ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಖ್ಯೆ ಪ್ರತಿಯೊಬ್ಬರ ಗುರುತಿನ ಪ್ರಮುಖ ಭಾಗವಾಗಿದೆ. ಬ್ಯಾಂಕಿಂಗ್, ಯುಪಿಐ ವಹಿವಾಟು, ಸಾಮಾಜಿಕ ಜಾಲತಾಣಗಳು ಸೇರಿದಂತೆ ಬಹುತೇಕ ಅಗತ್ಯ ಸೇವೆಗಳು ನಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಜೋಡಣೆಯಾಗಿವೆ.
ಇಂತಹ ಸಂದರ್ಭದಲ್ಲಿ ನಿಮ್ಮ ಗಮನಕ್ಕೆ ಬಾರದಂತೆ, ನಿಮ್ಮ ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಯಾರಾದರೂ ನಕಲಿ ಸಿಮ್ ಕಾರ್ಡ್ ಪಡೆದುಕೊಂಡಿದ್ದರೆ ಅದು ದೊಡ್ಡ ತೊಂದರೆಗೆ ಕಾರಣವಾಗಬಹುದು. ದೂರಸಂಪರ್ಕ ಇಲಾಖೆಯ (DoT) ನಿಯಮಗಳ ಪ್ರಕಾರ, ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಯಾವುದಾದರೂ ಅಪರಾಧ ಚಟುವಟಿಕೆಗೆ ಬಳಕೆಯಾದರೆ ಅಸಲಿ ಮಾಲೀಕರಿಗೆ ಗರಿಷ್ಠ 50 ಲಕ್ಷ ರೂಪಾಯಿ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
ಆಧಾರ್ ಲಿಂಕ್ ಆಗಿರುವ ಸಿಮ್ ಪರಿಶೀಲಿಸುವ ಸುಲಭ ವಿಧಾನ
ನಿಮ್ಮ ಆಧಾರ್ ಸಂಖ್ಯೆಗೆ ಎಷ್ಟು ಮೊಬೈಲ್ ಸಂಪರ್ಕಗಳು ಜೋಡಣೆಯಾಗಿವೆ ಎಂಬುದನ್ನು ತಿಳಿಯಲು ಮೊದಲು ದೂರಸಂಪರ್ಕ ಇಲಾಖೆಯ ಅಧಿಕೃತ ‘TAFCOP’ ಪೋರ್ಟಲ್‌ಗೆ ಭೇಟಿ ನೀಡಬೇಕು. ಅಲ್ಲಿ ಪ್ರಸ್ತುತ ಬಳಕೆಯಲ್ಲಿರುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಪರದೆಯ ಮೇಲೆ ಕಾಣುವ ಕ್ಯಾಪ್ಚಾ ಕೋಡ್ ಭರ್ತಿ ಮಾಡಿ ‘ರಿಕ್ವೆಸ್ಟ್ ಒಟಿಪಿ’ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ ಲಾಗಿನ್ ಆದರೆ, ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳ ಪಟ್ಟಿ ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಇದರಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ಸಂಪರ್ಕಗಳೂ ಸೇರಿರುತ್ತವೆ.
ಅಪರಿಚಿತ ಸಂಖ್ಯೆ ಕಂಡುಬಂದರೆ ತಕ್ಷಣ ಹೀಗೆ ಮಾಡಿ
ಪರದೆಯ ಮೇಲೆ ಕಾಣುವ ಪ್ರತಿ ಮೊಬೈಲ್ ಸಂಖ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಮುಖ್ಯ. ಆ ಪಟ್ಟಿಯಲ್ಲಿರುವ ಯಾವುದೇ ಸಂಖ್ಯೆ ನಿಮ್ಮದಾಗಲಿ ಅಥವಾ ಕುಟುಂಬದ ಸದಸ್ಯರದಾಗಲಿ ಅಲ್ಲದಿದ್ದರೆ, ತಕ್ಷಣವೇ ಅದನ್ನು ಪೋರ್ಟಲ್ ಮೂಲಕವೇ ವರದಿ ಮಾಡಬಹುದು. ಪರಿಚಯವಿಲ್ಲದ ನಂಬರ್ ಪಕ್ಕದಲ್ಲಿ ಕಾಣುವ ‘ನಾಟ್ ಮೈ ನಂಬರ್’ (ಇದು ನನ್ನ ಸಂಖ್ಯೆಯಲ್ಲ) ಆಯ್ಕೆಯನ್ನು ಕ್ಲಿಕ್ ಮಾಡಿ ದೂರು ಸಲ್ಲಿಸಿದರೆ, ಆ ಸಂಪರ್ಕವನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಒಂದು ವೇಳೆ ಈ ಹಿಂದೆ ನೀವು ಬಳಸುತ್ತಿದ್ದ ನಂಬರ್ ಈಗ ಬೇಡವಾಗಿದ್ದರೆ ‘ನಾಟ್ ರಿಕ್ವೈರ್ಡ್’ ಆಯ್ಕೆಯನ್ನು ಮತ್ತು ಪ್ರಸ್ತುತ ಬಳಸುತ್ತಿರುವ ಸಂಖ್ಯೆಗಳಿಗೆ ‘ರಿಕ್ವೈರ್ಡ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಿಮ್ಮ ಮನವಿ ಸಲ್ಲಿಕೆಯಾದ ನಂತರ ಸಂಬಂಧಪಟ್ಟ ಟೆಲಿಕಾಂ ಕಂಪನಿಯು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತದೆ.
ನಿಯಮಿತ ಪರಿಶೀಲನೆಯಿಂದ ತಪ್ಪಲಿದೆ ಸೈಬರ್ ವಂಚನೆ
ನಿಮ್ಮ ಹೆಸರಿನಲ್ಲಿ ಸಕ್ರಿಯವಾಗಿರುವ ಮೊಬೈಲ್ ಸಂಪರ್ಕಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡುವುದರಿಂದ ಗುರುತಿನ ದುರ್ಬಳಕೆ, ನಕಲಿ ಬ್ಯಾಂಕ್ ಖಾತೆಗಳ ಸೃಷ್ಟಿ ಮತ್ತು ಸೈಬರ್ ವಂಚನೆಗಳಿಂದ ಮುಕ್ತಿ ಪಡೆಯಬಹುದು. ಈವರೆಗೆ ನೀವು ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಪರಿಶೀಲಿಸದಿದ್ದರೆ, ಯಾವುದೇ ಅಪಾಯ ಎದುರಾಗುವ ಮುನ್ನವೇ TAFCOP ಜಾಲತಾಣಕ್ಕೆ ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು ಸೂಕ್ತ.












