Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈಲು ನಿಲ್ದಾಣಗಳ ಕುಡಿಯುವ ನೀರಿನಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆ : ಸಿಎಜಿ ವರದಿ

---Advertisement---

ದೆಹಲಿ.ಆಗಸ್ಟ್.16: ದೇಶದ ಹಲವು ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಪೂರೈಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ-ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಸ್ವಚ್ಛತೆ ಹಾಗೂ ಕನಿಷ್ಠ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿ ಕಳವಳ ವ್ಯಕ್ತಪಡಿಸಿದೆ. ಉಪನಗರೇತರ ರೈಲ್ವೆ ನಿಲ್ದಾಣಗಳಲ್ಲಿನ ಸೌಲಭ್ಯಗಳು ಮತ್ತು ನೈರ್ಮಲ್ಯದ ಕುರಿತು ಸಂಸತ್ತಿನಲ್ಲಿ ಮಂಡಿಸಲಾದ ಲೆಕ್ಕಪರಿಶೋಧನಾ ವರದಿಯಲ್ಲಿ ಈ ಆತಂಕಕಾರಿ ಸಂಗತಿಗಳು ಬಹಿರಂಗಗೊಂಡಿವೆ.

ವಿವಿಧ ರೈಲ್ವೆ ವಲಯಗಳ ಒಟ್ಟು 512 ಆಯ್ದ ನಿಲ್ದಾಣಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ, ಎಂಟು ಪ್ರಮುಖ ನಿಲ್ದಾಣಗಳ ವಾಟರ್ ಕೂಲರ್‌ ನೀರಿನ ಮಾದರಿಗಳಲ್ಲಿ ಇ-ಕೋಲಿ ಬ್ಯಾಕ್ಟೀರಿಯಾ ಇರುವುದು ದೃಢಪಟ್ಟಿದೆ. ದಕ್ಷಿಣ ರೈಲ್ವೆಯ ಕೊಯಮತ್ತೂರು ಮತ್ತು ಪಾಲಕ್ಕಾಡ್ ಜಂಕ್ಷನ್, ದಕ್ಷಿಣ ಮಧ್ಯ ರೈಲ್ವೆಯ ಹೈದರಾಬಾದ್, ಮಧ್ಯ ರೈಲ್ವೆಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಭಿವಂಡಿ ರೋಡ್, ಕಲ್ಯಾಣ್ ಮತ್ತು ಲೋನಾವಾಲಾ ಹಾಗೂ ಪೂರ್ವ ರೈಲ್ವೆಯ ಮಧುಪುರ ನಿಲ್ದಾಣಗಳು ಈ ಪಟ್ಟಿಯಲ್ಲಿವೆ. ಇದಲ್ಲದೆ, ಆರು ವಲಯಗಳ 59 ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಬ್ಯಾಕ್ಟೀರಿಯಾಲಜಿಕಲ್ ಪರೀಕ್ಷೆಯನ್ನೇ ನಡೆಸಿಲ್ಲ ಎಂಬ ಗಂಭೀರ ಲೋಪವೂ ಬೆಳಕಿಗೆ ಬಂದಿದೆ.

ಪ್ಲಾಟ್‌ಫಾರ್ಮ್‌ ನಲ್ಲಿರುವ ನಲ್ಲಿಗಳ ನೀರಿನ ಮಾದರಿಗಳಲ್ಲೂ ಇ-ಕೋಲಿ ಸೇರಿದಂತೆ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಕಂಡುಬಂದಿದ್ದು, ನೀರಿನ ಗುಣಮಟ್ಟ ತೀರಾ ಕಳಪೆಯಾಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕುಡಿಯುವ ನೀರಿನ ಗುಣಮಟ್ಟವನ್ನು ಸಮಗ್ರವಾಗಿ ಪರೀಕ್ಷಿಸಲು ಸಿಎಜಿ ಕಟ್ಟುನಿಟ್ಟಿನ ಶಿಫಾರಸು ಮಾಡಿದೆ.

ಕೇವಲ ನೀರಿನ ಗುಣಮಟ್ಟವಷ್ಟೇ ಅಲ್ಲದೆ, ಪ್ರಯಾಣಿಕರ ಮೂಲಸೌಕರ್ಯಗಳ ವಿಚಾರದಲ್ಲೂ ರೈಲ್ವೆ ಇಲಾಖೆ ತೀವ್ರ ಹಿನ್ನಡೆ ಅನುಭವಿಸಿದೆ. ಪರಿಶೀಲನೆಗೆ ಒಳಪಟ್ಟ 512 ನಿಲ್ದಾಣಗಳಲ್ಲಿ ಶೇಕಡಾ 89ಕ್ಕಿಂತ ಹೆಚ್ಚು ಅಂದರೆ 458 ನಿಲ್ದಾಣಗಳು ಕನಿಷ್ಠ ಅಗತ್ಯ ಸೌಲಭ್ಯಗಳನ್ನು ಹೊಂದಿಲ್ಲ. ನವದೆಹಲಿ, ಹೌರಾ, ಸೀಲ್ದಾ ಮತ್ತು ಮುಂಬೈ ಸೆಂಟ್ರಲ್‌ನಂತಹ ದೇಶದ ಅತ್ಯಂತ ಜನನಿಬಿಡ ಪ್ರಮುಖ ನಿಲ್ದಾಣಗಳಲ್ಲೂ ಆಸನ ವ್ಯವಸ್ಥೆ, ಶೌಚಾಲಯ, ಕಸದ ಬುಟ್ಟಿ ಮತ್ತು ಎಲೆಕ್ಟ್ರಾನಿಕ್ ರೈಲು ಮಾಹಿತಿ ಫಲಕಗಳ ಕೊರತೆ ಕಂಡುಬಂದಿದೆ. ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಕಡ್ಡಾಯವಾಗಿ ಇರಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಮತ್ತು ನೀರು ಸರಬರಾಜು ವ್ಯವಸ್ಥೆಯ ನಿರಂತರ ತಪಾಸಣೆ ಕೈಗೊಳ್ಳುವಂತೆ ಸಿಎಜಿ ರೈಲ್ವೆ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ.

Join WhatsApp

Join Now

Join Telegram

Join Now