ಮುರುಘಾಮಠದಲ್ಲಿ ಕೃಷಿಮೇಳ ಮತ್ತು ವಸ್ತುಪ್ರದರ್ಶನ : ಪೂರ್ವಸಿದ್ಧತಾ ಸಭೆ

suddionenews
4 Min Read

 

ಚಿತ್ರದುರ್ಗ ಸೆ. 05 : ರೈತ ಈ ದೇಶಕ್ಕೆ ಅನ್ನ ನೀಡುವ ದಾಸೋಹದಾತ. ಅನ್ನ ಇಲ್ಲ ಅಂದರೆ ದೇಶವೇ ಇಲ್ಲ. ಯಾವುದೇ ಸಂಘಟನೆ ಅಥವಾ ಹೋರಾಟಕ್ಕೆ ಸಂಘಟಿತ ಬಲ ಬೇಕು. ಬಣ ಬಡಿದಾಟದಿಂದ ಹೊರಬರಬೇಕು. ಕೇವಲ ಬಾಯಿಮಾತಿನಲ್ಲಿ ಸಾವಯವ ಅದೂ ಇದೂ ಅಂದರೆ ಆಗುವುದಿಲ್ಲ. ಪ್ರತಿ ರೈತನೂ ತನ್ನ ಪೂರ್ವಜರು ಮಾಡಿದ ಕೃಷಿಪದ್ಧತಿ ಅನುಸರಿಸುವಂತಾಗಬೇಕು. ಹಗಲು-ರಾತ್ರಿ, ಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ ಕಷ್ಟಪಡುವ ರೈತನಿಗೆ ನ್ಯಾಯ ಸಿಗಬೇಕು. ಬೆಂಬಲ ಬೆಲೆ ದೊರೆಯಬೇಕು. ಭದ್ರಾ ಮೇಲ್ಡಂಡೆ ಯೋಜನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಬೇಕು. ಇದಕ್ಕೆಲ್ಲ ಜಿಲ್ಲೆಯ ಮಠಾಧಿಪತಿಗಳು ಸೇರಿದಂತೆ ಎಲ್ಲ ವಲಯದವರ ಸಹಕಾರ, ಪ್ರೋತ್ಸಾಹ ಅತ್ಯಗತ್ಯ ಎಂಬುದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದಲ್ಲಿ ಸೇರಿದ್ದ ಜಿಲ್ಲೆಯ ಪ್ರಮುಖ ರೈತಪರ ಹೋರಾಟಗಾರರು ಮತ್ತು ರೈತಸಂಘಗಳ ಸದಸ್ಯರ ಒಕ್ಕೋರಲ ಅಭಿಪ್ರಾಯವಾಗಿತ್ತು.

ಶ್ರೀಮಠದ ವತಿಯಿಂದ ಇದೇ ತಿಂಗಳು ಕೊನೆ ವಾರದಲ್ಲಿ ಆರಂಭವಾಗುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೃಷಿಮೇಳ ಮತ್ತು ವಸ್ತುಪ್ರದರ್ಶನ ಆಯೋಜಿಸುತ್ತಿದ್ದು ಅದರ ಸಿದ್ಧತೆಗಾಗಿ ರೈತಪರ ಸಂಘಟನೆಗಳ ಸಲಹೆಗಳನ್ನು ಪಡೆಯಲು ಗುರುವಾರ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ರೈತರು ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಮಾತನಾಡಿದರು.

 

ಸಭೆಯ ಸಾನ್ನಿಧ್ಯ ವಹಿಸಿದ್ದ ಬಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಶ್ರೀಮಠವು ಕಳೆದ 3 ದಶಕಗಳಿಂದ ಕೃಷಿ ಮತ್ತು ರೈತರ ಅಭಿವದ್ಧಿಯ ಪರವಾಗಿ ಕೆಲಸ ಮಾಡುತ್ತಿದೆ. ಬರೀ ಹೇಳೋದು ಕೇಳೋದು ಆಗಬಾರದು. ಒಂದು ಬದ್ಧತೆಯ ಕೆಲಸ ಆಗಬೇಕು. ಈ ಮೇಳಕ್ಕೆ ಒತ್ತಾಯಪೂರ್ವಕವಾಗಿ ಬರಬಾರದು. ಎಲ್ಲಾ ರೈÉತರು ಒಟ್ಟಾಗಿ ಬರಬೇಕು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಶ್ರೀಮಠ ಮಾಡುತ್ತದೆ. ಯಾವುದು ಅಗತ್ಯವೋ ಯಾವುದು ಅನಿವಾರ್ಯವೋ ಅದನ್ನು ಮಾಡೋಣ. ಎಲ್ಲದಕ್ಕಿಂತ ಮುಖ್ಯವಾಗಿ ಜಿಲ್ಲೆಯ ರೈತರು ಒಗ್ಗೂಡಿ ಬರುವ ಕೆಲಸವಾಗಬೇಕೆಂದರು.

 

ರೈತಮುಖಂಡ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಪದೇ ಪದೇ ಸಮಾರಂಭ ಮಾಡುತ್ತೇವೆ. ಆದರೆ ಅದರಲ್ಲಿ ಪ್ರಸ್ತಾಪಿಸುವ ಮಂಡಿಸುವ ವಿಚಾರಗಳು ಅನುಷ್ಠಾನಕ್ಕೆ ಬರಬೇಕು. ಅದು ಒಂದೇ ವಿಚಾರವಿರಲಿ ಅದು ಜಾರಿಯಾದಾಗ ಮಾತ್ರ ಅದಕ್ಕೆ ಮಹತ್ವ ಬರುತ್ತದೆ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಚಿಕ್ಕಮಕ್ಕಳಲ್ಲಿ ಮಧುಮೇಹ, ಸಣ್ಣ ವಯಸ್ಸಿನವರಿಗೆ ಹದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ಇದಕ್ಕೆ ನಾವು ತಿನ್ನುವ ಆಹಾರ ಸಂಪೂರ್ಣ ವಿಷಯುಕ್ತವಾಗಿರುವುದು. ಆದ್ದರಿಂದ ಸಾವಯವ ಕೃಷಿಗೆ ಒತ್ತುಕೊಡುವ, ಸಾಧ್ಯವಾದಷ್ಟು ಮಠಗಳಲ್ಲಿ ಸಾವಯವ ಪದಾರ್ಥಗಳನ್ನು ಬಳಸುವಂತಾದರೆ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಹಾಗೆಯೇ ರಾಸುಗಳ ಪ್ರದರ್ಶನದಲ್ಲಿ ಸ್ಥಳೀಯ ರೈತರ ಜಾನುವಾರುಗಳು ಇರಲಿ. ಅವರ ಸಾಕುವಿಕೆಯ ಪ್ರಾಯೋಗಿಕ ಅನುಭವ ಅನಿಸಿಕೆ ಬೇರೆಯವರಿಗೆ ತಿಳಿಸುವಂತಾಗಬೇಕೆಂದು ಅಭಿಪ್ರಾಯಪಟ್ಟರು.

ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ದೇಶದ ರೈತನಿಗೆ ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಸರ್ಕಾರಗಳು ರೈತರ ವಿಷಯದಲ್ಲಿ ಬೇಜವಾಬ್ದಾರಿ ನಡವಳಿಕೆ ಕೂಡದು. ರೈತರಿಗೆ ಸಕಾಲಕ್ಕೆ ಒಳ್ಳೆಯ ಬಿತ್ತನೆಬೀಜ, ಗೊಬ್ಬರ ದೊರಕುವಂತಾಗಬೇಕು. ಈ ಬಗ್ಗೆ ಕೃಷಿಮೇಳದಲ್ಲಿ ಧ್ವನಿ ಎತ್ತಿ ಸಹಕಾರಿಯಾಗಬೇಕಿದೆ ಎಂದು ತಿಳಿಸಿದರು.

ಧನಂಜಯ ಅವರು ಮಾತನಾಡಿ ರೈತಪರ ಹೋರಾಟಗಳಲ್ಲಿ ಮುಖಂಡರುಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ, ಹೋರಾಟ ಮಾಡಿದರೆ ಅರ್ಥವಿಲ್ಲ. ಸಾಂಘಿಕ ಶಕ್ತಿ ಪ್ರದರ್ಶನದ ಅಗತ್ಯವಿದೆ. ಆರ್ಥಿಕವಾಗಿ ಸಬಲರಾಗಲು ರಾಸಾಯನಿಕ ಬಳಕೆಯ ಕೃಷಿಪದ್ಧತಿಯಿಂದ ಭೂಮಿತಾಯಿ ವಿಷಯುಕ್ತ ಆಗುತ್ತಿದ್ದು ಅದನ್ನು ಮುಂದುವರೆಸಲು ಬಿಡದೆ ಸಾವಯವ ಕೃಷಿಯತ್ತ ಪ್ರತಿ ರೈತರನ್ನು ಪ್ರೇರೇಪಿಸುವ ಕೆಲಸ ಆಗಬೇಕಿದೆ. ಹಾಗಾದಾಗ ಒಳ್ಳೆಯ ತಳಿಯ ವಿಷಮುಕ್ತ ಆಹಾರ ಸಿಗಲು ಸಾಧ್ಯ ಎಂದರು.

ಸಿದ್ಧರಾಮಪ್ಪ, ತಿಪ್ಪೇಸ್ವಾಮಿ ಮಾತನಾಡಿ, ಈಗಾಗಲೇ ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವಂತಾದರೆ ಅಂತರ್ಜಲಕ್ಕೆ ಕಸುವು ಬರುತ್ತದೆ. ಆ ಬಗ್ಗೆಯೂ ಕಷಿ ಮೇಳದಲ್ಲಿ ಆದ್ಯತೆ ನೀಡಬೇಕು. ಕೃಷಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನಗಳು ಗುಣಮಟ್ಟದ ಯೋಗ್ಯ ಬೆಲೆಗೆ ಸಿಗುವಂತಾಗಬೇಕೆಂದು ಸಲಹೆ ನೀಡಿದರು.

ಶ್ರೀಮತಿ ದೇವಿಕುಮಾರಿ ವಿಶ್ವನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತ ಅಡಿಕೆ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾನೆ. ಕಾರಣ ಬೇರೆ ಬೆಳೆಗಳನ್ನು ಬೆಳೆಯಲು ತಗಲುವ ಖರ್ಚುಗಳು ದುಬಾರಿಯಾಗಿರುವುದರಿಂದ ಮತ್ತು ಬೆಳೆಗೆ ತಕ್ಕನಾದ ಬೆಲೆ ಸಿಗದೇ ಇರುವುದರಿಂದ ಅತ್ತ ಹೋಗುವಂತಾಗಿದೆ. ಅಡಿಕೆ ಬೆಳೆಗೆ ತನ್ನದೇ ಆದ ವಿಧಾನ ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.

ರಂಗೇಗೌಡ, ಹೊಳಲ್ಕೆರೆಯ ನೂರುಲ್ಲಾ ಅವರು, ಸಾವಯವ ಕೃಷಿಯಿಂದ ಯಾವ ಯಾವ ಬೆಳೆಗಳನ್ನು ಬೆಳೆಯುವ ವಿಧಾನಗಳನ್ನು ಹೇಳಿದರು. ಪ್ರತಿ ರೈತರು ದನಗಳನ್ನು ಕಟ್ಟಿ ಪಶುಸಂಗೋಪನೆ ಮಾಡಬೇಕು. ಅಂತ ವಾತಾವರಣವು ನಮ್ಮ ಪೂರ್ವಜರ ಸಮೃದ್ಧ ಜನಜೀವನವನ್ನು ನೆನಪಿಸುತ್ತವೆ ಎಂದರು.

ಪತ್ರಕರ್ತ ರೈತಮುಖಂಡ ಜಿ.ಎಸ್. ಉಜ್ಜಿನಪ್ಪ ಮಾತನಾಡಿ, ಕೃಷಿಮೇಳ ಅರ್ಥಪೂರ್ಣವಾಗಿ ಜರುಗಿ ಸರ್ಕಾರದ ಗಮನಸೆಳೆಯುವಂತಹ ಸಲಹೆಗಳನ್ನು ನೀಡುವುದು ಅತಿಮುಖ್ಯ. ನಾನು ರೈತಸಂಘದಲ್ಲಿದ್ದಾಗ ಅಲ್ಲಿನ ವ್ಯವಸ್ಥೆ ನೋಡಿ ಭ್ರಮನಿರಸನಗೊಂಡು ಹೊರಬಂದೆ ಎಂದು ಬೇಸರಿಸಿದರು.

ಕೆ.ಪಿ. ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿ, ರೈತರಲ್ಲಿ ಬಣಗಳು ಬೇಡ. ಏಕಮುಖವಾಗಿ ಸಾಗಿದರೆ ಯಶಸ್ಸು ಕಾಣಲು ಸಾಧ್ಯ. ಈಗ ಅಸಲಿಗಿಂತ ನಕಲಿ ಗೊಬ್ಬರ ಬೀಜ ಔಷಧಿಗಳ ಹಾವಳಿ ಜಾಸ್ತಿ ಇದೆ. ತಡೆಗಟ್ಟಲು ಕೃಷಿಮೇಳ ತೀರ್ಮಾನ ಮಾಡಬೇಕೆಂದರು. ಹೊರಕೇರಪ್ಪ, ಸುರೇಶ್‍ಬಾಬು ಸೇರಿದಂತೆ ಜಿಲ್ಲೆಯ ರೈತಮುಖಂಡರು ಭಾಗವಹಿಸಿದ್ದರು. ಸಂಯೋಜಕ ಪಿ. ವೀರೇಂದ್ರಕುಮಾರ್ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks