಿದರು.
ಶಾಲೆಯ ಕಾರ್ಯದರ್ಶಿಗಳಾದ ದೇವರಾಜ್. ಕೆ. ರವರು ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ವಿಭಿನ್ನ ಕಾಲಘಟ್ಟಗಳ ಘಟನಾವಳಿಗಳ ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಇತಿಹಾಸದ ಮಹತ್ವವನ್ನು ಅರಿತವರು ಮಾತ್ರ ಉತ್ತಮ ಭವಿಷ್ಯದ ಕನಸನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವ ಸದುದ್ದೇಶದಿಂದ ಪ್ರಾರಂಭವಾದ ಶಾಲೆಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರ ಆಗಮನವು ಅತ್ಯಂತ ವಿಶೇಷವಾಗಿದೆ ಎಂದು ಸ್ಮರಿಸಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಶಶಿಧರ್ ರಾವ್ ರವರು ತಂತ್ರಜ್ಞಾನ, ಉನ್ನತ ಶಿಕ್ಷಣ ಒಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಬಿಡುವಿಲ್ಲದಂತೆ ಅನನ್ಯ ಸೇವೆ ಸಲ್ಲಿಸುತ್ತಿರುವ ನಮ್ಮ ನಡುವಿನ ಅದ್ವಿತೀಯ ಸಾಧಕರು. ಅವರ ವ್ಯಕ್ತಿತ್ವ ಹಾಗೂ ಅವರ ನುಡಿಗಳು ಎಲ್ಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ ಎಂದರು.
ಶಾಲೆಯ ಮುಖ್ಯ್ಯೋಪಾಧ್ಯಾಯರು ಮಾತನಾಡುತ್ತಾ ಈ ಸಂದರ್ಭದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಅಧ್ಯಾಪಕರ, ಪೋಷಕರ, ವಿದ್ಯಾರ್ಥಿಗಳ ಶ್ರಮವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರು – ಕಾರ್ಯದರ್ಶಿಗಳು ಒಳಗೊಂಡಂತೆ ರೋಟರಿ ವತಿಯಿಂದ ಆಗಮಿಸಿದ ಅತಿಥಿಗಳ ಉಪಸ್ಥಿತಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ರೋಟರಿ ಕ್ಲಬ್ ಆಫ್ ಚಿನ್ಮೂಲಾದ್ರಿ ಚಿತ್ರದುರ್ಗ ಖಜಾಂಚಿಗಳಾದ ರೋ. ಪಿ.ಬಿ. ಶಿವರಾಮ್, ಪೂರ್ವ ಅಧ್ಯಕ್ಷರುಗಳಾದ ರೋ. ಗಾಯತ್ರಿ ಶಿವರಾಮ್, ರೋ. ನಾಗರಾಜ್ ಸಂಗಂ ಒಳಗೊಂಡಂತೆ ರೋಟರಿ ಸದಸ್ಯರು, ಅಭಿಮಾನಿಗಳು, ಹಿತೈಷಿಗಳು, ಶಾಲೆಯ ಬೋಧಕ ಸಿಬ್ಬಂದಿಗಳು, ಬೋಧಕೇತರ ಸಿಬ್ಬಂದಿಗಳು, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಹಿತೈಷಿಗಳು, ಅಭಿಮಾನಿಗಳು, ಶಾಲೆಯ ಹಿಂದಿನ ವಿದ್ಯಾರ್ಥಿಗಳು, ಮತ್ತಿತರರು ಪಾಲ್ಗೊಂಡು, ಆಗಮಿಸಿದ್ದ ಎಲ್ಲರೂ ಉಪಹಾರ ಕೂಟದಲ್ಲಿ ಜೊತೆಯಾಗಿ ಉಪಾಹಾರ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಬಿಂಬಿಸುವ ಅನೇಕ ಕಲಾ ಪ್ರಸ್ತುತಿಗಳೂ ಇತ್ತು.











