ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 15 : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಸಂಯುಕ್ತ ಹೋರಾಟ-ಕರ್ನಾಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರೈತ ಮುಖಂಡ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ವಿರುದ್ದವಾಗಿ ಕಾನೂನುಗಳನ್ನು ಜಾರಿಗೆ ತರುತ್ತಿವೆ. ಮೂರು ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆಯಬೇಕು. ಹಿಂದಿನ ಬಿಜೆಪಿ.ಸರ್ಕಾರ ಜಾರಿಗೆ ತಂದಿದ್ದ ಭೂ ತಿದ್ದುಪಡಿ ಕಾಯಿದೆ, ಎ.ಪಿ.ಎಂ.ಸಿ.ತಿದ್ದುಪಡಿ ಕಾಯಿದೆ ಜಾನುವಾರು ತಿದ್ದುಪಡಿ ಕಾಯಿದೆಗಳನ್ನು ಕೂಡಲೆ ರದ್ದುಗೊಳಿಸಿ ಬೆಳಗಾವಿಯಲ್ಲಿ ಅಕ್ರಮವಾಗಿ ತೆರೆದಿರುವ ಮೊದಲ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿ ಎ.ಪಿ.ಎಂ.ಸಿ. ಕಟ್ಟಡದಲ್ಲಿಯೇ ತರಕಾರಿ ಮಾರುಕಟ್ಟೆಗೆ ಪುನರ್ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.

ಕಮ್ಯುನಿಸ್ಟ್ ಮುಖಂಡ ಕಾಂ.ಜಿ.ಸಿ.ಸುರೇಶ್‍ಬಾಬು ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಂದು ವಸ್ತುವಿನ ಮೇಲೆ ಜಿ.ಎಸ್.ಟಿ. ಹೇರಿರುವುದರಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರು ಜೀವಿಸುವುದು ಕಷ್ಟವಾಗಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಎ.ಪಿ.ಎಂ.ಸಿ.ಕಾಯಿದೆ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು. ಬರ ಪೀಡಿತ ಪ್ರದೇಶ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುವಲ್ಲಿ ಎರಡು ಸರ್ಕಾರಗಳಿಗೆ ಹಿತಾಸಕ್ತಿಯಿಲ್ಲ. ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಕಾಳಜಿಯಿಲ್ಲದ ಸರ್ಕಾರಗಳಿಗೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕೃಷಿ ಕಾಯಿದೆ ಬದಲಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯ ಸರ್ಕಾರ ಎ.ಪಿ.ಎಂ.ಸಿ. ಭೂಸುಧಾರಣಾ ಕಾಯಿದೆಯನ್ನು ರದ್ದುಗೊಳಿಸಿ ರೈತರ ಹಿತ ಕಾಯಬೇಕು. ಅನಾದಿ ಕಾಲದಿಂದಲೂ ಜೀವನೋಪಾಯಕ್ಕಾಗಿ ಬಗರ್‍ಹುಕುಂ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬೆದರಿಕೆ ಹಾಕಿದರು.
ಈಚಘಟ್ಟದ ಸಿದ್ದವೀರಪ್ಪ, ಧನಂಜಯ ಹಂಪಯ್ಯನಮಾಳಿಗೆ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಸತ್ಯಪ್ಪ ಮಲ್ಲಾಪುರ, ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ, ಕೆ.ಸಿ.ಹೊರಕೇರಪ್ಪ, ಹೆಚ್.ಆರ್.ತಿಮ್ಮಯ್ಯ, ಕೆ.ಬಿ.ನಾಗರಾಜ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.

