ಬೆಂಗಳೂರು : ದೂರದ ಪ್ರಯಾಣ ಮಾಡುವಾಗ ಫೋನ್ ಬ್ಯಾಟರಿ ಖಾಲಿಯಾಗುವುದು ಒಂದು ಸಾಮಾನ್ಯ ಸಮಸ್ಯೆ. ಪ್ರಯಾಣಕ್ಕೂ ಮುನ್ನ ಫೋನ್ ಅನ್ನು ಫುಲ್ ಚಾರ್ಜ್ ಮಾಡಿದರೂ, ಸಿನಿಮಾ ನೋಡುವುದು, ಹಾಡುಗಳನ್ನು ಕೇಳುವುದು ಮತ್ತು ಕರೆಗಳಲ್ಲಿ ಮಾತನಾಡುವುದರಿಂದ ಬ್ಯಾಟರಿ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತದೆ. ಇದಲ್ಲದೆ ಹಿನ್ನೆಲೆಯಲ್ಲಿ (Background) ರನ್ ಆಗುವ ಆ್ಯಪ್ಗಳು, ನೆಟ್ವರ್ಕ್ ಹುಡುಕಾಟ ಮತ್ತು ಸ್ಕ್ರೀನ್ ಬ್ರೈಟ್ನೆಸ್ ಕೂಡ ಬ್ಯಾಟರಿಯನ್ನು ಬೇಗನೆ ಕರಗಿಸುತ್ತವೆ.
ಆದರೆ, ನಿಮ್ಮ ಫೋನ್ನಲ್ಲಿರುವ ಕೆಲವು ಸೆಟ್ಟಿಂಗ್ಗಳನ್ನು ಬದಲಾಯಿಸುವ ಮೂಲಕ ಬ್ಯಾಟರಿ ದೀರ್ಘಕಾಲ ಬರುವಂತೆ ಮಾಡಬಹುದು. ಪ್ರಯಾಣದ ವೇಳೆ ಬ್ಯಾಟರಿ ಉಳಿಸಲು ಇರುವ ಸರಳ ಟೆಕ್ ಟಿಪ್ಸ್ ಇಲ್ಲಿವೆ.
ಬ್ಯಾಟರಿ ಸೇವರ್ ಮೋಡ್ ಆನ್ ಮಾಡಿ: ಬ್ಯಾಟರಿ ಉಳಿಸಲು ಆಂಡ್ರಾಯ್ಡ್ ಫೋನ್ಗಳಲ್ಲಿ ‘ಬ್ಯಾಟರಿ ಸೇವರ್ ಮೋಡ್’ (Battery Saver) ಹಾಗೂ ಐಫೋನ್ಗಳಲ್ಲಿ ‘ಲೋ ಪವರ್ ಮೋಡ್’ (Low Power Mode) ಆನ್ ಮಾಡಿಕೊಳ್ಳಿ. ಇದು ಹಿನ್ನೆಲೆಯಲ್ಲಿ ನಡೆಯುವ ಚಟುವಟಿಕೆಗಳನ್ನು ನಿಯಂತ್ರಿಸಿ ಬ್ಯಾಟರಿ ಉಳಿಸುತ್ತದೆ.
5G ಬದಲು 4G ಬಳಸಿ: 5G ನೆಟ್ವರ್ಕ್ ವೇಗವಾಗಿದ್ದರೂ, ಬ್ಯಾಟರಿಯನ್ನು ಹೆಚ್ಚು ಬಳಸುತ್ತದೆ. ಹಾಗಾಗಿ ಪ್ರಯಾಣದ ಸಮಯದಲ್ಲಿ ಮೊಬೈಲ್ ನೆಟ್ವರ್ಕ್ ಸೆಟ್ಟಿಂಗ್ಗೆ ಹೋಗಿ 4G/LTE ನೆಟ್ವರ್ಕ್ ಆಯ್ಕೆ ಮಾಡಿಕೊಳ್ಳಿ.
ಸ್ಕ್ರೀನ್ ಬ್ರೈಟ್ನೆಸ್ ಮತ್ತು ರಿಫ್ರೆಶ್ ರೇಟ್ ಕಡಿಮೆ ಮಾಡಿ: ಸ್ಕ್ರೀನ್ ಬ್ರೈಟ್ನೆಸ್ ಅನ್ನು ಆದಷ್ಟು ಕಡಿಮೆ ಇಡಿ ಅಥವಾ ‘ಆಟೋ-ಬ್ರೈಟ್ನೆಸ್’ ಬಳಸಿ. ನಿಮ್ಮ ಫೋನ್ 90Hz ಅಥವಾ 120Hz ರಿಫ್ರೆಶ್ ರೇಟ್ ಹೊಂದಿದ್ದರೆ, ಅದನ್ನು 60Hz ಗೆ ಇಳಿಸಿ. ಜೊತೆಗೆ ಸ್ಕ್ರೀನ್ ಟೈಮ್ಔಟ್ ಅನ್ನು 15 ಅಥವಾ 30 ಸೆಕೆಂಡುಗಳಿಗೆ ಸೆಟ್ ಮಾಡಿ.
ಬ್ಯಾಕ್ಗ್ರೌಂಡ್ ಆ್ಯಪ್ಗಳಿಗೆ ಬ್ರೇಕ್ ಹಾಕಿ: ಯಾವ ಆ್ಯಪ್ಗಳು ಹೆಚ್ಚು ಬ್ಯಾಟರಿ ಬಳಸುತ್ತಿವೆ ಎಂಬುದನ್ನು ಸೆಟ್ಟಿಂಗ್ಸ್ನಲ್ಲಿ ಪರಿಶೀಲಿಸಿ ಮತ್ತು ಅವು ಹಿನ್ನೆಲೆಯಲ್ಲಿ ರನ್ ಆಗದಂತೆ ನಿಲ್ಲಿಸಿ (Restrict).
ಅನಗತ್ಯ ಫೀಚರ್ಗಳನ್ನು ಆಫ್ ಮಾಡಿ: ಅಗತ್ಯವಿಲ್ಲದಿದ್ದಾಗ ಜಿಪಿಎಸ್ (GPS), ಹಾಟ್ಸ್ಪಾಟ್ ಮತ್ತು ಬ್ಲೂಟೂತ್ ಅನ್ನು ಆಫ್ ಮಾಡಿ. ಸಿಗ್ನಲ್ ಸರಿಯಾಗಿ ಇಲ್ಲದ ಜಾಗದಲ್ಲಿ ‘ಏರ್ಪ್ಲೇನ್ ಮೋಡ್’ (Airplane Mode) ಆನ್ ಮಾಡುವುದರಿಂದಲೂ ಬ್ಯಾಟರಿ ಉಳಿತಾಯವಾಗುತ್ತದೆ.
ಟಿಕೆಟ್ಗಳನ್ನು ಆಫ್ಲೈನ್ನಲ್ಲಿ ಸೇವ್ ಮಾಡಿ: ಪ್ರಯಾಣದ ವೇಳೆ ಇಂಟರ್ನೆಟ್ ಬಳಕೆಯನ್ನು ಕಡಿಮೆ ಮಾಡಲು ಬೋರ್ಡಿಂಗ್ ಪಾಸ್ಗಳು ಮತ್ತು ಟಿಕೆಟ್ಗಳನ್ನು ಮೊದಲೇ ಡೌನ್ಲೋಡ್ ಮಾಡಿ ಆಫ್ಲೈನ್ನಲ್ಲಿ ಇಟ್ಟುಕೊಳ್ಳಿ.
ಪವರ್ ಬ್ಯಾಂಕ್ ಮತ್ತು ರೈಲ್ವೆ ನಿಯಮದ ಬಗ್ಗೆ ಗಮನವಿರಲಿ: ಸುದೀರ್ಘ ಪ್ರಯಾಣಕ್ಕೆ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಕೊಂಡೊಯ್ಯುವುದು ಒಳಿತು. ಆದರೆ, ರೈಲಿನಲ್ಲಿ ರಾತ್ರಿ ವೇಳೆ ಮೊಬೈಲ್ ಮತ್ತು ಪವರ್ ಬ್ಯಾಂಕ್ ಚಾರ್ಜ್ ಮಾಡುವುದನ್ನು ರೈಲ್ವೆ ಇಲಾಖೆ ನಿಷೇಧಿಸಿದೆ. ಆದ್ದರಿಂದ ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ನಿಯಮದ ಬಗ್ಗೆ ಗಮನವಿರಲಿ ಹಾಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ.
ಈ ಮೇಲಿನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೆ ಪ್ರಯಾಣದ ಸಮಯದಲ್ಲಿ ನಿಮ್ಮ ಫೋನ್ ಬ್ಯಾಟರಿ ದೀರ್ಘಕಾಲದವರೆಗೆ ಬರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.













