ದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ಚಂದಾದಾರರ ಒಟ್ಟು ಪಿಎಫ್ ಮೊತ್ತಕ್ಕೆ ವಾರ್ಷಿಕ ಬಡ್ಡಿಯನ್ನು ನಿಯಮಿತವಾಗಿ ಜಮೆ ಮಾಡುತ್ತದೆ. ಬಡ್ಡಿ ಹಣ ಜಮೆಯಾದ ತಕ್ಷಣವೇ ಚಂದಾದಾರರಿಗೆ ಅಧಿಕೃತ ಸಂದೇಶಗಳ ಮೂಲಕ ಮಾಹಿತಿ ತಲುಪಿಸಲಾಗುತ್ತದೆ. ಆದರೆ ಈ ಸಂದೇಶಗಳು ಅಥವಾ ಬಡ್ಡಿ ಹಣ ಎಲ್ಲ ಸದಸ್ಯರ ಖಾತೆಗಳಿಗೆ ಒಂದೇ ಸಮಯದಲ್ಲಿ ತಲುಪುವುದಿಲ್ಲ.
ಹೀಗಾಗಿ ಇತರರಿಗೆ ಬಂದ ಸಂದೇಶ ತಮಗೆ ಬಾರದಿದ್ದಾಗ ಸದಸ್ಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬಡ್ಡಿ ಜಮೆ ಪ್ರಕ್ರಿಯೆಯು ಹಂತ ಹಂತವಾಗಿ ನಡೆಯುವುದರಿಂದ, ಖಾತೆಯಲ್ಲಿ ಮೊತ್ತ ಕಾಣಿಸಿಕೊಳ್ಳಲು ಕೆಲ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಸಂದೇಶ ತಡವಾದ ತಕ್ಷಣವೇ ಹಣ ಕೈತಪ್ಪಿ ಹೋಗಿದೆ ಎಂದರ್ಥವಲ್ಲ. ಅಧಿಕೃತ ಎಸ್‌ಎಂಎಸ್ ಬರುವವರೆಗೆ ಕಾಯುವುದರ ಜೊತೆಗೆ, ಸದಸ್ಯರು ತಮ್ಮ ಖಾತೆಯ ವಿವರ ಹಾಗೂ ಬಡ್ಡಿಯ ಸ್ಥಿತಿಯನ್ನು ಪರಿಶೀಲಿಸಲು ಹಲವು ಸರಳ ಮಾರ್ಗಗಳಿವೆ.
ಇಪಿಎಫ್‌ಒ ಪಾಸ್‌ಬುಕ್ ಪೋರ್ಟಲ್ ಮೂಲಕ ಪರಿಶೀಲನೆ
ಚಂದಾದಾರರು ಇಪಿಎಫ್‌ಒ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬಹುದು. ಅಲ್ಲಿ ಲಭ್ಯವಿರುವ ಇ-ಪಾಸ್‌ಬುಕ್ ತೆರೆದು ನೋಡಿದರೆ, ಉದ್ಯೋಗಿ ಮತ್ತು ಉದ್ಯೋಗದಾತರ ಮಾಸಿಕ ವಂತಿಗೆ ಜೊತೆಗೆ ಆಯಾ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಬಡ್ಡಿ ಹಣ ಪ್ರತ್ಯೇಕವಾಗಿ ನಮೂದಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಮಿಸ್ಡ್ ಕಾಲ್ ನೀಡಿ ಬ್ಯಾಲೆನ್ಸ್ ತಿಳಿಯಿರಿ
ಯುಎಎನ್ ಜೊತೆಗೆ ನೋಂದಾಯಿತವಾದ ಮೊಬೈಲ್ ಸಂಖ್ಯೆ ಹೊಂದಿರುವ ಸದಸ್ಯರು ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೂ ಖಾತೆಯ ವಿವರ ಪಡೆಯಬಹುದು. ಈ ಸೇವೆ ಪಡೆಯಲು ಸದಸ್ಯರ ಯುಎಎನ್ ಜೊತೆ ಅಗತ್ಯ ಗುರುತಿನ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಜೋಡಣೆಯಾಗಿರಬೇಕು. ನೋಂದಾಯಿತ ಮೊಬೈಲ್‌ನಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ, ಕೆಲವೇ ಕ್ಷಣಗಳಲ್ಲಿ ಖಾತೆಯ ಬ್ಯಾಲೆನ್ಸ್ ಕುರಿತ ಎಸ್‌ಎಂಎಸ್ ಬರುತ್ತದೆ.
ಎಸ್‌ಎಂಎಸ್ ಹಾಗೂ ಉಮಂಗ್ ಆ್ಯಪ್ ಸೇವೆ
ಸದಸ್ಯರು ತಮ್ಮ ನೋಂದಾಯಿತ ಮೊಬೈಲ್‌ನಿಂದ 7738299899 ಸಂಖ್ಯೆಗೆ ನಿಗದಿತ ಮಾದರಿಯಲ್ಲಿ ಸಂದೇಶ ಕಳುಹಿಸುವ ಮೂಲಕವೂ ಮಾಹಿತಿ ಪಡೆಯಬಹುದು. ಇದಲ್ಲದೆ ಮೊಬೈಲ್‌ನಲ್ಲಿ ಉಮಂಗ್ (UMANG) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಇಪಿಎಫ್‌ಒ ಸೇವೆಗಳ ವಿಭಾಗಕ್ಕೆ ತೆರಳಿ ಲಾಗಿನ್ ಆಗುವ ಮೂಲಕ ನೇರವಾಗಿ ಪಾಸ್‌ಬುಕ್ ಮತ್ತು ಬಡ್ಡಿ ಮೊತ್ತದ ವಿವರಗಳನ್ನು ವೀಕ್ಷಿಸಬಹುದು.
ಬಡ್ಡಿ ಜಮೆ ತಡವಾದರೆ ಅಥವಾ ಹಣ ಕಾಣಿಸದಿದ್ದರೆ ಏನು ಮಾಡಬೇಕು?
ಪಿಎಫ್ ಬಡ್ಡಿಯನ್ನು ಪ್ರತಿ ತಿಂಗಳ ಬ್ಯಾಲೆನ್ಸ್ ಆಧಾರದ ಮೇಲೆ ಲೆಕ್ಕಹಾಕಿ ವರ್ಷದ ಕೊನೆಗೆ ಒಟ್ಟಾಗಿ ಖಾತೆಗೆ ಸೇರಿಸಲಾಗುತ್ತದೆ. ತಾಂತ್ರಿಕ ಕಾರಣಗಳಿಂದಾಗಿ ವ್ಯವಸ್ಥೆಯಲ್ಲಿ ಬಡ್ಡಿ ಮೊತ್ತ ಪ್ರದರ್ಶನವಾಗುವುದು ಕೆಲವೊಮ್ಮೆ ತಡವಾಗಬಹುದೇ ವಿನಃ, ಲೆಕ್ಕ ಹಾಕಿದ ಬಡ್ಡಿ ಹಣ ಸುರಕ್ಷಿತವಾಗಿರುತ್ತದೆ. ಒಂದು ವೇಳೆ ಯಾವುದೇ ವಿಧಾನದಲ್ಲೂ ಬಡ್ಡಿ ಜಮೆಯಾಗದಿದ್ದರೆ ಅಥವಾ ಮಾಹಿತಿ ಸಿಗದಿದ್ದರೆ, ಸದಸ್ಯರು ಇಪಿಎಫ್‌ಒನ ಆನ್‌ಲೈನ್ ಕುಂದುಕೊರತೆ ಪರಿಹಾರ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು ಅಥವಾ ಹತ್ತಿರದ ಇಪಿಎಫ್‌ಒ ಕಚೇರಿಗೆ ನೇರವಾಗಿ ಭೇಟಿ ನೀಡಿ ಪರಿಹಾರ ಪಡೆಯಬಹುದು.












