ತಲೆನೋವು, ಜ್ವರ, ಅಸಿಡಿಟಿ ಅಥವಾ ಮೈಕೈ ನೋವಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸದೆ, ಮೆಡಿಕಲ್ ಶಾಪ್ ಗಳಿಂದ ತಾವೇ ಸ್ವತಃ ಮಾತ್ರೆಗಳನ್ನು ಖರೀದಿಸಿ ಸೇವಿಸುವ ಅಭ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರೆ, ಈ ರೀತಿಯ ಸ್ವಯಂ ವೈದ್ಯ ತಾತ್ಕಾಲಿಕವಾಗಿ ಉಪಶಮನ ನೀಡಿದರೂ, ದೀರ್ಘಾವಧಿಯಲ್ಲಿ ಜೀವಕ್ಕೆ ಕಂಟಕ ತರಬಹುದು ಎಂದು ವೈದ್ಯಕೀಯ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಯಾವುದೇ ಕಾಯಿಲೆಗೆ ವೈದ್ಯರು ಸೂಕ್ತ ತಪಾಸಣೆ ನಡೆಸಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತ್ರೆಗಳನ್ನು ಶಿಫಾರಸು ಮಾಡುತ್ತಾರೆ. ಆದರೆ, ಅನಾರೋಗ್ಯದ ಮೂಲ ಕಾರಣ ತಿಳಿಯದೆ ಪದೇ ಪದೇ ಸ್ವಯಂ ಮಾತ್ರೆಗಳನ್ನು ಸೇವಿಸುವುದರಿಂದ ರೋಗದ ಲಕ್ಷಣಗಳು ತಾತ್ಕಾಲಿಕವಾಗಿ ಮರೆಯಾಗಬಹುದು. ಆದರೆ ಮೂಲ ಕಾಯಿಲೆ ಹಾಗೆಯೇ ಮುಂದುವರಿದು, ಭವಿಷ್ಯದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡುತ್ತದೆ. ಇದರಿಂದ ಗಂಭೀರ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ.
ಅಡ್ಡಪರಿಣಾಮಗಳ ಅಪಾಯ:
ಈಗಾಗಲೇ ಬೇರೆ ಆರೋಗ್ಯ ಸಮಸ್ಯೆಗಳಿಗೆ ಮುತ್ತುಗಳನ್ನು ತೆಗೆದುಕೊಳ್ಳುತ್ತಿರುವವರು, ವೈದ್ಯರ ಸಲಹೆಯಿಲ್ಲದೆ ಹೊಸ ಮಾತ್ರೆಗಳನ್ನು ಸೇವಿಸಿದಾಗ ಔಷಧಗಳ ನಡುವೆ ಪರಸ್ಪರ ಕ್ರಿಯೆ (Drug Interactions) ನಡೆಯುವ ಸಾಧ್ಯತೆ ಇರುತ್ತದೆ. ಇದು ತೀವ್ರ ಅಲರ್ಜಿ, ಲಿವರ್ (ಯಕೃತ್ತು) ಅಥವಾ ಕಿಡ್ನಿ (ಮೂತ್ರಪಿಂಡ) ವೈಫಲ್ಯದಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವುದೇ ವೈದ್ಯರನ್ನು ಭೇಟಿಯಾಗುವಾಗ ತಾವು ಈಗಾಗಲೇ ಬಳಸುತ್ತಿರುವ ವಿಟಮಿನ್, ಆಯುರ್ವೇದ ಅಥವಾ ಇತರ ಮಾತ್ರೆಗಳ ವಿವರಗಳನ್ನು ತಿಳಿಸುವುದು ಅತ್ಯಗತ್ಯ.
ಆಂಟಿಬಯೋಟಿಕ್ಸ್ ದುರ್ಬಳಕೆ ಅತ್ಯಂತ ಅಪಾಯಕಾರಿ:
ಸಾಮಾನ್ಯ ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಅನೇಕರು ಸ್ವಯಂ ನಿರ್ಧಾರದಿಂದ ಆಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್ಸ್ ಬಳಸುವುದು ಅಥವಾ ವೈದ್ಯರು ಸೂಚಿಸಿದ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸುವುದರಿಂದ ದೇಹದಲ್ಲಿ ‘ಆಂಟಿಬಯೋಟಿಕ್ ರೆಸಿಸ್ಟೆನ್ಸ್’ (Antibiotic Resistance) ಸೃಷ್ಟಿಯಾಗುತ್ತದೆ. ಅಂದರೆ, ಭವಿಷ್ಯದಲ್ಲಿ ದೇಹಕ್ಕೆ ಬರುವ ಗಂಭೀರ ಸೋಂಕುಗಳಿಗೆ ಆಂಟಿಬಯೋಟಿಕ್ ಮದ್ದುಗಳು ಸ್ಪಂದಿಸುವುದೇ ಇಲ್ಲ. ಇದು ಚಿಕಿತ್ಸೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ಸಣ್ಣಪುಟ್ಟ ಆರೋಗ್ಯ ಏರುಪೇರಾದಾಗ ತಕ್ಷಣವೇ ಮಾತ್ರೆಗಳ ಮೊರೆ ಹೋಗುವ ಬದಲು ಸೂಕ್ತ ವಿಶ್ರಾಂತಿ, ಉತ್ತಮ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ನಿಯಂತ್ರಣಕ್ಕೆ ತರಲು ಪ್ರಯತ್ನಿಸಬೇಕು. ಆದರೆ, ಆರೋಗ್ಯದ ಸಮಸ್ಯೆ ಪದೇ ಪದೇ ಮರುಕಳಿಸುತ್ತಿದ್ದರೆ, ನೋವು ತೀವ್ರವಾಗಿದ್ದರೆ ಅಥವಾ ದಿನ ಕಳೆದರೂ ಗುಣವಾಗದಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಕಡ್ಡಾಯವಾಗಿದೆ. ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.



















