ಬೆಂಗಳೂರು.ಆಗಸ್ಟ್.16: ನಿರುದ್ಯೋಗಿ ಯುವಜನತೆಗೆ ನೆರವಾಗಲು ಮುಂದಿನ ಆರು ತಿಂಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಮಾಸಿಕ ₹2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳು ಬಲಿಷ್ಠವಾಗಿದ್ದರೆ ಮಾತ್ರ ಭಾರತ ಸದೃಢವಾಗಿರಲು ಸಾಧ್ಯ ಎಂದರು. ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳ ಆಧಾರದಲ್ಲಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವುದು ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ. “ಯುವ ಕರ್ನಾಟಕ – ನವ ಭಾರತ” ಧ್ಯೇಯದೊಂದಿಗೆ 2047ರ ವೇಳೆಗೆ ರಾಜ್ಯದ ಆರ್ಥಿಕತೆಯನ್ನು ₹320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದ್ದು, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಲು ‘ಪ್ರಜಾಸೇವೆ ಇಲಾಖೆ’ಯಡಿ ನಿರಂತರ ಸಭೆಗಳನ್ನು ನಡೆಸಲಾಗುತ್ತಿದೆ.
ಸಾಮಾಜಿಕ ಭದ್ರತೆಯ ಪಂಚ ಗ್ಯಾರಂಟಿಗಳ ಜೊತೆಗೆ, ಆಸ್ತಿ ದಾಖಲೆಗಳನ್ನು ಪಾರದರ್ಶಕವಾಗಿ ಡಿಜಿಟಲೀಕರಣಗೊಳಿಸಲು 6ನೇ ಗ್ಯಾರಂಟಿಯಾಗಿ ‘ಭೂ-ಗ್ಯಾರಂಟಿ’ ಯೋಜನೆಯನ್ನು ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ₹77,000 ಕೋಟಿಗೂ ಅಧಿಕ ಮೊತ್ತ ನೇರ ವರ್ಗಾವಣೆಯಾಗಿದ್ದು, ಇದರಿಂದ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅವರು ತಿಳಿಸಿದರು.
ನಿರುದ್ಯೋಗಿ ಯುವಜನತೆಗೆ ನೆರವಾಗಲು ಮುಂದಿನ ಆರು ತಿಂಗಳಲ್ಲಿ 72,000 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು. ಖಾಸಗಿ ಉದ್ಯೋಗಕ್ಕಾಗಿ “ಯುವ ಉದ್ಯೋಗ ಸೇತು” ಹಾಗೂ ಹಿಂದುಳಿದ ಜಿಲ್ಲೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಮಾಸಿಕ ₹2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಜಾರಿಗೆ ಬರಲಿದೆ. ಶಿಕ್ಷಣ ಸುಧಾರಣೆಯ ಭಾಗವಾಗಿ 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಹಾಗೂ ರಾಜಧಾನಿಯಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯವನ್ನು ಆರಂಭಿಸಲಾಗುತ್ತಿದೆ.
ರೈತರಿಗೆ ನೆರವಾಗಲು ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ “ಮುಖ್ಯಮಂತ್ರಿ ರೈತ ಚೈತನ್ಯ” ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣ ಬಾಡಿಗೆ ಮೇಲೆ ಶೇ.50 ರಿಯಾಯಿತಿ ನೀಡುವ “ರೈತ ಮಿತ್ರ” ಯೋಜನೆಗಳನ್ನು ತರಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಸೇರಿದಂತೆ ₹16,000 ಕೋಟಿ ಮೊತ್ತದ ಜಲಸಂಪನ್ಮೂಲ ಯೋಜನೆಗಳು ಪ್ರಗತಿಯಲ್ಲಿವೆ.
ಬೆಂಗಳೂರು ನಗರದ ಅಭಿವೃದ್ಧಿಗಾಗಿ ₹1.50 ಲಕ್ಷ ಕೋಟಿ ಮೂಲಸೌಕರ್ಯ ಹೂಡಿಕೆ, ₹26,000 ಕೋಟಿ ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’, 5 ಹೊಸ ಪೊಲೀಸ್ ಕಮಿಷನರೇಟ್‌ಗಳು ಹಾಗೂ ಲಾಲ್‌ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಪಟ್ಟಣ ಹಾಗೂ ನಗರಗಳಲ್ಲಿ ಸುಗಮ ಸಂಚಾರಕ್ಕಾಗಿ ರಿಂಗ್ ರೋಡ್ ಮತ್ತು ಮೊಬಿಲಿಟಿ ಗ್ರಿಡ್‌ಗಳನ್ನು ಜಾರಿಗೆ ತರಲಾಗುವುದು ಎಂದು ಅವರು ವಿವರಿಸಿದರು.











