ಬೆಂಗಳೂರು.ಸೆಪ್ಟೆಂಬರ್.27: ಕನ್ನಡ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದಲ್ಲಿ ‘ಕನ್ನಡದ ಶಿವಮಣಿ’ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ಡ್ರಮ್ಮರ್ ದೇವ (64) ಅವರು ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ಕಂದಶ್ರೀ ಅಪಾರ್ಟ್ಮೆಂಟ್ನ ತಮ್ಮ ನಿವಾಸದಲ್ಲಿ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ದೇವ್ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್) ಕಾಣಿಸಿಕೊಂಡಿತ್ತು. ಇದಕ್ಕೂ ಮುನ್ನ ಗ್ಯಾಂಗ್ರಿನ್ ಸಮಸ್ಯೆಯಿಂದಾಗಿ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಬಳಿಕ ಸ್ಟ್ರೋಕ್ ಪರಿಣಾಮ ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ, ಕಳೆದ ಎರಡು ತಿಂಗಳುಗಳಿಂದ ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ತಮ್ಮದೇ ಆದ ವಿಶಿಷ್ಟ ಶೈಲಿಯ ಡ್ರಮ್ಸ್ ಬೀಟ್ಗಳ ಮೂಲಕ ಸಂಗೀತ ಪ್ರೇಮಿಗಳನ್ನು ಮೋಡಿ ಮಾಡುತ್ತಿದ್ದ ದೇವ್, ಸ್ಯಾಂಡಲ್ವುಡ್ನ ಸಾಕಷ್ಟು ಸಿನಿಮಾಗಳು ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ವಿಶೇಷವಾಗಿ ಐಪಿಎಲ್ನ ಆರ್ಸಿಬಿ (RCB) ಪಂದ್ಯಾವಳಿಗಳಲ್ಲಿ ಲೈವ್ ಬೀಟ್ ಪ್ರದರ್ಶನ ನೀಡುವ ಮೂಲಕ ಅಪಾರ ಕ್ರೇಜ್ ಸೃಷ್ಟಿಸಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.










