ಬೆಂಗಳೂರು : ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಮೆಮೊರಿ ಯಾವಾಗ ಭರ್ತಿಯಾಗುತ್ತದೆ ಎಂಬುದೇ ತಿಳಿಯುವುದಿಲ್ಲ. ಫೋಟೋಗಳು, ವಿಡಿಯೋಗಳು, ಡೌನ್‌ಲೋಡ್ ಮಾಡಿದ ದಾಖಲೆಗಳು, ಆ್ಯಪ್‌ಗಳು ಹಾಗೂ ಕ್ಯಾಶ್ (Cache) ಫೈಲ್‌ಗಳು ಸಂಗ್ರಹವಾಗುತ್ತಾ ಸ್ಟೋರೇಜ್ ಕ್ಷಣಾರ್ಧದಲ್ಲಿ ಭರ್ತಿಯಾಗಿಬಿಡುತ್ತದೆ. ಪರಿಣಾಮವಾಗಿ ಮೊಬೈಲ್ ಹ್ಯಾಂಗ್ ಆಗುವುದು ಅಥವಾ ಹೊಸ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗದಿರುವ ಸಮಸ್ಯೆಗಳು ಎದುರಾಗುತ್ತವೆ. ಆದರೆ ಕೆಲವೊಂದು ಸುಲಭ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಯಾವುದೇ ಪ್ರಮುಖ ಫೋಟೋ ಅಥವಾ ಫೈಲ್‌ಗಳನ್ನು ಕಳೆದುಕೊಳ್ಳದೆ ಮೊಬೈಲ್‌ನಲ್ಲಿ ಹೆಚ್ಚಿನ ಜಾಗವನ್ನು ಉಳಿಸಿಕೊಳ್ಳಬಹುದು. ಅಂತಹ ಉಪಯುಕ್ತ ವಿಧಾನಗಳ ಮಾಹಿತಿ ಇಲ್ಲಿದೆ.
ಮೊದಲಿಗೆ ಸ್ಟೋರೇಜ್ ವಿವರ ಪರಿಶೀಲಿಸಿ
ಮೊಬೈಲ್‌ನಲ್ಲಿ ಯಾವುದೇ ಫೈಲ್ ಅನ್ನು ತೆಗೆದುಹಾಕುವ ಮುನ್ನ, ಫೋನ್‌ನ Settings ಒಳಗೆ Storage ವಿಭಾಗವನ್ನು ಒಮ್ಮೆ ಗಮನಿಸಿ. ಇಲ್ಲಿ ಫೋಟೋಗಳು, ವಿಡಿಯೋಗಳು, ಆ್ಯಪ್‌ಗಳು ಮತ್ತು ಡೌನ್‌ಲೋಡ್‌ಗಳಲ್ಲಿ ಯಾವುದು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದರ ಆಧಾರದ ಮೇಲೆ ಅನಗತ್ಯ ಫೈಲ್‌ಗಳು ಎಲ್ಲೆಲ್ಲಿ ಇವೆ ಎಂಬುದನ್ನು ಸುಲಭವಾಗಿ ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಬಹುದು.
ಗೂಗಲ್ ಫೋಟೋಸ್‌ನ ಸ್ಮಾರ್ಟ್ ಸ್ಟೋರೇಜ್ ಬಳಕೆ
ನಿಮ್ಮ ಫೋಟೋಗಳು ಹಾಗೂ ವಿಡಿಯೋಗಳು ಈಗಾಗಲೇ Google Photos ಖಾತೆಗೆ ಬ್ಯಾಕಪ್ ಆಗಿದ್ದರೆ, Smart Storage ಫೀಚರ್ ಅನ್ನು ಸಕ್ರಿಯಗೊಳಿಸುವುದು ಉತ್ತಮ. ಇದಕ್ಕಾಗಿ ಮೊಬೈಲ್ ಸೆಟ್ಟಿಂಗ್ಸ್‌ನಲ್ಲಿ Storage ವಿಭಾಗಕ್ಕೆ ತೆರಳಿ Free Up Space ಆಯ್ಕೆ ಮಾಡಿಕೊಂಡು ಅಲ್ಲಿ Smart Storage ಆನ್ ಮಾಡಬೇಕು. ಹೀಗೆ ಮಾಡಿದರೆ, ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸೇವ್ ಆಗಿರುವ ಹಳೆಯ ಫೋಟೋ ಮತ್ತು ವಿಡಿಯೋಗಳ ಲೋಕಲ್ ಕಾಪಿಗಳನ್ನು ಫೋನ್‌ನಿಂದ ಮಾತ್ರವೇ ತೆರವುಗೊಳಿಸಿ ಇಂಟರ್ನಲ್ ಮೆಮೊರಿಯನ್ನು ಉಳಿಸಲು ಇದು ನೆರವಾಗುತ್ತದೆ.
ಡೌನ್‌ಲೋಡ್ ಮಾಡಿದ ವಿಡಿಯೋ ಮತ್ತು ಕ್ಯಾಶ್ ಕ್ಲಿಯರ್ ಮಾಡಿ
ಯೂಟ್ಯೂಬ್ ಹಾಗೂ ಗೂಗಲ್ ಟಿವಿಯಂತಹ ಮನರಂಜನಾ ಆ್ಯಪ್‌ಗಳಲ್ಲಿ ಆಫ್‌ಲೈನ್ ವೀಕ್ಷಣೆಗೆಂದು ಡೌನ್‌ಲೋಡ್ ಮಾಡಿಕೊಂಡಿರುವ ವಿಡಿಯೋಗಳು ಮತ್ತು ಹಾಡುಗಳು ಹೆಚ್ಚಿನ ಜಾಗವನ್ನು ನುಂಗಿಹಾಕುತ್ತವೆ. ಗೂಗಲ್ ಟಿವಿಯ Library ವಿಭಾಗದಲ್ಲಿ ಡೌನ್‌ಲೋಡ್ ಆಗಿರುವ ವಿಡಿಯೋಗಳನ್ನು ಹಾಗೂ ಯೂಟ್ಯೂಬ್ ಮ್ಯೂಸಿಕ್‌ನಲ್ಲಿ ಬೇಡದ ಹಾಡುಗಳನ್ನು Remove Download ಮೂಲಕ ಸುಲಭವಾಗಿ ಡಿಲೀಟ್ ಮಾಡಬಹುದು. ಇದರೊಂದಿಗೆ ಸೆಟ್ಟಿಂಗ್ಸ್‌ನಲ್ಲಿ Apps ವಿಭಾಗಕ್ಕೆ ಹೋಗಿ, ಹೆಚ್ಚು ಡೇಟಾ ಸಂಗ್ರಹಿಸಿಕೊಂಡಿರುವ ಆ್ಯಪ್‌ಗಳನ್ನು ಆಯ್ಕೆ ಮಾಡಿ Clear Cache ಮಾಡುವುದರಿಂದ ಮುಖ್ಯ ಡೇಟಾಗೆ ಧಕ್ಕೆಯಾಗದೆ ಸಾಕಷ್ಟು ಮೆಮೊರಿ ಖಾಲಿಯಾಗುತ್ತದೆ.
ಆ್ಯಪ್ ಡಿಲೀಟ್ ಮಾಡದೆ ಮೆಮೊರಿ ಉಳಿಸಲು ಆರ್ಕೈವ್ ಆಯ್ಕೆ
ಫೋನ್‌ನಲ್ಲಿರುವ ಆ್ಯಪ್‌ಗಳನ್ನು ಶಾಶ್ವತವಾಗಿ ಅನ್‌ಇನ್‌ಸ್ಟಾಲ್ ಮಾಡಲು ಇಷ್ಟವಿಲ್ಲದಿದ್ದರೆ Archive Apps ಫೀಚರ್ ಅತ್ಯಂತ ಉಪಯುಕ್ತ. ಗೂಗಲ್ ಪ್ಲೇ ಸ್ಟೋರ್‌ನ ಪ್ರೊಫೈಲ್ ಸೆಟ್ಟಿಂಗ್ಸ್‌ನಲ್ಲಿ General ವಿಭಾಗಕ್ಕೆ ತೆರಳಿ Automatically Archive Apps ಆಯ್ಕೆಯನ್ನು ಆನ್ ಮಾಡಿಕೊಳ್ಳಬಹುದು. ಇದರಿಂದ ಹೆಚ್ಚು ಬಳಸದ ಆ್ಯಪ್‌ಗಳ ಸೈಜ್ ಕಡಿಮೆಯಾಗುತ್ತದೆ ಮತ್ತು ಆ್ಯಪ್ ಐಕಾನ್ ಹಾಗೂ ಅದರಲ್ಲಿನ ವೈಯಕ್ತಿಕ ಮಾಹಿತಿ ಫೋನ್‌ನಲ್ಲೇ ಸುರಕ್ಷಿತವಾಗಿ ಉಳಿಯುತ್ತದೆ.
ಡೌನ್‌ಲೋಡ್ಸ್ ಫೋಲ್ಡರ್ ಮೇಲೆ ಇರಲಿ ಗಮನ
ಸಾಮಾನ್ಯವಾಗಿ Files ಅಥವಾ Files by Google ಆ್ಯಪ್‌ನಲ್ಲಿರುವ Downloads ಫೋಲ್ಡರ್‌ನಲ್ಲಿ ಹಳೆಯ ಪಿಡಿಎಫ್‌ಗಳು, ಇನ್‌ವಾಯ್ಸ್‌ಗಳು ಮತ್ತು ತಾತ್ಕಾಲಿಕ ಡಾಕ್ಯುಮೆಂಟ್‌ಗಳು ಹಾಗೆಯೇ ಉಳಿದುಕೊಂಡಿರುತ್ತವೆ. ಇವುಗಳನ್ನು ಒಮ್ಮೆ ಪರಿಶೀಲಿಸಿ ಅನಗತ್ಯ ಕಡತಗಳನ್ನು ಕೈಯಾರೆ ತೆಗೆದುಹಾಕಿದರೆ ತಕ್ಷಣವೇ ಹೆಚ್ಚಿನ ಮೆಮೊರಿ ಲಭ್ಯವಾಗುತ್ತದೆ. ಆದರೆ ಯಾವುದೇ ಫೈಲ್ ಡಿಲೀಟ್ ಮಾಡುವ ಮುನ್ನ, ಆ ಕಡತಗಳ ಬ್ಯಾಕಪ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.












