ಆಗಸ್ಟ್ 19ರಿಂದ 26ರವರೆಗೆ ರೈಲು ಪ್ರಯಾಣ ಯೋಜಿಸಿರುವವರಿಗೆ ನೈರುತ್ಯ ರೈಲ್ವೆ ಮಹತ್ವದ ಮಾಹಿತಿ ನೀಡಿದೆ. ಮಲ್ಲಸಂದ್ರ ಮತ್ತು ಗುಬ್ಬಿ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 48ರಲ್ಲಿ ಆರ್‌ಸಿಸಿ ಬಾಕ್ಸ್ ಅಳವಡಿಕೆ ಹಾಗೂ ಗರ್ಡರ್ ತೆರವು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ ಹಾಗೂ ಸಮಯ ಪರಿಷ್ಕರಣೆ ಮಾಡಲಾಗಿದೆ.ಆಗಸ್ಟ್ 19 ಮತ್ತು 26ರಂದು ಸಂಚರಿಸಬೇಕಿದ್ದ ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು-ಮೈಸೂರು ಒಡೆಯರ್ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ತುಮಕೂರು ಮೆಮು ರೈಲುಗಳ ಸಂಚಾರ ರದ್ದುಗೊಂಡಿದೆ.ಅದೇ ರೀತಿ, ಆಗಸ್ಟ್ 19, 22 ಮತ್ತು 26ರಂದು ಸಂಚರಿಸಬೇಕಿದ್ದ ಯಲಹಂಕ-ಅರಸೀಕೆರೆ ಹಾಗೂ ಅರಸೀಕೆರೆ-ಯಲಹಂಕ ಮೆಮು ರೈಲುಗಳ ಸೇವೆಯನ್ನೂ ರದ್ದುಪಡಿಸಲಾಗಿದೆ.
ಆಗಸ್ಟ್ 19, 22, 23 ಹಾಗೂ 26ರಂದು ಸಂಚರಿಸುವ ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆ ನಿಲ್ದಾಣದಲ್ಲೇ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ.ಇದೇ ಅವಧಿಯಲ್ಲಿ ಕೆಎಸ್‌ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದ ಸಂಚಾರ ಆರಂಭಿಸಲಿದೆ. ಧಾರವಾಡ-ಕೆಎಸ್‌ಆರ್ ಬೆಂಗಳೂರು ಸಿದ್ಧಗಂಗಾ ಎಕ್ಸ್‌ಪ್ರೆಸ್ ರೈಲು ಕೂಡ ಅರಸೀಕೆರೆ ನಿಲ್ದಾಣದಲ್ಲೇ ಸಂಚಾರ ಅಂತ್ಯಗೊಳಿಸಲಿದೆ. ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಮೈಸೂರು-ಹೊಳೆನರಸೀಪುರ-ಹಾಸನ-ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪಾಂಡವಪುರ ಮತ್ತು ತಿಪಟೂರು ನಡುವಿನ ಯಾವುದೇ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಇರುವುದಿಲ್ಲ.
ವಾಸ್ಕೋ ಡ ಗಾಮ-ಯಶವಂತಪುರ ಹಾಗೂ ಯಶವಂತಪುರ-ಶಿವಮೊಗ್ಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲುಗಳು ಹಾಸನ-ನೆಲಮಂಗಲ ಮಾರ್ಗದ ಮೂಲಕ ಸಂಚರಿಸಲಿವೆ.ಉದಯಪುರ ಸಿಟಿ-ಮೈಸೂರು ಎಕ್ಸ್‌ಪ್ರೆಸ್ ರೈಲು 200 ನಿಮಿಷ ತಡವಾಗಿ ಹೊರಡಲಿದೆ. ಶ್ರೀ ಗಂಗಾನಗರ-ತಿರುಚಿರಾಪಳ್ಳಿ ಎಕ್ಸ್‌ಪ್ರೆಸ್ ರೈಲು 150 ನಿಮಿಷ ತಡವಾಗಿ ಸಂಚರಿಸಲಿದೆ.ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಹಾಗೂ ವಾಸ್ಕೋ ಡ ಗಾಮ-ಯಶವಂತಪುರ ರೈಲುಗಳನ್ನು ಮಾರ್ಗಮಧ್ಯೆ 15ರಿಂದ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಹೀಗಾಗಿ ಈ ಅವಧಿಯಲ್ಲಿ ರೈಲು ಪ್ರಯಾಣ ಕೈಗೊಳ್ಳುವ ಪ್ರಯಾಣಿಕರು ನಿಲ್ದಾಣಕ್ಕೆ ತೆರಳುವ ಮುನ್ನ ರೈಲಿನ ಪರಿಷ್ಕೃತ ವೇಳಾಪಟ್ಟಿ ಹಾಗೂ ಸಂಚಾರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.










