ಸುದ್ದಿಒನ್, ಚಿತ್ರದುರ್ಗ, ಮೇ.21 : ‘ಸುದ್ದಿ ಒನ್’ ವತಿಯಿಂದ ಆರಂಭಿಸಲಾಗಿರುವ ‘ನೀರು ಉಳಿಸಿ, ನೆಲದ ಋಣ ತೀರಿಸಿ’ ಎನ್ನುವ ಅಭಿಯಾನವು ಅತ್ಯಂತ ಇಷ್ಟವಾಗುವಂತಹ ಹಾಗೂ ಬಹುದೊಡ್ಡ ಮಹತ್ವವನ್ನು ಹೊಂದಿರುವ ಕಾರ್ಯಕ್ರಮವಾಗಿದೆ ಎಂದು ಚಿತ್ರದುರ್ಗದ ನಿವಾಸಿ ವರಲಕ್ಷ್ಮಿ ಹೆಚ್.ಎನ್.ಅವರು ಶ್ಲಾಘಿಸಿದ್ದಾರೆ.
ಮನುಷ್ಯರು ಸೇರಿದಂತೆ ಪ್ರಾಣಿ-ಪಕ್ಷಿಗಳು, ಜಲಚರಗಳು ಹಾಗೂ ಸಮಸ್ತ ಜೀವರಾಶಿ ಮತ್ತು ಜೀವಸಂಕುಲಗಳಿಗೆ ಮೂಲಭೂತವಾಗಿ ನೀರು ಅತ್ಯಗತ್ಯವಾಗಿದ್ದು, ಆ ನೀರೇ ಇಲ್ಲದಿದ್ದರೆ ಜೀವವೇ ಇರುವುದಿಲ್ಲ. ಈ ನಿಟ್ಟಿನಲ್ಲಿ ನೀರನ್ನು ಉಳಿಸುವ ಅಭಿಯಾನವನ್ನು ಕೈಗೊಂಡಿರುವುದು ತಮಗೆ ತುಂಬಾ ಸಂತೋಷ ತಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಇದು ಖಂಡಿತವಾಗಿಯೂ ಆಗಬೇಕಾದ ಕೆಲಸವಾಗಿದ್ದು, ಭೂಮಿಯ ಮೇಲೆ ಶೇಕಡಾ 70 ರಷ್ಟು ನೀರಿದ್ದರೂ ಅದರಲ್ಲಿ ಕೇವಲ ಶೇಕಡಾ 2.5 ರಷ್ಟು ಮಾತ್ರ ನಮಗೆ ಕುಡಿಯಲು ಯೋಗ್ಯವಾಗಿದೆ. ನಾವು ಅಷ್ಟನ್ನೇ ಬಳಸುತ್ತಿರುವುದರಿಂದ ನೀರಿನ ಕೊರತೆ ನಮಗೆ ತುಂಬಾ ಕಾಣಿಸುತ್ತಿದೆ. ಅದಕ್ಕಾಗಿ ನಾವೆಲ್ಲರೂ ಮುಖ್ಯವಾಗಿ ನೀರನ್ನು ಸಂಗ್ರಹಿಸುವ ಹಾಗೂ ಸಂರಕ್ಷಿಸುವ ಅಭಿಯಾನವನ್ನು ಮಾಡಿಕೊಳ್ಳಬೇಕಾಗಿದೆ. ನೀರನ್ನು ಸಂರಕ್ಷಿಸುವುದು ಎಂದರೆ ನೀರು ಪೋಲಾಗದಂತೆ ಮಿತವ್ಯಯವಾಗಿ ಬಳಸುವುದು ಮತ್ತು ಹರಿದು ಹೋಗುತ್ತಿರುವ ನೀರನ್ನು ತಡೆಹಿಡಿದು, ರಕ್ಷಿಸಿ ಬಳಸುವ ಪ್ರಯತ್ನವನ್ನು ಮಾಡುವುದಾಗಿದೆ.
https://youtu.be/_6rGajHYkmw
ಪ್ರಸ್ತುತ ಮಳೆಯ ಕೊರತೆ ಹೆಚ್ಚಾಗಿರುವುದರಿಂದ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿ ದೊಡ್ಡ ದೊಡ್ಡ ಬದುಗಳನ್ನು ನಿರ್ಮಿಸಿ, ಅಲ್ಲಿ ಬೀಳುವ ಮಳೆನೀರನ್ನು ಅಲ್ಲೇ ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡರೆ ಅದು ತುಂಬಾ ಉಪಯೋಗಕಾರಿಯಾಗಲಿದ್ದು, ಇದನ್ನು ರೈತರು ಅತ್ಯಂತ ಮಹತ್ವವಾಗಿ ಮಾಡಲೇಬೇಕಾಗಿದೆ. ಇನ್ನು ಮನೆಗಳ ವಿಚಾರಕ್ಕೆ ಬಂದರೆ, ಹರಿದುಹೋಗುವ ನೀರನ್ನು ತಡೆಗಟ್ಟುವುದನ್ನು ಪ್ರತಿಯೊಬ್ಬ ನಾಗರಿಕನೂ ‘ಇದು ನನ್ನದೇ ಕೆಲಸ, ಸಾಮಾಜಿಕವಾಗಿ ನನ್ನದೊಂದು ಜವಾಬ್ದಾರಿ’ ಎಂದು ತಿಳಿದು ಮಾಡುತ್ತಾ ಹೋದರೆ, ಖಂಡಿತವಾಗಿಯೂ ಈ ದೊಡ್ಡ ಅಭಿಯಾನದಲ್ಲಿ ಭೂಮಿಯ ಋಣ ತೀರಿಸುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಿದಂತಾಗುತ್ತದೆ. ಮಳೆನೀರನ್ನು ಮುಖ್ಯವಾಗಿ ಎರಡು ರೀತಿಗಳಲ್ಲಿ ಸಂಗ್ರಹಿಸಬಹುದು. ಮೊದಲನೆಯದಾಗಿ ಮಳೆ ಬಿದ್ದ ಜಾಗದಲ್ಲಿಯೇ ನೀರನ್ನು ಸಂಗ್ರಹಿಸುವುದು ಹಾಗೂ ಎರಡನೆಯದಾಗಿ ಹರಿದು ಹೋಗುತ್ತಿರುವ ನೀರನ್ನು ಸಂಗ್ರಹಿಸುವುದಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲ್ಚಾವಣಿಯ ಮೇಲೆ ಬೀಳುವ ಮಳೆನೀರನ್ನು ತಮ್ಮ ಬೋರ್‌ವೆಲ್‌ಗಳಿಗೆ ರೀಚಾರ್ಜ್ ಮಾಡಿಸುವುದರಿಂದ ಒಂದು ಮಹತ್ವದ ಕೆಲಸ ಮಾಡಿದಂತಾಗುತ್ತದೆ. ಇದರಿಂದ ಅಂತರ್ಜಲ ರೀಚಾರ್ಜ್ ಆಗಿ ನಮಗೆ ನೀರು ಹೆಚ್ಚಾಗಿ ಸಿಗುತ್ತದೆ ಹಾಗೂ ಸದಾ ಕಾಲ ಅದನ್ನು ಬಳಸಿಕೊಳ್ಳುವ ಪ್ರಯೋಜನ ನಮಗೆ ಸಿಗುತ್ತದೆ.
ಈ ಮಳೆನೀರು ಕೊಯ್ಲು ವಿಚಾರಕ್ಕೆ ಸಂಬಂಧಿಸಿದಂತೆ ಜಲತಜ್ಞರಾದ ದೇವರಾಜ್ ರೆಡ್ಡಿಯವರು ಸಹ ಆಕಾಶವಾಣಿಯಲ್ಲಿ ಸರಣಿ ಕಾರ್ಯಕ್ರಮ ಮತ್ತು ಅಭಿಯಾನವನ್ನು ನಡೆಸಿಕೊಟ್ಟಿದ್ದರು. ಅದು ತುಂಬಾ ಚೆನ್ನಾಗಿ ಮೂಡಿಬಂದಿದ್ದಲ್ಲದೆ, ಜನರಿಗೆ ಅದರ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗಿತ್ತು. ದೇವರಾಜ್ ರೆಡ್ಡಿಯವರ ಆ ಒಂದು ಅಮೂಲ್ಯ ಸಲಹೆಯಿಂದ ಪ್ರೇರಿತಳಾಗಿ ನಾನು ಸಹ ನಮ್ಮ ಮನೆಯಲ್ಲಿ ಕಳೆದ 13 ವರ್ಷಗಳಿಂದ ಮಳೆನೀರು ಕೊಯ್ಲು ಮಾಡಿಸಿಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಮಳೆನೀರನ್ನೇ ನಾವು ಬಳಸುತ್ತಿದ್ದೇವೆ. ಈ ವಿಚಾರ ನಮಗೆ ಅಪಾರವಾದ ಆತ್ಮತೃಪ್ತಿಯನ್ನು ತಂದುಕೊಟ್ಟಿದೆ. ನೀರಿನ ಸಂರಕ್ಷಣೆ ವಿಚಾರದಲ್ಲಿ ಸರ್ಕಾರದಿಂದಲೂ ಕೆಲವು ಮಹತ್ವದ ಆದೇಶಗಳು ಹೊರಡಬೇಕಾಗಿದೆ. ಇನ್ನು ಮುಂದೆ ಮಳೆನೀರು ಸಂಗ್ರಹ ಹಾಗೂ ಮಳೆನೀರು ಕೊಯ್ಲು ಎನ್ನುವುದನ್ನು ಕಡ್ಡಾಯ ಮಾಡಬೇಕಾದ ಅಗತ್ಯವಿದೆ. ಇದರ ಜೊತೆಗೆ ಪ್ರತಿಯೊಬ್ಬ ಸಾರ್ವಜನಿಕರಲ್ಲೂ ಈ ಬಗ್ಗೆ ಅರಿವು ಮೂಡಬೇಕಿದೆ. ‘ನಂದೇನು ಬಿಡು, ನಾನೊಬ್ಬಳು ಅಥವಾ ನಾನೊಬ್ಬನೇ ಮಾಡಿದರೆ ಏನು ಉಪಯೋಗ’ ಎನ್ನುವ ಉದಾಸೀನದ ಮನೋಭಾವನೆ ಜನರ ಮನಸ್ಸಿನಿಂದ ಸಂಪೂರ್ಣವಾಗಿ ಹೊರಟುಹೋಗಬೇಕು ಮತ್ತು ಎಲ್ಲರೂ ಮಳೆನೀರನ್ನು ಸಂಗ್ರಹಿಸಲು ಮುಂದಾಗಬೇಕು.
ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜುಗಳ ಮಕ್ಕಳಿಗೂ ನೀರಿನ ಸಂರಕ್ಷಣೆಯ ಉಪಯೋಗದ ಬಗ್ಗೆ ತಿಳಿಸಿಕೊಡಬೇಕಾಗಿದೆ. ಸಮಾಜದಲ್ಲಿ ಹೆಚ್ಚೆಚ್ಚು ಗಿಡ-ಮರಗಳನ್ನು ನೆಡುವುದರಿಂದ ಮಳೆ ಹೆಚ್ಚಾಗಿ ಬರುತ್ತದೆ. ಕಾಡು ಹೆಚ್ಚಾದರೆ ಮಳೆ ಬರುತ್ತದೆ ಮತ್ತು ಮಳೆಯಿಂದ ನಮಗೆ ಆರೋಗ್ಯದ ಜೊತೆಗೆ ಜೀವನದ ಮಹತ್ವ ಏನೆಂಬುದು ತಿಳಿಯುತ್ತದೆ, ಆಗ ನಮಗೆ ನೀರಿನ ಅಭಾವವೂ ಕೂಡ ಕಡಿಮೆಯಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನೀರನ್ನು ಉಳಿಸಿಕೊಡುವ ದೊಡ್ಡ ಜವಾಬ್ದಾರಿ ಪ್ರಸ್ತುತ ನಮ್ಮ ಮೇಲಿದೆ. ಅದನ್ನು ನಾವೆಲ್ಲರೂ ಅತ್ಯಂತ ಶ್ರದ್ಧೆಯಿಂದ ಪ್ರಮುಖ ಕೆಲಸವೆಂದು ಭಾವಿಸಬೇಕು. ಹಿರಿಯರು ಮಕ್ಕಳಿಗೆ ಪ್ರಕೃತಿಯ ಮಹತ್ವವನ್ನು ಹೇಳಿಕೊಡುತ್ತಾ, ನಾವು ಪ್ರಕೃತಿಯನ್ನು ಬಳಸಿಕೊಂಡಿದ್ದೇವೆ ಮತ್ತು ಆ ಪ್ರಕೃತಿಗಾಗಿ ನಾವೇನಾದರೂ ಮಾಡಬೇಕಲ್ಲವೇ ಎನ್ನುವ ಯೋಚನೆಯೊಂದಿಗೆ ಕೆಲಸ ಮಾಡಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳಿಗೂ ನೀರು ಬೇಕಿರುವುದರಿಂದ ಅಲ್ಲಿ ಎಷ್ಟೊಂದು ನೀರು ಪೋಲಾಗುತ್ತಿದೆ ಹಾಗೂ ಅಲ್ಲಿನ ನದಿ ಮತ್ತು ಕೆರೆಗಳೆಲ್ಲವೂ ಕಲುಷಿತಗೊಂಡು ಮಾಲಿನ್ಯವಾಗುತ್ತಿವೆ. ಆ ನೀರನ್ನು ಶುದ್ಧೀಕರಣ ಮಾಡಬೇಕಾದ ಅನಿವಾರ್ಯತೆ ಇದೆ. ಹೀಗೆ ನೀರಿನ ವಿಷಯದಲ್ಲಿ ಮಾಡಬೇಕಾದ ಎಷ್ಟೋ ವಿಚಾರಗಳಿದ್ದು, ನಾವು ಕಾಡನ್ನು ಬೆಳೆಸುವುದರಿಂದ, ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವುದರಿಂದ ಹಾಗೂ ಕೆರೆಗಳ ಹೂಳೆತ್ತುವುದರಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಬಹುದು. ಇವೆಲ್ಲ ಕೆಲಸಗಳನ್ನು ಒಟ್ಟಾಗಿ ಮಾಡಿದಾಗ ಮಾತ್ರ ನಾವು ನೀರನ್ನು ಸಂಪೂರ್ಣವಾಗಿ ಸಂರಕ್ಷಿಸಲು ಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ಮನೆಗಳಲ್ಲಿ ಮಾಡುವ ಸಣ್ಣ ಸಣ್ಣ ವಿಚಾರಗಳಿಂದ ಹಿಡಿದು ಸಮಾಜದ ದೊಡ್ಡ ಮಟ್ಟದವರೆಗೂ ನೀರಿನ ಸಂಗ್ರಹದ ಕೆಲಸಗಳು ತುಂಬಾ ನಡೆಯಬೇಕಾಗಿದೆ ಎಂದು ವರಲಕ್ಷ್ಮಿ ಅವರು ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.























