ಕೊಪ್ಪಳ.ಜುಲೈ.04:ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಜರುಗಿದೆ. ಇಲ್ಲಿನ ಪ್ರಶಾಂತನಗರದ ನಿವಾಸದಲ್ಲಿ ಈ ಸಾಮೂಹಿಕ ಆತ್ಮಹತ್ಯೆ ನಡೆದಿದ್ದು ಇಡೀ ನಗರವನ್ನು ದಿಗ್ಭ್ರಮೆಗೊಳಿಸಿದೆ.
ಚಿನ್ನದ ಆಭರಣಗಳ ವ್ಯಾಪಾರ ಮಾಡುತ್ತಿದ್ದ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ (46) ಹಾಗೂ 21 ವರ್ಷದ ಮಗ ಶಶಾಂಕ್ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮೃತ ಪ್ರಕಾಶ್ ಅವರು ಜ್ಯುವೆಲ್ಲರಿ ಶಾಪ್ ನಡೆಸುತ್ತಿದ್ದು, ವ್ಯವಹಾರದಲ್ಲಿ ಉಂಟಾಗಿದ್ದ ತೀವ್ರ ಸಾಲದ ಹೊರೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.


















