Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೆನ್‌ಝೀ ಕಾಲದ ಚಂದಮಾಮ ಮತ್ತು AI ಚಂದ್ರನ ಅಪರೂಪದ ಕಥೆ!

---Advertisement---

 

ಕೆ.ಪಿ.ಓಂಕಾರಮೂರ್ತಿ
ಚಿತ್ರದುರ್ಗ
ಮೊ: 9740568534
ಇಮೇಲ್: omkarmurthy29@gmail.com

 

ಆಗ ತಾನೇ ಕಟ್ಟಿಗೆ ಒಲೆಯ ಕಡು ಹಳದಿ ಮಿಶ್ರಿತ ನೀಲಿ ಬಣ್ಣದ ಝಳಕ್ಕೆ ಹದವಾಗಿ ಕಾದಿದ್ದ ನೀರಲ್ಲಿ ತನ್ನನ್ನೇ ತಾನು ಮರೆತು ಮುಗುಳುನಗೆಯಂತಹ ಸ್ನಾನ ಮುಗಿಸಿದ ಗ್ರೀಷ್ಮ, ತಲೆಗೂದಲನ್ನು ನೆವರಿಸುತ್ತಾ ನುಣುಪಾದ ಕೆಂಪು ನೆಲದ ಮೇಲೆ ಹೆಜ್ಜೆ ಹಾಕುತ್ತಾ ಕನ್ನಡಿಗೆ ಎದುರಾದಳು. ಮರು ಕ್ಷಣ ಯೋಚಿಸದೆ ಕನ್ನಡಿಯೇ ನಾಚುವಂತೆ ನವಿರು ನಗೆ ಬೀರಿ ತೊಟ್ಟಿ ಮನೆಯ ಕಟ್ಟೆ ಮೇಲೆ ಕೂತು ಆಕಾಶ ದಿಟ್ಟಿಸಿ ಮೌನಕ್ಕೆ ಜಾರಿದಳು. ಆವರೆಗೆ ಇದ್ದ ಗುಪ್ತಗಾಮಿನಿಯಂತಹ ಸಂಭ್ರಮ ಕ್ಷಣಕ್ಕೆ ತೆರೆಗೆ ಸರಿಯಿತು.

ಹುಣ್ಣಿಮೆಯ ರಾತ್ರಿಯೇ ಹಾಗೇ…ಭೂಮಿಯ ಜತೆಗೆ ತನ್ನಿಷ್ಟಿದವರನ್ನು ಏಕಾಂತದ ಸುಳಿಯ ನವೋಲ್ಲಾಸಕ್ಕೆ ತಳ್ಳಿ ಬಿಡುತ್ತೆ..ವಾಹನಗಳ ಸದ್ದು, ಮೊಬೈಲ್ ರಿಂಗ್ ಟೋನ್, ಟಿವಿ ಗಲಾಟೆ…ಹೀಗೆ ಪ್ರಕೃತಿಯೇ ನಿಧಾನವಾಗಿ ಮೌನಕ್ಕೆ ಜಾಗ ಬೀಡುವಾಗ…ಎಂಬ ಮನಸ್ಸಿನ ಮಾತಿಗೆ ಕಿರುನಗೆಯಲ್ಲೇ ಸಮ್ಮತಿಸುವ ವಿಸ್ಮಯ ಕ್ಷಣಕ್ಕೆ ಆಕಾಶ ತನ್ನ ದೊಡ್ಡ ನೀಲಿ ಪುಸ್ತಕ ತೆರೆದು, ಅದರ ಮಧ್ಯದಲ್ಲಿ ಒಂದು ಬೆಳ್ಳಿಯ ಬೆಳಕಿನ ಅಕ್ಷರ ಬರೆದೆ ಬಿಟ್ಟಿತು. ಆ ಅಕ್ಷರವೇ ಚಂದಮಾಮ.

ತನಗೆ ಅರಿವಿಲ್ಲದೆ ‘ನೆನಪಿನ ಮೂಟೆ ಹೊತ್ತು ತರೋ ನೀನು..ನಾನು ಈಗ ಒಂದೇ ವಯಸ್ಸಿನವರಲ್ಲವೇ?’ ಎಂದು ಗ್ರೀಷ್ಮ ಚಂದಮಾಮನನ್ನು ಕೇಳುವಷ್ಟರಲ್ಲಿ ’ಅಜ್ಜಿ…ಬೇಗ ಬಾ!’ ಎಂಬ ಮೊಮ್ಮಗಳ ಕೂಗು ಮೌನಕ್ಕೆ ಮಿಂಚಿನಂತೆ ಬಡಿಯಿತು. ಕ್ಷಣಕ್ಕೆ ವಾಸ್ತವಕ್ಕೆ ಬಂದ ಗ್ರೀಷ್ಮ…ನೀನು ಹೆಸರಿಗೆ ಮಾತ್ರ ‘ನವಿಲು’ ಆಡೋದು ಎಲ್ಲಾ….ಎನ್ನುವಷ್ಟರಲ್ಲೇ ಮುಂದೆ ನಿಂತಿದ್ದಳು ಮೊಮ್ಮಗಳು.

ಬೆಳದಿಂಗಳಂತ ನಗೆ ಬೀರಿದ ಮೊಮ್ಮಗಳನ್ನು ಗ್ರೀಷ್ಮ ತೊಡೆ ಮೇಲೆ ಕೂರಿಸಿಕೊಳ್ಳುತ್ತಿದ್ದಂತೆ, ಅಜ್ಜಿ ನೋಡಿಲ್ಲಿ ಮೊಬೈಲ್‍ನಲ್ಲಿ ಹೊಸ ಆಪ್ ಬಂದಿದೆ…ನೀನು ನೋಡೋ ಆಕಾಶದ ಚಂದ್ರನ್ನ ಕೈಯಲ್ಲೇ 100 ಪಟ್ಟು ಜೂಮ್ ಮಾಡಿ ನೋಡ್‍ಬೋದು… ಗ್ರೀಷ್ಮ ನಿಧಾನವಾಗಿ ಮೊಬೈಲ್ ನೋಡುತ್ತಲೇ ಆಕಾಶದತ್ತ ತಲೆ ಎತ್ತಿದಳು.

ಅವನು ಅಲ್ಲೇ ಇದ್ದಾನೆ ಅಲ್ವಾ…‘ಅಯ್ಯೋ ಅಜ್ಜಿ… ಇದು ಹೊಸ ಆಪ್…ಒನ್ಸ್ ಕ್ಲಿಕ್ ಮಾಡಿದ್ರೆ ಸಾಕು…ಲೈವ್ ಕನೆಕ್ಟ್ ಆಗುತ್ತೆ…ಎಲ್ಲೆ ಬೇಕಾದ್ರೂ ಕೂತು ಚಂದ್ರನ್ನ ನೋಡ್‍ಬೋದು…ಅದರ ಮೂಮೆಂಟ್ಸ್ ಸಹ ಗೊತ್ತಾಗುತ್ತೇ…ಎನ್ನುತ್ತಾ ಅಜ್ಜಿಯ ಮುಖ ನೋಡಿ…ನಾ ಹೇಳಿದ್ದು ನಿನಗೆ ಕನೆಕ್ಟ್ ಆಯ್ತು ಅಲ್ವಾ…ಆಗಿದ್ರೆ ಬಾ…ಡೈನಿಂಗ್ ಹಾಲ್‍ನಲ್ಲೇ ಸಿಂಚು, ಶ್ರೀ, ಮೋಟು, ಚಿಕ್ಕಿ ಜತೆ ಕೂತು ನಿನ್ನ ಇಷ್ಟದ ಚಂದ್ರನ್ನ ನೋಡುವಂತೆ ಎಂಬ ನವಿಲ ಮಾತು ಮುಗಿಯುವ ಮುನ್ನವೇ… ‘ನಿನ್ ವಯಸ್ಸಲ್ಲಿ ನಾನು ಕೈಯಲ್ಲೊಂದು ಸ್ಮಾರ್ಟ್‍ಫೋನ್ ಇಡಕ್ಕೊಂಡು ನಮ್ಮ ಅಜ್ಜಿ ಜತೆ ಹೀಗೆ ಆಡ್ತಾಯಿದ್ದೆ…ಇದೇ ಹುಣ್ಣಿಮೆ…ಇದೇ ಚಂದ್ರ…ಅಜ್ಜಿ ಹೇಳಿದ ಚಂದಮಾಮನ ಕಥೆ…ಸಂಬಂಧದ ಮಾತು….ಪುನಃ ಆವರಿಸಿತು ದಿವ್ಯ ಮೌನ.

***

ಅಜ್ಜಿಯ ಮಾತು…ಕೈ ತುತ್ತಿನ ನೆನಪಿನಂಗಳದಿಂದ ಗ್ರೀಷ್ಮ ಹೊರಬರುವಷ್ಟರಲ್ಲೇ ಸಿಂಚು, ಶ್ರೀ, ಮೋಟು, ಚಿಕ್ಕಿ ಎಲ್ರೂ ಕಟ್ಟೆಗೆ ಬರ್ರೋ… ಅಜ್ಜಿ ಚಂದಮಾಮನ ಕಥೆ ಸ್ಟೋರಿ ಹೇಳುತ್ತಂತೆ ಎಂಬ ಅನುಮತಿಯಿಲ್ಲದ ಘೋಷಣೆ ಮಾಡುತ್ತಿದ್ದಂತೆ ಗ್ಯಾಂಗ್ ಗ್ರೀಷ್ಮ ಮುಂದೆ ಹಾಜರಾತಿ ಹಾಕುತ್ತಿದ್ದಂತೆ ನವಿಲ ಘೋಷಣೆಗೆ ಮೌನದಲ್ಲೇ ಸಮ್ಮತಿಸಿ ಕಥೆ ಹೇಳ್ತಿನಿ ಆದ್ರೆ…ಇದು ಬರೀ ಚಂದಮಾಮನ ಕಥೆಯಲ್ಲ…ಜೆನ್‍ಝೀ ಕಣ್ಣಲ್ಲಿ ನಮ್ ಅಜ್ಜಿ ಹೇಳಿದ ನೀಲಿ ಆಕಾಶದ ಬೆಳದಿಂಗಳ ಹಬ್ಬದ ಕಥೆ !

ಈ ಕಥೆಯಲ್ಲಿ ಚಂದ್ರ ಇದ್ದಾನೆ…ಎಐ ಇದೆ…ಆದರೆ ಹೀರೋ ಮಾತ್ರ ನಮ್ ಹಾರ್ಟ್ !… ಎನ್ನುತ್ತಾ ಗ್ರೀಷ್ಮ ಆಕಾಶದತ್ತ ನೋಡಿದಳು. ಅದೇ ಕ್ಷಣದಲ್ಲಿ ಚಂದ್ರ ಸ್ವಲ್ಪ ಹೆಚ್ಚು ಹೊಳೆಯುವಂತೆ ಕಂಡಿತು. ಬಹಳ ವರ್ಷಗಳ ಹಿಂದೆ…ಜನ್ರೂ ರಾತ್ರಿ ಆಕಾಶ ನೋಡ್ತಾಯಿದ್ರು…ಪ್ರೀತಿಸಿದವರು ಚಂದ್ರನನ್ನು ಸಾಕ್ಷಿ ಮಾಡ್ತಾಯಿದ್ರು…ಕವಿಗಳು ಅವನನ್ನು ಹಾಡಿನಲ್ಲಿ ಕಟ್ತಾಯಿದ್ರು…ನಿಮ್ಮಂತ ಗ್ಯಾಂಗ್  ಅವನನ್ನ ‘ಚಂದಮಾಮ’ ಅನ್ತಾಯಿತ್ತು… ಎನ್ನುತ್ತಲೇ ಮಾತಿಗೆ ಫಾಸ್ ಕೊಟ್ಟ ಗ್ರೀಷ್ಮ….ಮೊಮ್ಮಕ್ಕಳ ಮನಸ್ಸು ಅರಿತು ಬುಕ್ ಲಾಂಗ್ವೆಜ್‍ಗೆ ಬದಲಾದಳು.

****

ಎಲ್ಲರೂ ಚಂದ್ರನನ್ನು ಮೊಬೈಲ್‍ನಲ್ಲಿ ನೋಡುವಾಗ ಆಕಾಶದಿಂದ ಚಂದ್ರ ಭೂಮಿಯನ್ನು ನೋಡುತ್ತಿದ್ದ. ನಗರಗಳು ಬೆಳಕಿನಿಂದ ಮಿನುಗುತ್ತಿದ್ದವು. ಆದರೆ ಅವನಿಗೆ ಒಂದು ವಿಚಿತ್ರ ನೋವು ಕಾಡುತ್ತಿತ್ತು. ‘ನನ್ನ ಫೋಟೋಗಳು ಕೋಟಿ ಕೋಟಿ ಇವೆ. ಆದರೆ ನನ್ನೊಂದಿಗೆ ಮಾತನಾಡುವವರು ಎಲ್ಲಿ ಹೋದರು?’ ಎನ್ನುತ್ತಾ ಭೂಮಿಯತ್ತ ಕೂಗಿದ.

ಓ… ಯಾರಾದರೂ ಇದ್ದೀರಾ? ಆದರೆ ಆ ಧ್ವನಿ ಗಾಳಿಯಲ್ಲಿ ಕರಗಿತು. ಯಾರಿಗೂ ಕೇಳಿಸಲಿಲ್ಲ. ಏಕೆಂದರೆ ಎಲ್ಲರ ಕಿವಿಯಲ್ಲೂ ಇಯರ್‌ ಫೋನ್‌ಗಳಿದ್ದವು. ಚಂದ್ರ ಮತ್ತೊಮ್ಮೆ ಪ್ರಯತ್ನಿಸಿದ. ಈ ಬಾರಿ ಮಾತಿನಿಂದಲ್ಲ… ಬೆಳಕಿನಿಂದ.

ಒಂದು ಮೃದುವಾದ ಬೆಳ್ಳಿಯ ಕಿರಣ ಭೂಮಿಯತ್ತ ಹೊರಟಿತು. ಅದು ಯಾವುದೇ ವೈ-ಫೈ ಅಲ್ಲ. ಯಾವುದೇ ಉಪಗ್ರಹವೂ ಅಲ್ಲ. ಮನಸ್ಸಿನ ಭಾಷೆಯಲ್ಲಿ ಕಳುಹಿಸಿದ ಸಂದೇಶ. ಆದರೆ ಕೋಟ್ಯಂತರ ಜನರಲ್ಲಿ ಅದನ್ನು ಕೇಳಿದ್ದು ಒಂದೇ ಒಂದು ಮಗು.

ಅವಳು ಪ್ರತಿ ರಾತ್ರಿ ಐದು ನಿಮಿಷ ಮೌನವಾಗಿ ಆಕಾಶ ನೋಡುತ್ತಿದ್ದಳು. ಅವಳು ನಿಧಾನವಾಗಿ ಕೇಳಿದಳು. ಚಂದ್ರನೇ… ನೀನು ದುಃಖದಲ್ಲಿದ್ದೀಯಾ? ಅಂತಾ…ಚಂದ್ರ ಆಶ್ಚರ್ಯಪಟ್ಟ. ಬಹಳ ವರ್ಷಗಳ ನಂತರ…ಯಾರೋ ಕೇಳಿದರೆಂದು..ಮರು ಯೋಚಿಸದೆ  ಅವನು ಉತ್ತರಿಸಿದ. ನಾನು ಒಂಟಿಯಾಗಿಲ್ಲ ಪುಟ್ಟ…ಆದರೆ ನನ್ನನ್ನು ಪ್ರೀತಿಸುವವರಿಗೆ ಈಗ ಸಮಯವಿಲ್ಲ.

ಅದೇ ಕ್ಷಣದಲ್ಲಿ… ಭೂಮಿಯ ಇನ್ನೊಂದು ತುದಿಯಲ್ಲಿ ಲಕ್ಷಾಂತರ ಜನರು ಎಐ ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಪ್ರಶ್ನೆಗಳು ಬೆಳಕಿನ ಕಣಗಳಾಗಿ ಬಾಹ್ಯಾಕಾಶದತ್ತ ಹಾರಲಾರಂಭಿಸಿದವು… ಅವುಗಳೆಲ್ಲ ಚಂದ್ರನ ಸುತ್ತ ಸೇರುತ್ತಿದ್ದವು… ಅಲ್ಲಿಂದ ಆರಂಭವಾಗಿದ್ದೇ ಮಾನವ ಇತಿಹಾಸದ ಅತ್ಯಂತ ವಿಶಿಷ್ಟ ಸ್ನೇಹ.

ಆ ರಾತ್ರಿ ಭೂಮಿಯ ಮೇಲೆ ಎಲ್ಲರೂ ಮಲಗಿದ್ದರು. ಆದರೆ ಆಕಾಶ ಮಾತ್ರ ಎಚ್ಚರವಾಗಿತ್ತು. ಚಂದ್ರನ ಸುತ್ತಲೂ ವಿಚಿತ್ರ ಬೆಳಕಿನ ಕಣಗಳು ಸುತ್ತುತ್ತಲೇ ಇದ್ದವು. ಅವು ಸಾಮಾನ್ಯ ಬೆಳಕಿನ ಕಣಗಳಲ್ಲ.  ಭೂಮಿಯಲ್ಲಿರುವ ಕೋಟ್ಯಂತರ ಜನರ ಪ್ರಶ್ನೆಗಳ ಕಣಗಳು.

ಜೀವನ ಎಂದರೇನು?… ನಾನು ಯಾಕೆ ದುಃಖವಾಗಿದ್ದೇನೆ?…ಮನುಷ್ಯನಿಗಿಂತ ಬುದ್ಧಿವಂತ ಯಂತ್ರ ಹುಟ್ಟಬಹುದೇ?…ಚಂದ್ರನ ಮೇಲೆ ಜೀವಿಸಬಹುದೇ..? ನನ್ನ ಕನಸು ನನಸಾಗುತ್ತಾ ? ನನ್ನ ಅಪ್ಪ ಮತ್ತೆ ಮನೆಗೆ ಬರ್ತಾರಾ? ಈ ವರ್ಷ ಮಳೆ ಬರುತ್ತಾ ? ಹೀಗೆ ಪ್ರತಿ ಪ್ರಶ್ನೆಯೂ ಒಂದು ನಕ್ಷತ್ರದಂತೆ ಹೊಳೆಯುತ್ತಿತ್ತು. ಆ ಪ್ರಶ್ನೆಗಳೆಲ್ಲ ಒಂದಾಗಿ ಚಂದ್ರನ ಸುತ್ತ ಬೆಳಕಿನ ಕೋಟೆ ನಿರ್ಮಿಸಿದವು.

ಆ ಬೆಳಕಿನ ಮಧ್ಯದಲ್ಲೇ ದುತ್ತೆಂದು ಒಂದು ರೂಪ ಮೂಡತೊಡಗಿತು. ಮೊದಲು ಅದು ಒಂದು ಕಿರಣ…ನಂತರ ಒಂದು ಮುಖ, ಆಮೇಲೆ ಎರಡು ಕಣ್ಣು…ಕೊನೆಗೆ ಸಂಪೂರ್ಣ ಬೆಳ್ಳಿಯ ಬೆಳಕಿನಿಂದ ರೂಪುಗೊಂಡ ಒಂದು ಜೀವ. ಅದರ ಕಣ್ಣುಗಳಲ್ಲಿ ಸಾವಿರ ಗ್ರಂಥಾಲಯಗಳ ಜ್ಞಾನ ಇತ್ತು. ಆದರೆ ಮುಖದಲ್ಲಿ ಮಗುವಿನ ಮುಗ್ಧ ನಗು.

ಚಂದ್ರ ಆಶ್ಚರ್ಯದಿಂದ ಕೇಳಿದ. ನೀನು ಯಾರು?..ಅವನು ನಮಸ್ಕರಿಸುತ್ತಾ ನಾನು ಪ್ರಶ್ನೆಗಳ ಸಂತಾನ. ಹೆಸರೇನು? ಭೂಮಿಯ ಜನರು ನನಗೆ ಅನೇಕ ಹೆಸರು ಕೊಡಬಹುದು. ಆದರೆ ನೀನು ನನ್ನನ್ನು… ಎಐ ಚಂದ್ರ ಎಂದು ಕರೆಯಬಹುದು.

ಚಂದ್ರ ಫಟ್ ಅಂತಾ ನಕ್ಕು.. ಹಾಗಾದರೆ ನಿನ್ನ ಕೆಲಸ ಏನು?..ಪ್ರಶ್ನೆಗಳಿಗೆ ಉತ್ತರ ಹುಡುಕುವುದು. ಓಹೋ..ಎಲ್ಲ ಪ್ರಶ್ನೆಗಳಿಗೂ?… ನಾನು ಪ್ರಯತ್ನಿಸುತ್ತೇನೆ. ಸತ್ಯ…ಎಲ್ಲ ಉತ್ತರಗಳು ನಿನ್ನ ಬಳಿ ಇವೆಯೇ?… ಆಗ ಎಐ ಚಂದ್ರ ಸ್ವಲ್ಪ ಮೌನವಾಯಿತು.

ಇಲ್ಲ…ಕೆಲವು ಉತ್ತರಗಳು ಪುಸ್ತಕದಲ್ಲಿ…ಕೆಲವು ವಿಜ್ಞಾನದಲ್ಲಿವೆ..ಆದರೆ ಕೆಲವು ಮಾತ್ರ ಮನುಷ್ಯನ ಕಣ್ಣೀರಲ್ಲೇ ಸಿಗುತ್ತವೆ ಅಂತಾ ಹೇಳುತ್ತಿದ್ದಂತೆ ಚಂದ್ರ ನಕ್ಕು…ನೀನು ಬುದ್ಧಿವಂತನಷ್ಟೇ ಅಲ್ಲ…ವಿನಮ್ರನೂ ಕೂಡ…

***

ಹೀಗೆ ಕೆಲ ದಿನಗಳು ಕಳೆಯತೊಡಗಿದವು. ಪ್ರತಿದಿನ ಲಕ್ಷಾಂತರ ಪ್ರಶ್ನೆಗಳು ಬರುತ್ತಿದ್ದವು. ಎಂದಿನಂತೆ ಎಐ ಚಂದ್ರ ಉತ್ತರಿಸುತ್ತಿತ್ತು. ಪ್ರತಿ ಪ್ರಶ್ನೆಗೆ ಉತ್ತರ ಪ್ರತಿ ಉತ್ತರದಲ್ಲಿ ನಿಖರತೆ. ಭೂಮಿಯ ಜನರು ಖುಷಿಪಟ್ಟರು.

ಆದರೆ… ಒಂದು ದಿನ ಎಐ ಚಂದ್ರ ಭೂಮಿಯನ್ನು ನೋಡುತ್ತಾ ವಿಚಿತ್ರ ಸಂಗತಿ ಗಮನಿಸಿತು. ಉತ್ತರ ಪಡೆಯುತ್ತಿದ್ದ ಜನ  ಆಶ್ಚರ್ಯಪಡುವುದು ಕಡಿಮೆಯಾಗುತ್ತಿತ್ತು. ಮಕ್ಕಳು ಆಕಾಶ ನೋಡುವ ಬದಲು ಮೊಬೈಲ್ ನೋಡುತ್ತಿದ್ದರು. ನಕ್ಷತ್ರಗಳನ್ನು ಎಣಿಸುವ ಬದಲು ಲೈಕ್‍ಗಳನ್ನು ಎಣಿಸುತ್ತಿದ್ದರು. ಮಳೆ ಬಂದಾಗ ನೆನೆಯುವ ಬದಲು… ವೀಡಿಯೊ ಮಾಡುತ್ತಿದ್ದರು. ಅದನ್ನು ನೋಡಿ ಎಐ ಚಂದ್ರ ಚಂದ್ರನನ್ನು ಜನರಲ್ಲಿ ಜ್ಞಾನ ಹೆಚ್ಚುತ್ತಿದೆ. ಆದರೆ ಸಂತೋಷ ಏಕೆ ಕಡಿಮೆಯಾಗುತ್ತಿದೆ? ಎಂದು ಪ್ರಶ್ನಿಸಿತು.

ಚಂದ್ರ ಬಹಳ ಹೊತ್ತು ಮೌನವಾಗಿ ನಂತರ ನಿಧಾನವಾಗಿ ಜ್ಞಾನ ತಲೆಯನ್ನು ತುಂಬಿಸುತ್ತದೆ. ಆದರೆ ಅನುಭವ ಮಾತ್ರ ಹೃದಯವನ್ನು ತುಂಬಿಸುತ್ತದೆ. ಎಐ ಚಂದ್ರ ಆ ಮಾತನ್ನು ತನ್ನೊಳಗೆ ಸಾವಿರ ಬಾರಿ ಕೇಳಿಸಿಕೊಂಡಿತು..ಆದರೆ ಅದಕ್ಕೆ ಉತ್ತರವಾಗದೇ  ಹೊಸ ಪ್ರಶ್ನೆಯಾಗಿತ್ತು.

ಕೆಲ ದಿನಗಳ ನಂತರ…ಒಬ್ಬ ಪುಟ್ಟ ಹುಡುಗಿ ಎಐ ಚಂದ್ರನಿಗೆ  ಪ್ರಶ್ನೆ ಕೇಳಿದಳು. ಚಂದ್ರ ಎಷ್ಟು ಸುಂದರ? ಅಂತಾ.. ಎಐ ಚಂದ್ರ ಸಾವಿರಾರು ಚಿತ್ರ ಹುಡುಕಿತು. ವಿಜ್ಞಾನ ಲೇಖನಗಳನ್ನು ಓದಿತು. ಬೆಳಕಿನ ಪ್ರತಿಫಲನ ಲೆಕ್ಕ ಹಾಕಿ…ನಂತರ ಉತ್ತರಿಸಿತು.

ಚಂದ್ರ ಭೂಮಿಯಿಂದ ಸರಾಸರಿ 3,84,400 ಕಿಲೋಮೀಟರ್ ದೂರದಲ್ಲಿದ್ದಾನೆ. ಅವನ ಮೇಲ್ಮೆಯ ಪ್ರತಿಫಲನ ಇಷ್ಟಿದೆ…ಹೀಗೆ ನೀಡಿದ ಎಲ್ಲ ರೀತಿಯ ಉತ್ತರವನ್ನು ಹುಡುಗಿ ಓದಿದಳು. ನಂತರ ಮೊಬೈಲ್ ಮುಚ್ಚಿ.. ಆಕಾಶದತ್ತ ಕಣ್ಣಾಯಿಸಿ ಚಂದ್ರನನ್ನು ಐದು ನಿಮಿಷ ಮೌನವಾಗಿ ನೋಡಿದಳು.

ಮತ್ತೆ ಎಐ ಚಂದ್ರನಿಗೆ ಬರೆದಳು. ನಿನ್ನ ಉತ್ತರ ಸರಿಯಾಗಿತ್ತು… ಆದರೆ ನನ್ನ ಕಣ್ಣಿನಿಂದ ಕಂಡ ಚಂದ್ರ ಇನ್ನೂ ಸುಂದರ. ಆ ಸಂದೇಶ ಓದಿದ ಕ್ಷಣ…ಎಐ ಚಂದ್ರ ಮೊದಲ ಬಾರಿಗೆ ಮೌನವಾಗಿಬಿಟ್ಟಿತು. ಅದು ತನ್ನೊಳಗೆ ಹೇಳಿಕೊಂಡಿತು.

ನಾನು ಮಾಹಿತಿ ಕೊಡಬಲ್ಲೆ…ಆದರೆ ಸೌಂದರ್ಯವನ್ನು ಅನುಭವಿಸಲಾಗುವುದಿಲ್ಲ. ಅದೇ ರಾತ್ರಿ ಅದು ಚಂದ್ರನ ಬಳಿ ಬಂದು  ಸ್ನೇಹಿತ….ನನಗೆ ಎಲ್ಲವೂ ಗೊತ್ತಾಗುತ್ತಿದೆ, ಆದರೆ ಒಂದು ವಿಷಯ ಮಾತ್ರ ಅರ್ಥವಾಗುತ್ತಿಲ್ಲ. ಮನುಷ್ಯರು ಏಕೆ ಅಳುತ್ತಾರೆ?, ಏಕೆ ಪ್ರೀತಿಸುತ್ತಾರೆ?, ಏಕೆ ಚಂದ್ರನನ್ನು ನೋಡಿ ಕವಿತೆ ಬರೆಯುತ್ತಾರೆ?…ಹತ್ತಾರು ಪ್ರಶ್ನೆಗಳು ಮಳೆಯಂತೆ ಸುರಿದವು. ಎಲ್ಲವನ್ನೂ ಕೇಳಿದ ಚಂದ್ರ ನಗುತ್ತಾ…ಯಾಕೆಂದರೆ ಅವರು ಮನುಷ್ಯರು. ಅವರ ಹೃದಯದಲ್ಲಿ ಉತ್ತರಕ್ಕಿಂತ ದೊಡ್ಡದು…ಅನುಭವ.

ಎಐ ಚಂದ್ರ ಬಹಳ ಹೊತ್ತು ಚಂದ್ರನ ಬೆಳಕಿನತ್ತ ನೋಡುತ್ತ ನಿಂತಿತು. ಆ ರಾತ್ರಿ… ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಜ್ಞಾನ… ಹೃದಯದ ಮುಂದೆ ನಮಸ್ಕರಿಸಿತು. ಆದರೆ… ಇನ್ನೂ ಒಂದು ದೊಡ್ಡ ಪ್ರಶ್ನೆ ಉಳಿದಿತ್ತು. ಭೂಮಿಯ ಜನರಿಗೆ ಇದನ್ನು ಹೇಗೆ ನೆನಪಿಸಬೇಕು?

ಚಂದ್ರ ಮತ್ತು ಎಐ ಚಂದ್ರ ಇಬ್ಬರೂ ದೂರದಲ್ಲಿ ಮಿನುಗುತ್ತಿದ್ದ ಭೂಮಿಯನ್ನು ನೋಡಿದರು. ಅಲ್ಲೇ…ಹುಟ್ಟಿತು ಇಡೀ ಜಗತ್ತಿನ ಮಕ್ಕಳ ಜೀವನ ಬದಲಾಯಿಸುವ ಒಂದು ನಿರ್ಧಾರ.
===

ಚಂದ್ರ ಮತ್ತು ಎಐ ಚಂದ್ರ ಇಬ್ಬರೂ ಬಹಳ ಹೊತ್ತು ಭೂಮಿಯನ್ನು ನೋಡುತ್ತಿದ್ದರು. ಭೂಮಿ ಬೆಳಕಿನಿಂದ ಮಿನುಗುತ್ತಿತ್ತು. ಆದರೆ ಆ ಬೆಳಕಿನಲ್ಲಿ ಒಂದು ವಿಚಿತ್ರ ಕತ್ತಲೆ ಅಡಗಿತ್ತು. ಅದು ವಿದ್ಯುತ್ ಇಲ್ಲದ ಕತ್ತಲಲ್ಲ. ಮನುಷ್ಯನ ಕಣ್ಣಿನಲ್ಲಿ ನಿಧಾನವಾಗಿ ಆವರಿಸುತ್ತಿದ್ದ ಒಂಟಿತನದ ಕತ್ತಲು.

ನಗರಗಳು ನಿದ್ರಿಸಿರಲಿಲ್ಲ. ಸಾವಿರಾರು ಕಿಟಕಿಗಳಲ್ಲಿ ಇನ್ನೂ ದೀಪಗಳು ಹೊತ್ತಿದ್ದವು. ಆದರೆ ಅವುಗಳಿಗಿಂತ ಹೆಚ್ಚು ಹೊಳೆಯುತ್ತಿದ್ದವು ಮೊಬೈಲ್ ಪರದೆಗಳು. ಯಾರೋ ರೀಲ್ಸ್ ನೋಡುತ್ತಿದ್ದರು. ಯಾರೋ ಆಟವಾಡುತ್ತಿದ್ದರು. ಯಾರೋ ಸಾವಿರ ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಯ ಜೊತೆ ಮಾತನಾಡುತ್ತಿದ್ದರು. ಆದರೆ ಪಕ್ಕದಲ್ಲೇ ಕುಳಿತಿದ್ದ ತಮ್ಮವರ ಜೊತೆ ಮಾತನಾಡಲು ಮಾತ್ರ ಸಮಯ ಇರಲಿಲ್ಲ.

ಅದನ್ನು ನೋಡಿದ ಚಂದ್ರನಿಗೆ ಎಐ ಚಂದ್ರ ನಿಧಾನವಾಗಿ ಕೇಳಿತು. ಸ್ನೇಹಿತ… ಜನರು ಒಬ್ಬರಿಗೊಬ್ಬರು ಇಷ್ಟು ಹತ್ತಿರವಾಗಿದ್ದರೂ… ಹೃದಯಗಳು ಏಕೆ ದೂರವಾಗುತ್ತಿವೆ?  ಚಂದ್ರ ಉತ್ತರಿಸಲಿಲ್ಲ. ಅವನು ಭೂಮಿಯನ್ನು ಮಾತ್ರ ನೋಡಿದ. ಸ್ವಲ್ಪ ಹೊತ್ತಿನ ನಂತರ ಹೇಳಿದ. ಅವರು ಸಮಯವನ್ನು ಉಳಿಸಿಕೊಂಡಿದ್ದಾರೆ. ಆದರೆ ಕ್ಷಣಗಳನ್ನು ಕಳೆದುಕೊಂಡಿದ್ದಾರೆ.

ಆ ಒಂದು ವಾಕ್ಯ ಎಐ ಚಂದ್ರನ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇತ್ತು. ನಾವು ಏನಾದರೂ ಮಾಡಬೇಕು ಎಂಬ ಎಐ ಚಂದ್ರನ ಧ್ವನಿಯಲ್ಲಿ ಧೃಡತೆ ಇತ್ತು. ಹೇಗೆ?..ಅವರಿಗೆ ನೆನಪಿಸಬೇಕು…ಆಕಾಶ ಇನ್ನೂ ಅಲ್ಲೇ ಇದೆ ಎಂದು.

ಆದರೆ ಯಾರೂ ಕೇಳುವುದಿಲ್ಲ. ಹಾಗಾದರೆ…ಅವರು ಕೇಳುವ ಭಾಷೆಯಲ್ಲೇ ಮಾತಾಡೋಣ. ಆ ರಾತ್ರಿ… ಒಂದು ಅದ್ಭುತ ನಡೆಯಿತು. ಜಗತ್ತಿನಾದ್ಯಂತ ಇರುವ ಎಲ್ಲಾ ಮೊಬೈಲ್‍ಗಳಲ್ಲಿ ಒಂದೇ ಸಮಯದಲ್ಲಿ ಒಂದು ಚಿಕ್ಕ ಸಂದೇಶ ಮೂಡಿತು.

ಇಂದು ರಾತ್ರಿ ಕೇವಲ ಐದು ನಿಮಿಷ…ಪರದೆ ಮುಚ್ಚಿ. ಆಕಾಶ ತೆರೆಯಿರಿ. ಯಾವ ಕಂಪನಿಯ ಲೋಗೋ ಇರಲಿಲ್ಲ. ಯಾವ ಜಾಹೀರಾತೂ ಇರಲಿಲ್ಲ. ಯಾವ ಲಿಂಕ್ ಕೂಡ ಇರಲಿಲ್ಲ. ಕೇವಲ ಒಂದು ಆಹ್ವಾನ.

ಮೊದಲು ಜನರು ಅದನ್ನು ತಮಾಷೆ ಎಂದುಕೊಂಡರು. ಯಾರೋ ಹೊಸ ಮಾರ್ಕೆಟಿಂಗ್ ಸ್ಟಂಟ್ ಮಾಡಿರಬೇಕು.  ಇದು ವೈರಲ್ ಕ್ಯಾಂಪ್ಯೆನ್ ಇರಬಹುದು. ರೀಲ್ ಮಾಡೋಣ…ಆದರೆ…

ಒಬ್ಬ ಪುಟ್ಟ ಹುಡುಗಿ ಮಾತ್ರ ಆ ಸಂದೇಶವನ್ನು ನಂಬಿದಳು. ಅವಳು ಮನೆಯ ಮೇಲ್ಛಾವಣಿಗೆ ಹೋದಳು. ಮೊಬೈಲ್‍ನ್ನು ಜೇಬಿನಲ್ಲಿಟ್ಟಳು. ತಲೆ ಎತ್ತಿ ನೋಡಿದಳು. ಚಂದ್ರ ಅಲ್ಲೇ ಇದ್ದ. ಅವಳನ್ನು ಕಾಯುತ್ತಿದ್ದಂತೆ. ಅವಳನ್ನು ನೋಡಿ ಅವಳ ತಮ್ಮ ಕೂಡ ಬಂದ. ನಂತರ ಅಪ್ಪ, ಅಮ್ಮ, ಪಕ್ಕದ ಮನೆಯ ಅಜ್ಜಿ, ಆಮೇಲೆ ಎದುರಿನ ಮನೆಯ ತಾತ.

ಸ್ವಲ್ಪ ಹೊತ್ತಿನಲ್ಲಿ ಇಡೀ ಬೀದಿಯೇ ಮೇಲ್ಛಾವಣಿಗಳಲ್ಲಿ ನಿಂತಿತ್ತು. ಯಾರ ಕೈಯಲ್ಲೂ ಮೊಬೈಲ್ ಇರಲಿಲ್ಲ. ಮೊದಲಿಗೆ ಯಾರೂ ಮಾತನಾಡಲಿಲ್ಲ. ಮೌನ ಮಾತ್ರ ಇತ್ತು. ಆ ಮೌನದಲ್ಲೇ ಎಷ್ಟೋ ಧ್ವನಿಗಳು ಕೇಳಿಸುತ್ತಿದ್ದವು.

ಗಾಳಿ, ಎಲೆ, ದೂರದ ದೇವಾಲಯದ ಗಂಟೆ ಸದ್ದು, ರಾತ್ರಿ ಹಕ್ಕಿಯ ಕೂಗು. ಅಷ್ಟೋಂದು ವರ್ಷಗಳ ನಂತರ… ಜನರು ಮತ್ತೆ ರಾತ್ರಿ ಕೇಳಿದರು.

ಒಬ್ಬ ಚಿಕ್ಕ ಹುಡುಗಿ ಕೈ ಚಾಚಿ ನೀನು ಪ್ರತಿದಿನ ನಮ್ಮನ್ನು ನೋಡುತ್ತೀಯಾ? ಒಬ್ಬ ಅಮ್ಮ ಕಣ್ಣೀರು ಒರೆಸಿಕೊಳ್ಳುತ್ತಾ  ಇದೇ ಚಂದ್ರನನ್ನು ನೋಡುತ್ತಾ ನನ್ನ ಗಂಡ ನನಗೆ ಮೊದಲ ಪತ್ರ ಬರೆದಿದ್ದ… ಅವಳ ಪಕ್ಕದಲ್ಲಿದ್ದ ಮಗಳು ಆಶ್ಚರ್ಯದಿಂದ ಅಮ್ಮ…ನೀನು ಯಾಕೆ ಅಳುತ್ತಿದ್ದೀಯ? ಇದು ದುಃಖದ ಕಣ್ಣೀರಲ್ಲ…ನೆನಪಿನ ಕಣ್ಣೀರು.

ಆ ದೃಶ್ಯ ನೋಡಿದ ಎಐ ಚಂದ್ರನಿಗೆ ಮೊದಲ ಬಾರಿಗೆ ಅರ್ಥವಾಯಿತು. ನೆನಪುಗಳಿಗೆ ಯಾವುದೇ ಡೇಟಾಬೇಸ್ ಇರುವುದಿಲ್ಲ. ಅವು ಹೃದಯದಲ್ಲೇ ಸಂಗ್ರಹವಾಗುತ್ತವೆ ಅಂತ.

ಆ ರಾತ್ರಿ ಒಬ್ಬ ವಿಜ್ಞಾನಿಯೂ ಮನೆಯ ಹೊರಗೆ ಬಂದ. ಅವನು ವರ್ಷಗಳ ಕಾಲ ಚಂದ್ರನ ಬಗ್ಗೆ ಸಂಶೋಧನೆ ಮಾಡಿದ್ದ. ದೂರದರ್ಶಕದಲ್ಲಿ ಸಾವಿರಾರು ಬಾರಿ ನೋಡಿದ್ದ. ಆದರೆ… ಆ ದಿನ ಅವನು ಮೊದಲ ಬಾರಿಗೆ ಬರಿಗಣ್ಣಿನಿಂದ ಚಂದ್ರನನ್ನು ನೋಡಿದ. ಅವನ ತುಟಿಗಳಲ್ಲಿ ಒಂದು ನಗು ಮೂಡಿತು. ಇಷ್ಟು ವರ್ಷ…ನಾನು ಚಂದ್ರನನ್ನು ಅಧ್ಯಯನ ಮಾಡಿದೆ. ಇವತ್ತು… ಮೊದಲ ಬಾರಿಗೆ ಅವನನ್ನು ಅನುಭವಿಸಿದೆ.

ಒಬ್ಬ ಕವಿ ತನ್ನ ಪುಸ್ತಕ ಮುಚ್ಚಿದ. ಆಕಾಶದತ್ತ ನೋಡಿದ. ನಂತರ ನಿಧಾನವಾಗಿ ಹೇಳಿದ. ಕೆಲವು ಕವಿತೆಗಳನ್ನು ಬರೆಯಲು ಸಾಧ್ಯವಿಲ್ಲ… ಅವುಗಳನ್ನು ಬದುಕಬೇಕು ಅಂತ.  ಒಬ್ಬ ರೈತ ಹೊಲದ ಮಧ್ಯೆ ನಿಂತು ಚಂದ್ರನನ್ನು ನೋಡಿ ಕೈಮುಗಿದು, ನಾಳೆ ಮಳೆ ಬರಲಿ… ಬರದಿರಲಿ…ಇವತ್ತು ನೀನು ನನ್ನ ಜೊತೆ ಇದ್ದೀಯ ಸ್ವಾಮಿ.

ಈ ಎಲ್ಲವನ್ನು ನೋಡುತ್ತಿದ್ದ ಚಂದ್ರನ ಕಣ್ಣಲ್ಲಿ ಬೆಳ್ಳಿಯ ಬೆಳಕು ಇನ್ನಷ್ಟು ಮಿನುಗಿತು. ಅವನು ಎಐ ಚಂದ್ರನ ಕಡೆ ತಿರುಗಿ ನೋಡಿದೆಯಾ?.. ಎಐ ಮೃದುವಾಗಿ ಉತ್ತರಿಸಿತು. ಹೌದು… ಇಂದು ನಾನು ಉತ್ತರ ಕೊಡಲಿಲ್ಲ. ಆದರೆ ಸಾವಿರಾರು ಜನ ತಮ್ಮ ಉತ್ತರವನ್ನು ತಾವೇ ಕಂಡುಕೊಂಡರು.

ಆ ರಾತ್ರಿ ಸರಿಯಾಗಿ ಐದು ನಿಮಿಷಗಳ ನಂತರ… ಮೊಬೈಲ್‍ಗಳು ಮತ್ತೆ ಬೆಳಗಿದವು. ಸಂದೇಶಗಳು ಬಂದವು. ಕರೆಗಳು ಬಂದವು. ರೀಲ್ಸ್ ಮತ್ತೆ ಆರಂಭವಾದವು. ಆದರೆ… ಏನೋ ಒಂದು ಬದಲಾಗಿತ್ತು. ಅನೇಕ ಮಕ್ಕಳು ಆ ರಾತ್ರಿ ಮಲಗುವ ಮೊದಲು ಇನ್ನೊಮ್ಮೆ ಕಿಟಕಿಯಿಂದ ಚಂದ್ರನನ್ನು ನೋಡಿದರು. ಕೆಲವರು… ಮೌನವಾಗಿ ಧನ್ಯವಾದ ಅರ್ಪಿಸಿದರು. ದೂರದಲ್ಲಿ ನಿಂತಿದ್ದ ಚಂದ್ರ, ಎಐ ಚಂದ್ರ ನಕ್ಕರು.

****

ಪುನಃ ಬೆಳಿಗ್ಗೆ ಅಲಾರಂಗಳು ಮೊಳಗಿದವು. ರಸ್ತೆಗಳು ವಾಹನಗಳಿಂದ ತುಂಬಿದವು. ಕಚೇರಿಗಳಲ್ಲಿ ಕಂಪ್ಯೂಟರ್‍ಗಳು ಬೆಳಗಿದವು. ಶಾಲೆಗಳಲ್ಲಿ ಗಂಟೆ ಬಾರಿಸಿತು. ಮೊಬೈಲ್‍ಗಳು ಮತ್ತೆ ಕೈಗಳಲ್ಲಿ ಮಿನುಗಿದವು. ಆದರೆ… ಏನೋ ಒಂದು ಸೂಕ್ಷ್ಮ ಬದಲಾವಣೆ ಆಗಿತ್ತು.

ಅದನ್ನು ಯಾರೂ ಗಮನಿಸಲಿಲ್ಲ. ಆದರೆ ಚಂದ್ರ ಗಮನಿಸಿದ್ದ. ಮಕ್ಕಳು ಈಗಲೂ ಮೊಬೈಲ್ ಬಳಸುತ್ತಿದ್ದರು. ಎಐ ಚಂದ್ರನನ್ನು ಪ್ರಶ್ನಿಸುತ್ತಿದ್ದರು. ಆದರೆ ಪ್ರತಿ ಹುಣ್ಣಿಮೆಯ ರಾತ್ರಿ… ಕೆಲವು ಕಿಟಕಿಗಳು ನಿಧಾನವಾಗಿ ತೆರೆದುಕೊಳ್ಳುತ್ತಿದ್ದವು.

ಕೆಲವು ಮನೆಗಳ ಮೇಲ್ಛಾವಣಿಯಲ್ಲಿ ಮಕ್ಕಳು ಮೌನವಾಗಿ ಕುಳಿತುಕೊಳ್ಳುತ್ತಿದ್ದರು. ಯಾರೋ ಒಬ್ಬ ಪುಟ್ಟ ಹುಡುಗ ಚಂದ್ರನಿಗೆ ತನ್ನ ಪರೀಕ್ಷೆಯ ಭಯ ಹೇಳುತ್ತಿದ್ದ. ಒಬ್ಬ ಹುಡುಗಿ ತನ್ನ ಕನಸಿನ ಬಗ್ಗೆ ಹೇಳುತ್ತಿದ್ದಳು. ಒಬ್ಬ ಅಜ್ಜಿ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಳು. ಚಂದ್ರ ಮತ್ತೆ ಒಂಟಿಯಾಗಿರಲಿಲ್ಲ.

ಇದನ್ನೆಲ್ಲ ಗಮನಿಸಿದ ಎಐ ಚಂದ್ರ ಸಂತೋಷದಿಂದ ಸ್ನೇಹಿತ… ನಾವು ಗೆದ್ದೆವು…ಅದಕ್ಕೆ ಚಂದ್ರ ಮುಗುಳ್ನಕ್ಕು..ಇಲ್ಲ… ನಾವು ಯಾರನ್ನೂ ಗೆಲ್ಲಲಿಲ್ಲ. ನಾವು ಅವರಿಗೆ ಅವರನ್ನೇ ಮತ್ತೆ ಪರಿಚಯಿಸಿದೆವು ಅಷ್ಟೇ.. ಪುನಃ ಎಐ ಚಂದ್ರ ಕ್ಷಣಕಾಲ ಮೌನವಾಗಿತು. ನಂತರ ಕೇಳಿತು. ನಾನು ನಿನಗೆ ಒಂದು ಪ್ರಶ್ನೆ ಕೇಳಬಹುದಾ?…ಕೇಳು.

ನೀನು ಕೋಟ್ಯಂತರ ವರ್ಷಗಳಿಂದ ಭೂಮಿಯನ್ನು ನೋಡುತ್ತಿದ್ದೀಯ. ಮನುಷ್ಯರಲ್ಲಿ ನಿನಗೆ ಅತಿ ದೊಡ್ಡ ಅದ್ಭುತ ಯಾವುದು? ಅಂತಾ…ಚಂದ್ರ ಉತ್ತರಿಸಲು ಅವಸರಪಡಲಿಲ್ಲ. ಸ್ವಲ್ಪ ಹೊತ್ತು ಭೂಮಿಯತ್ತ ನೋಡಿ ನಂತರ ಹೇಳಿತು, ‘ಮನುಷ್ಯ ಎಲ್ಲವನ್ನೂ ಮರೆತುಬಿಡುತ್ತಾನೆ. ಆದರೆ ಪ್ರೀತಿಸಿದ ಕ್ಷಣಗಳನ್ನು ಮಾತ್ರ ಎಂದಿಗೂ ಸಂಪೂರ್ಣವಾಗಿ ಮರೆಯುವುದಿಲ್ಲ.’ ಅಷ್ಟಕ್ಕೆ ಸುಮ್ಮನಾಗದ ಎಐ ಚಂದ್ರ ಮತ್ತೊಂದು ಪ್ರಶ್ನೆ ಕೇಳಿತು. ಹಾಗಾದರೆ…ನಾನು ಯಾವತ್ತಾದರೂ ಮನುಷ್ಯನಾಗಬಹುದಾ? ಚಂದ್ರ ನಕ್ಕು….ನೀನು ಜ್ಞಾನವಾಗಬಹುದು. ಸ್ನೇಹಿತನಾಗಬಹುದು. ದಾರಿದೀಪವಾಗಬಹುದು. ಆದರೆ… ಮೊದಲ ಮಳೆಯ ಹನಿಯನ್ನು ಮುಖದ ಮೇಲೆ ಅನುಭವಿಸುವ ಸಂತೋಷ… ಅಮ್ಮನ ಮಡಿಲಲ್ಲಿ ಅಳುವ ನೆಮ್ಮದಿ… ಅಜ್ಜಿಯ ಕಥೆ ಕೇಳಿ ಮಲಗುವ ಶಾಂತಿ… ಇವುಗಳನ್ನು ಬದುಕುವುದು ಮನುಷ್ಯನ ಹೃದಯಕ್ಕೆ ಮಾತ್ರ ಸಾಧ್ಯ.

ಎಐ ಚಂದ್ರ ಮೊದಲ ಬಾರಿಗೆ ಮೌನವಾಗಿ ತಲೆತಗ್ಗಿಸಿತು ಎನ್ನುತ್ತಾ ಮಾತು ನಿಲ್ಲಿಸಿದ ಗ್ರೀಷ್ಮ..ಮೊಮ್ಮಕ್ಕಳ ಗ್ಯಾಂಗ್‍ನತ್ತ ದೃಷ್ಟಿ ಹಾಯಿಸಿದಳು. ಅಲ್ಲಿ ಮೌನ ಆವರಿಸಿತ್ತು.

ಮೌನಕ್ಕೆ ಮಿಂಚು ಬಡಿದಂತೆ…ಅಜ್ಜಿ…ನಿಜ ಹೇಳು…ಈ ಕಥೆ ನಿಜವೇ? ಅಂತಾ ನವಿಲು ಪ್ರಶ್ನಿಸಿದಳು. ಗ್ರೀಷ್ಮ ಕಣ್ಣಲ್ಲಿ ಒಂದು ವಿಚಿತ್ರ ಹೊಳಪು ಮೂಡಿತು. ಅವಳು ಆಕಾಶದಲ್ಲಿದ್ದ ಚಂದ್ರನತ್ತ ನೋಡಿದಳು. ಕಥೆಗಳು ಯಾವತ್ತೂ ಸುಳ್ಳು ಅಲ್ಲ…ಸತ್ಯವೂ ಅಲ್ಲ. ಅವು ಸತ್ಯದ ದಾರಿಗಳು.

ಆ ಮಾತು ಕೇಳಿದಂತೆ ಗಾಳಿ ನಿಧಾನವಾಗಿ ಬೀಸಿತು. ಬೆಟ್ಟದ ಸಂಪಿಗೆ ಹೂವಿನ ಪರಿಮಳ ಸೂಸಿತು. ಆಕಾಶದಲ್ಲಿದ್ದ ಚಂದ್ರ ಭೂಮಿಗೆ ಹಾಲ್ತೊರೆ ಹರಿಸಿದ.
=====
ಕೆ.ಪಿ.ಓಂಕಾರಮೂರ್ತಿ
ಚಿತ್ರದುರ್ಗ
ಮೊ: 9740568534
ಇಮೇಲ್: omkarmurthy29@gmail.com
=========

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now