Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಲಸೆ ತಡೆಗೆ ‘ವಿಬಿ – ಜಿ ರಾಮ್ ಜಿ’ ಆಸರೆ – ಪರಿಣಾಮಕಾರಿ ಅನುಷ್ಠಾನಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

---Advertisement---

ಬಳ್ಳಾರಿ.ಆಗಸ್ಟ್.10 : ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳು ಕ್ಷೀಣಿಸಿರುವುದರಿಂದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಸಾಧ್ಯತೆಯಿದೆ. ಗ್ರಾಮೀಣ ಭಾಗದಲ್ಲೇ ಪ್ರತಿಯೊಬ್ಬ ಅರ್ಹ ಕೂಲಿಕಾರನಿಗೆ ‘ವಿ ಬಿ – ಜಿ ರಾಮ್ ಜಿ’ ಯೋಜನೆಯಡಿ ಕೆಲಸ ನೀಡುವ ಮೂಲಕ ವಲಸೆಯನ್ನು  ತಡೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ‘ವಿಕಸಿತ್ ಭಾರತ್ – ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೆ ನಿಗದಿಪಡಿಸಿದ್ದ ಮಾನವ ದಿನಗಳ ಸೃಷ್ಟಿಯ ಗುರಿಯಲ್ಲಿ ಶೇ. 46 ರಷ್ಟು ಮಾತ್ರ ಸಾಧನೆಯಾಗಿದ್ದು, ನಿರೀಕ್ಷಿತ ಮಟ್ಟ ತಲುಪದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲೆಯಲ್ಲಿ ಪ್ರಸಕ್ತ ವರ್ಷಕ್ಕೆ ಒಟ್ಟು 51.30 ಲಕ್ಷ ಮಾನವ ದಿನಗಳ ಸೃಷ್ಟಿಯ ಗುರಿ ಹೊಂದಲಾಗಿದೆ. ಜುಲೈ ತಿಂಗಳಿನಿಂದ ಉದ್ಯೋಗ ಸೃಷ್ಟಿ ವೇಗವನ್ನು ಹೆಚ್ಚಿಸಬೇಕಿದ್ದು, ಪ್ರತಿ ತಿಂಗಳು ಕನಿಷ್ಠ 5 ರಿಂದ 6 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವಂತೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 1.84 ಲಕ್ಷ ಸಕ್ರಿಯ ಜಾಬ್ ಕಾರ್ಡ್‌ಗಳಿದ್ದು, 4.60 ಲಕ್ಷ ಕಾರ್ಮಿಕರಿದ್ದಾರೆ. ಇದರಲ್ಲಿ ಸುಮಾರು 1.30 ಲಕ್ಷ ಜಾಬ್ ಕಾರ್ಡ್‌ಗಳಿಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಬಾಕಿ ಇರುವ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು

ಅಧಿಕಾರಿಗಳೇ ಹೊಣೆ

ಜಿಲ್ಲೆಯಲ್ಲಿ  ಬಡವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ಕೆಲಸ ಅರಸಿ ಬೇರೆಡೆ ವಲಸೆ ಹೋಗುವುದನ್ನು ತಡೆಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಯಾವುದೇ ಪ್ರದೇಶದಿಂದ ಜನರು ಕೆಲಸ ಸಿಗದೆ ವಲಸೆ ಹೋದರೆ, ಅದಕ್ಕೆ ಸಂಬಂಧಪಟ್ಟ ಇಓ, ಪಿಡಿಒ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಜನರು ವಲಸೆ ಹೋಗಿದ್ದರೆ, ಅವರು ಯಾವ ಕಾರಣಕ್ಕಾಗಿ ತೆರಳಿದ್ದಾರೆ ಎಂಬುದಕ್ಕೆ ಅಧಿಕಾರಿಗಳು ಸ್ಪಷ್ಟ ವಿವರಣೆ ಮತ್ತು ಮಾಹಿತಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಗಾ ಮತ್ತು ಶೀಘ್ರ ವೇತನ ಪಾವತಿ

ಉದ್ಯೋಗ ಖಾತರಿ ಯೋಜನೆಯಡಿ ನಿರಂತರ ನಿಗಾ ವಹಿಸಬೇಕು. ಬಡ ಕಾರ್ಮಿಕರಿಗೆ ಗ್ರಾಮ ಮಟ್ಟದಲ್ಲೇ ಕೂಲಿ ಉದ್ಯೋಗ ಒದಗಿಸಿ, ಅವರ ಬ್ಯಾಂಕ್ ಖಾತೆಗಳಿಗೆ ನಿಯಮಿತವಾಗಿ ಕೂಲಿ ಹಣ ಜಮೆಯಾಗುವಂತೆ ನೋಡಿಕೊಳ್ಳಬೇಕು. ಒಮ್ಮೆ ಕಾರ್ಮಿಕರ ಖಾತೆಗೆ ಹಣ ನೇರವಾಗಿ ಜಮೆಯಾದರೆ, ಯೋಜನೆಯ ಬಗ್ಗೆ ಅವರಲ್ಲಿ ನಂಬಿಕೆ ಮತ್ತು ಆಸಕ್ತಿ ಹೆಚ್ಚಾಗುತ್ತದೆ. ಹಾಗಾಗಿ, ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ, ಯಾವುದೇ ರೀತಿಯ ಲೋಪದೋಷಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಹಣಕಾಸಿನ ಕೊರತೆಯಿಲ್ಲ

‘ವಿ ಬಿ – ಜಿ ರಾಮ್ ಜಿ’ ಯೋಜನೆಗೆ ಅನುದಾನದ ಕೊರತೆಯಿಲ್ಲ. ಈಗಾಗಲೇ ಜಿಲ್ಲಾ ಪಂಚಾಯಿತಿಗಳಿಗೆ ರೂ.1,000 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ರೂ.1,200 ಕೋಟಿ ಹಾಗೂ ಕೇಂದ್ರ ಸರ್ಕಾರ ರೂ.1,700 ಕೋಟಿ ಅನುದಾನ ಒದಗಿಸಿದೆ. ಯೋಜನೆ ಅನುಷ್ಠಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು, ಕೇವಲ ದಾಖಲೆಗಳಲ್ಲಿ ಕೆಲಸ ತೋರಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಕೇವಲ ಮೇಲಧಿಕಾರಿಗಳಷ್ಟೇ ಅಲ್ಲದೆ, ತಾಂತ್ರಿಕ ಸೂಪರ್‌ವೈಸರ್‌ಗಳು, ಇಒ ಹಾಗೂ ಐಇಸಿ ಸಂಯೋಜಕರು ಸಹ ಕ್ಷೇತ್ರಮಟ್ಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೆಲಸ ನಿರ್ವಹಿಸಬೇಕು. ಪ್ರತಿಯೊಬ್ಬ ಅರ್ಹ ಕಾರ್ಮಿಕನಿಗೂ ಸಮಯಕ್ಕೆ ಸರಿಯಾಗಿ ಕೂಲಿ ಸಿಗುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ಹಣದ ಸರಿಯಾದ ಬಳಕೆ ಹಾಗೂ ಪಾರದರ್ಶಕ ಆಡಳಿತಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಎಂದು ಸಚಿವರು ನಿರ್ದೇಶನ ನೀಡಿದರು.

ನೀರಾವರಿ ಕಾಲುವೆ ಹಾಗೂ ಫೀಲ್ಡ್ ಚಾನೆಲ್ ನಿರ್ಮಾಣ

ಮುಖ್ಯ ನೀರಾವರಿ ಕಾಲುವೆಗಳಿಂದ ಕೊನೆಯ ಹಂತದ ರೈತರ ಜಮೀನುಗಳಿಗೆ ನೀರು ತಲುಪಿಸಲು ಅಗತ್ಯವಿರುವ ‘ಫೀಲ್ಡ್ ಚಾನೆಲ್’ ಹಾಗೂ ಎಫ್‌ಐಸಿ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಸಣ್ಣ ನೀರಾವರಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನೀರು ಪೋಲಾಗದಂತೆ ರೈತರ ಹೊಲಗಳಿಗೆ ತಲುಪಿಸುವ ಕಾಮಗಾರಿಗಳನ್ನು ಪ್ರಥಮ ಆದ್ಯತೆಯಲ್ಲಿ ಹಮ್ಮಿಕೊಳ್ಳಲು ನಿರ್ದೇಶನ ನೀಡಿದರು.

24 ಗಂಟೆಗಳಲ್ಲಿ ಜಾಬ್ ಕಾರ್ಡ್ ವಿತರಣೆ

ಸಾರ್ವಜನಿಕರು ಅಥವಾ ಕೂಲಿ ಕಾರ್ಮಿಕರು ನರೇಗಾ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದರೆ ಅಥವಾ ಜಾಬ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ನಡೆಸಿ 24 ಗಂಟೆಗಳ ಒಳಗೆ ಜಾಬ್ ಕಾರ್ಡ್ ವಿತರಿಸಬೇಕು. ಉದ್ಯೋಗ ಬೇಡಿಕೆ ಸಲ್ಲಿಸಿದರೂ ಕೆಲಸ ಸಿಗಲಿಲ್ಲ ಅಥವಾ ಜಾಬ್ ಕಾರ್ಡ್ ನೀಡುವಲ್ಲಿ ಅನಗತ್ಯ ವಿಳಂಬವಾಯಿತು ಎಂಬ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದರು.

ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ಕಲುಷಿತ ಮುಕ್ತ ಹಾಗೂ ಶುದ್ಧ ಕುಡಿಯುವ ನೀರನ್ನು ತಲುಪಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದ್ದು, ಕಾಮಗಾರಿಗಳಲ್ಲಿ ಯಾವುದೇ ರೀತಿಯ ವಿಳಂಬ ಹಾಗೂ ಅಸಡ್ಡೆಯನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಲಜೀವನ್ ಮಿಷನ್ ಕಾಮಗಾರಿಗಾಗಿ ತೋಡಲಾದ ರಸ್ತೆಗಳನ್ನು ಸರಿಯಾಗಿ ಮರುನಿರ್ಮಾಣ ಮಾಡಿಲ್ಲ. ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡ ತಕ್ಷಣ ರಸ್ತೆಗಳನ್ನು ಹಳೆಯ ಸ್ಥಿತಿಗೆ ತರುವುದು ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ಜವಾಬ್ದಾರಿಯಾಗಿದೆ ಎಂದು ತಿಳಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಜಂಟಿಯಾಗಿ ಕಾರ್ಯನಿರ್ವಹಿಸಿ, ಜಲಜೀವನ್ ಮಿಷನ್ ಯೋಜನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದ ಅವರು, ತೆರಿಗೆ ಸಂಗ್ರಹದಲ್ಲಿ ವೇಗ ನೀಡಬೇಕು. ಜಿಲ್ಲೆಯ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಳ ಪುಸ್ತಕ ದಾಸ್ತಾನು, ನಿರ್ವಹಣೆ, ಡಿಜಿಟಲ್ ಸೌಲಭ್ಯ ಒದಗಿಸುವಂತೆ ತಿಳಿಸಿದರು.

ಮನೆ-ಮನೆಗೆ ತೆರಳಿ ಇ-ಸ್ವತ್ತು ವಿತರಣೆ:

ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚುವರಿ ಶ್ರಮ ವಹಿಸಿ ಮನೆ-ಮನೆಗೆ ತೆರಳಿ ಸ್ವತ್ತುಗಳ ಇ-ಸ್ವತ್ತು ಮತ್ತು ಖಾತಾ ದಾಖಲೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಡ್ರಾಫ್ಟ್ ಖಾತಾ ತಯಾರಾಗಿದ್ದು, ಯಾವುದೇ ಅನಗತ್ಯ ವ್ಯಕ್ತಿಗಳಿಗೆ ಅಥವಾ ಮೂರನೇ ವ್ಯಕ್ತಿಗಳಿಗೆ ಖಾತಾ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಯಾರು ಮೂಲ ಮಾಲೀಕರಿದ್ದಾರೋ ಅವರಿಗೆ ಮಾತ್ರವೇ ಖಾತೆಗಳನ್ನು ನೀಡಬೇಕು ಎಂದು ತಿಳಿಸಿದರು..

Join WhatsApp

Join Now

Join Telegram

Join Now