Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಪ್ಪುದಾರಿಗೆಳೆಯುವ ಜಾಹೀರಾತು ; ಲೋಟ್ಟೆ ಇಂಡಿಯಾ, ಫರ್ನ್ಸ್ ಎಂಡ್ ಪೆಟಲ್ಸ್‌ ಗೆ FSSAI ನೋಟಿಸ್!

---Advertisement---

ದೆಹಲಿ.ಜುಲೈ.08: ದೇಶದಲ್ಲಿ ಗ್ರಾಹಕರ ಹಿತರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ವಿವಿಧ ಆಹಾರ ಉತ್ಪನ್ನಗಳ ಮೇಲೆ ತಪ್ಪುದಾರಿಗೆಳೆಯುವ ಪ್ರಚಾರ ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರಮುಖ ಕಂಪನಿಗಳಾದ ಲೋಟ್ಟೆ ಇಂಡಿಯಾ, ಫರ್ನ್ಸ್ ಎಂಡ್ ಪೆಟಲ್ಸ್ ಮತ್ತು ಕುಬೇರ ಫುಡ್ಸ್ ಸಂಸ್ಥೆಗಳಿಗೆ ಎಫ್‌ಎಸ್‌ಎಸ್‌ಎಐ ನೋಟಿಸ್ ಜಾರಿ ಮಾಡಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ನಿಯಮ ಉಲ್ಲಂಘಿಸಿರುವ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಏಳು ದಿನಗಳ ಒಳಗೆ ಸೂಕ್ತ ವಿವರಣೆ ನೀಡುವಂತೆ ಈ ಕಂಪನಿಗಳಿಗೆ ಸೂಚಿಸಲಾಗಿದೆ ಎಂದು ಪ್ರಾಧಿಕಾರವು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಗ್ರಾಹಕರಿಂದ ಬಂದ ದೂರುಗಳು ಮತ್ತು ಸ್ವಯಂ ಪ್ರೇರಿತ ತನಿಖೆಯ ಆಧಾರದ ಮೇಲೆ ಈ ನೋಟಿಸ್‌ಗಳನ್ನು ನೀಡಲಾಗಿದೆ.

ಪ್ರಸಿದ್ಧ ‘ಲೋಟ್ಟೆ ಚೋಕೋ ಪೈ’ ತಯಾರಕ ಸಂಸ್ಥೆಯಾದ ಲೋಟ್ಟೆ ಇಂಡಿಯಾದಲ್ಲಿ ಹಲವು ಪ್ರಮುಖ ನಿಯಮ ಉಲ್ಲಂಘನೆಗಳನ್ನು ಪ್ರಾಧಿಕಾರ ಪತ್ತೆಹಚ್ಚಿದೆ. ಕಂಪನಿಯು ಪೂರ್ವಾನುಮತಿ ಪಡೆಯದೆ ತನ್ನ ಹಳೆಯ ಹೆಸರಾದ “ಲೋಟ್ಟೆ ಇಂಡಿಯಾ ಕಾರ್ಪೊರೇಷನ್ ಲಿಮಿಟೆಡ್” ಎಂಬ ಲೇಬಲ್‌ಗಳನ್ನೇ ಬಳಸುತ್ತಿರುವುದು ಕಂಡುಬಂದಿದೆ. ಇದರೊಂದಿಗೆ, ಲೋಟ್ಟೆ ಚೋಕೋ ಪೈ ರಿಚ್ ಮಾರ್ಷ್‌ಮ್ಯಾಲೋ, ರಿಯಲ್ ಆರೆಂಜ್ ಮತ್ತು ಚೋಕೋ ಬರ್ಸ್ಟ್ ಉತ್ಪನ್ನಗಳ ಮೇಲೆ ‘100% ವೆಜಿಟೇರಿಯನ್’ ಎಂದು ನಮೂದಿಸಲಾಗಿದ್ದು, ಇದು ಗ್ರಾಹಕರನ್ನು ಸಂಪೂರ್ಣವಾಗಿ ತಪ್ಪುದಾರಿಗೆಳೆಯುವಂತಿದೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ.
ಅಲ್ಲದೆ, ಪೆಪೆರೊ ಕ್ರಂಚಿ ಬಿಸ್ಕೆಟ್ ಸ್ಟಿಕ್ಸ್ ಮತ್ತು ಪೆಪೆರೊ ಒರಿಜಿನಲ್ ಬಿಸ್ಕೆಟ್ ಸ್ಟಿಕ್ಸ್ ಉತ್ಪನ್ನಗಳಲ್ಲಿ ನಿಗದಿಪಡಿಸಿದ ಮಾದರಿಯಲ್ಲಿ ಪೌಷ್ಟಿಕಾಂಶದ ವಿವರಗಳನ್ನು ನೀಡಿಲ್ಲ. ಇನ್ನುಳಿದಂತೆ ಲಾಲಿ ಬ್ಲಿಸ್ ಲಾಲಿಪಾಪ್‌ನಲ್ಲಿ ವಿಟಮಿನ್ ಮಟ್ಟವು ನಿಯಮಾವಳಿಗಳಿಗೆ ಅನುಗುಣವಾಗಿಲ್ಲ ಮತ್ತು ಫ್ರೂಟ್ಸ್ ಎಕ್ಲೇರ್ಸ್ ಚಾಕೊಲೇಟ್‌ಗಳಲ್ಲಿ ಯಾವುದೇ ಹಣ್ಣಿನ ಅಂಶವಿಲ್ಲದಿದ್ದರೂ ಹಣ್ಣುಗಳಿರುವುದಾಗಿ ಬಿಂಬಿಸಿ ಗ್ರಾಹಕರನ್ನು ದಿಕ್ಕು ತಪ್ಪಿಸಲಾಗಿದೆ.

ಇದೇ ವೇಳೆ ಕುಬೇರ ಫುಡ್ಸ್ ಸಂಸ್ಥೆಯ ‘ಸಾಫ್ಟ್ ಅಂಡ್ ಫ್ರೆಶ್ ಕ್ರೀಮ್ ಬನ್ ಪೈನಾಪಲ್’ ಉತ್ಪನ್ನದ ಮೇಲಿನ ಕ್ಲೈಮ್‌ಗಳು ಕೂಡ ಸಂಪೂರ್ಣ ಸುಳ್ಳು ಎಂದು ಪ್ರಾಧಿಕಾರ ಪತ್ತೆಹಚ್ಚಿದೆ. ಈ ಉತ್ಪನ್ನದ ಪ್ಯಾಕೆಟ್‌ನ ಮುಂಭಾಗದಲ್ಲಿ “100% ನ್ಯಾಚುರಲ್” ಮತ್ತು “ಯಾವುದೇ ಪ್ರಿಸರ್ವೇಟಿವ್ಸ್ ಅಥವಾ ಬಣ್ಣಗಳನ್ನು ಬಳಸಲಾಗಿಲ್ಲ” ಎಂದು ಬರೆಯಲಾಗಿದೆ.

ಆದರೆ ಆಶ್ಚರ್ಯಕರ ರೀತಿಯಲ್ಲಿ ಒಳಗಿನ ಲೇಬಲ್‌ ನಲ್ಲಿ ಪ್ರಿಸರ್ವೇಟಿವ್ಸ್, ಸಿಂಥೆಟಿಕ್ ಫುಡ್ ಕಲರ್ ಹಾಗೂ ಫ್ಲೇವರ್ ಬಳಸಿರುವುದಾಗಿ ಸ್ವತಃ ಕಂಪನಿಯೇ ನಮೂದಿಸಿದೆ. ಇದು ಕಾನೂನಿನ ನೇರ ಉಲ್ಲಂಘನೆಯಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಅಸಮಾಧಾನ ವ್ಯಕ್ತಪಡಿಸಿದೆ.

ಉಡುಗೊರೆ ಮತ್ತು ಹೂವುಗಳ ಮಾರಾಟಕ್ಕೆ ಹೆಸರಾಗಿರುವ ಫರ್ನ್ಸ್ ಎಂಡ್ ಪೆಟಲ್ಸ್ ಸಂಸ್ಥೆಯ ‘ರೋಸ್ಟೆಡ್ ಆಲ್ಮಂಡ್ ಚಾಕೊಲೇಟ್’ ಮೇಲೆಯೂ ಇಂತಹದ್ದೇ ವಂಚನೆ ಪತ್ತೆಯಾಗಿದೆ. ಚಾಕೊಲೇಟ್ ಪ್ಯಾಕೆಟ್ ಮೇಲೆ ‘ಪ್ರೀಮಿಯಂ ಚಾಕೊಲೇಟ್’ ಎಂದು ಲೇಬಲ್ ಮಾಡಲಾಗಿದ್ದರೂ, ಅದರಲ್ಲಿ ಹೈಡ್ರೋಜೀಕರಿಸಿದ ಸಸ್ಯಜನ್ಯ ಕೊಬ್ಬನ್ನು ಬಳಸಿರುವುದು ದೃಢಪಟ್ಟಿದೆ. ಇದರೊಂದಿಗೆ ಶಿಫಾರಸು ಮಾಡಿದ ಆಹಾರದ ಪ್ರಮಾಣ (RDA) ಮತ್ತು ಪದಾರ್ಥಗಳ ವಿವರಣೆಯನ್ನು ನೀಡುವಲ್ಲಿಯೂ ಕಂಪನಿ ಲೋಪವೆಸಗಿದೆ. ಇತ್ತೀಚೆಗಷ್ಟೇ ಹೆರಿಟೇಜ್ ಫುಡ್ಸ್ ಲಿಮಿಟೆಡ್‌ನ ‘ಫ್ರೆಶ್ ಪನೀರ್’ ಉತ್ಪನ್ನಕ್ಕೂ ಇಂತಹದ್ದೇ ನೋಟಿಸ್ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧದ ಕ್ರಮಗಳನ್ನು ಪ್ರಾಧಿಕಾರವು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now