ನಮ್ಮ ದೇಹದಲ್ಲಿರುವ ಪ್ರಮುಖ ಅಂಗಗಳಲ್ಲಿ ಕಿಡ್ನಿಯೂ ಒಂದು. ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ದೇಹದಲ್ಲಿರುವ ತ್ಯಾಜ್ಯ ಹಾಗೂ ಹೆಚ್ಚುವರಿ ದ್ರವವನ್ನು ಮೂತ್ರದ ಮೂಲಕ ಹೊರಹಾಕುವಲ್ಲಿ ಕಿಡ್ನಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳಲು ಆಹಾರದ ಬಗ್ಗೆಯೂ ಹೆಚ್ಚಿನ ಗಮನ ನೀಡುವುದು ಅಗತ್ಯ.
ಕೆಲವು ಪೌಷ್ಟಿಕ ಆಹಾರಗಳು ಕಿಡ್ನಿಯ ಸಾಮಾನ್ಯ ಕಾರ್ಯನಿರ್ವಹಣೆಗೆ ಬೆಂಬಲ ನೀಡಬಹುದು. ತಜ್ಞರು ಸೂಚಿಸಿರುವ ಅಂತಹ 3 ಆಹಾರಗಳ ಮಾಹಿತಿ ಇಲ್ಲಿದೆ.
ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪ್ರಮುಖ ಸಂಯುಕ್ತದ ಜೊತೆಗೆ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿವೆ. ಇವು ದೇಹದಲ್ಲಿ ಉಂಟಾಗುವ ಉರಿಯೂತದ ವಿರುದ್ಧ ಹೋರಾಡಲು ಸಹಕಾರಿಯಾಗಬಹುದು.
ಇದರಲ್ಲಿರುವ ಸೋಡಿಯಂ, ಪೊಟ್ಯಾಸಿಯಂ ಮತ್ತು ಫಾಸ್ಫರಸ್ ಪ್ರಮಾಣವೂ ಕಡಿಮೆಯಾಗಿರುವುದರಿಂದ ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರಿಗೆ ಬೆಳ್ಳುಳ್ಳಿ ಉಪಯುಕ್ತ ಆಹಾರವಾಗಬಹುದು ಎಂದು ತಜ್ಞರು ಸೂಚಿಸುತ್ತಾರೆ.
ಸೇಬು
ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರಿನಂಶವಿದೆ. ಇದು ದೇಹದ ಜೀರ್ಣಕ್ರಿಯೆಗೆ ನೆರವಾಗುವುದರ ಜೊತೆಗೆ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡಬಹುದು.
ನಿಯಮಿತವಾಗಿ ಸೇಬು ಸೇವಿಸುವುದರಿಂದ ಕಿಡ್ನಿಗಳ ಮೇಲಿನ ಒತ್ತಡ ಕಡಿಮೆಯಾಗಲು ಸಹಕಾರಿಯಾಗಬಹುದು. ಅಲ್ಲದೆ ಕಿಡ್ನಿ ಕಲ್ಲುಗಳು ಹಾಗೂ ಮೂತ್ರನಾಳದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹ ಸೇಬು ಸಹಾಯಕವಾಗಬಹುದು ಎಂದು ವರದಿ ತಿಳಿಸಿದೆ.
ಕಲ್ಲಂಗಡಿ
ಕಲ್ಲಂಗಡಿಯಲ್ಲಿ ಸುಮಾರು 92% ನೀರಿನ ಅಂಶ ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿಡಲು ಇದು ಸಹಕಾರಿಯಾಗಿದೆ. ಸಾಕಷ್ಟು ದ್ರವಾಂಶ ದೊರೆಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗಿ, ದೇಹದಿಂದ ತ್ಯಾಜ್ಯ ಹೊರಹಾಕುವ ಪ್ರಕ್ರಿಯೆಗೆ ನೆರವಾಗಬಹುದು.
ಕಲ್ಲಂಗಡಿಯಲ್ಲಿ ಲೈಕೋಪೀನ್ ಸೇರಿದಂತೆ ಹಲವು ಪೋಷಕಾಂಶಗಳಿವೆ. ಆದರೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ಅಥವಾ ಗಂಭೀರ ಕಿಡ್ನಿ ಸಮಸ್ಯೆ ಹೊಂದಿರುವವರು ಪೊಟ್ಯಾಸಿಯಂ ಇರುವ ಆಹಾರಗಳನ್ನು ವೈದ್ಯರ ಸಲಹೆಯಂತೆ ಮಾತ್ರ ಸೇವಿಸಬೇಕು.
ಕಿಡ್ನಿ ಆರೋಗ್ಯಕ್ಕೆ ಮುಖ್ಯವಾದ ಎಚ್ಚರಿಕೆ
ಈ ಆಹಾರಗಳು ಕಿಡ್ನಿಯ ಆರೋಗ್ಯವನ್ನು ಬೆಂಬಲಿಸುವ ಆಹಾರಗಳಾಗಿವೆ. ಆದರೆ ಇವುಗಳನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಪರಿಗಣಿಸಬಾರದು. ಈಗಾಗಲೇ ಕಿಡ್ನಿ ಕಾಯಿಲೆ, ಕಿಡ್ನಿ ಕಲ್ಲು ಅಥವಾ ಇತರ ಮೂತ್ರಪಿಂಡ ಸಮಸ್ಯೆ ಇರುವವರು ಆಹಾರದಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.












