ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 16 : ಬಾಮೈದನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕ ಮತ್ತು ಭಾವನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಲಾ 50,000/- ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ಬಸವರಾಜು ಕೊಲೆಗೀಡಾದ ವ್ಯಕ್ತಿ. ಹಿರಿಯೂರು ತಾಲ್ಲೂಕಿನ ಪಿಲಾಲಿ ಗ್ರಾಮದ ತಿಮ್ಮರಾಜು ಮತ್ತು ರಾಧಮ್ಮ ಶಿಕ್ಷೆಗೊಳಪಟ್ಟ ಆರೋಪಿಗಳು.

ಘಟನೆ ಹಿನ್ನೆಲೆ : ಹಿರಿಯೂರು ತಾಲ್ಲೂಕಿನ ಪಿಲಾಲಿ ಗ್ರಾಮದ ತಿಮ್ಮರಾಜು ಮತ್ತು ರಾಧಮ್ಮ ಇವರಿಬ್ಬರೂ ದಂಪತಿಗಳು. ರಾಧಮ್ಮನವರ ಸಹೋದರ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ಬಸವರಾಜು ಅವರ ಬಳಿ
40,000/- ಹಣವನ್ನು ಸಾಲ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಈ ಸಾಲವನ್ನು ಬಡ್ಡಿ ಸೇರಿ ಒಟ್ಟು 5 ಲಕ್ಷ ರೂಪಾಯಿಗಳಾಗಿದೆ ಎಂದು ಹೇಳುತ್ತಾನೆ. ಈ ವಿಚಾರವಾಗಿ ತಿಮ್ಮರಾಜು ಮತ್ತು ರಾಧಮ್ಮ
14.01.2023 ರಂದು ಕೊಲೆ ಮಾಡಿರುತ್ತಾರೆ.
ಈ ವಿಚಾರವಾಗಿ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ತನಿಖಾಧಿಕಾರಿಗಳಾದ ರವೀಶ್ ಕೆ.ಎನ್. ಸಿ.ಪಿ.ಐ. ಹೊಳಲ್ಕೆರೆ ವೃತ್ತ, ಚಿತ್ರಹಳ್ಳಿ ಗೇಟ್ ಪೋಲಿಸ್ ಠಾಣೆ ಇವರು ಆರೋಪಿತರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರೈಸಿದ್ದು ನಂತರ ದೀಪಕ್ ಎಂ.ಎಸ್. ಸಿಪಿಐ, ಹೊಳಲ್ಕೆರೆ ಇವರು ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿಕೊಂಡಿದ್ದು, ಚಿತ್ರಹಳ್ಳಿ ಗೇಟ್ ಪೋಲಿಸ್ ಠಾಣೆಯ ನ್ಯಾಯಾಲಯದ ಸಿಬ್ಬಂದಿ ಬೊಮ್ಮಲಿಂಗೇಶ್ವರ ಸಿಪಿಸಿ ಇವರು ಪ್ರಕರಣ ವಿಚಾರಣೆಗೆ ಸಹಕರಿಸಿರುತ್ತಾರೆ.
ನಂತರ ಪ್ರಕರಣವು ಚಿತ್ರದುರ್ಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿತರು ಮೃತ ಬಸವರಾಜ ಇವರನ್ನು ಮಚ್ಚಿನಿಂದ ಕೊಲೆ ಮಾಡಿರುವುದು ಸಾಬೀತಾಗಿರುತ್ತದೆ.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ ರವರು ಜೀವಾವಧಿ ಶಿಕ್ಷೆ ನೀಡಿ ತಲಾ 50,000/- ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಂಶೀರ್ ಅಲಿಖಾನ್ ರವರು ವಾದ ಮಂಡಿಸಿರುತ್ತಾರೆ.
ಈ ಪ್ರಕರಣವನ್ನು ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡು ಆರೋಪಿತರಿಗೆ ಶಿಕ್ಷೆ ಆಗುವಂತೆ ಕಾರ್ಯ ನಿರ್ವಹಿಸಿದ ತನಿಖಾಧಿಕಾರಿಯಾದ ರವೀಶ್ ಕೆ.ಎನ್ ಸಿಪಿಐ ಮತ್ತು ದೀಪಕ್ ಎಂ.ಎಸ್ ಸಿಪಿಐ, ತನಿಖಾ ಸಹಾಯಕರು ಮತ್ತು ನ್ಯಾಯಾಲಯ ಸಿಬ್ಬಂದಿಗಳು ಹಾಗೂ ಕೋರ್ಟ್ ಮಾನಿಟರಿಂಗ್ ಸೆಲ್ ವಿಭಾಗದವರ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.















