ಸುದ್ದಿಒನ್, ಚಿತ್ರದುರ್ಗ, ಜು. 08 : ಒಂದು ಕಾಲದಲ್ಲಿ ಚಿಂತಕರ ಚಾವಡಿ ಎಂದು ಹೆಸರಾಗಿದ್ದ ವಿಧಾನ ಪರಿಷತ್ ಇಂದಿನ ದಿನಮಾನದಲ್ಲಿ ಹಣವಂತರ ಚಾವಡಿಯಾಗಿದೆ, ಮತದಾರರು ಆಯ್ಕೆ ಮಾಡುವಾಗ ನಮಗೆ ಯಾರು ಸಹಾಯವನ್ನು ಮಾಡುತ್ತಾರೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂದು ತಿಳಿದು ಅಂತಹವರನ್ನು ಆಯ್ಕೆ ಮಾಡುವಂತೆ ಪದವೀಧರ ಮತದಾರರಿಗೆ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ಜಿಲ್ಲೆ ಘಟಕದವತಿಯಿಂದ ನಗರದ ಸ್ಟೇಡಿಯಂ ರಸ್ತೆಯಲ್ಲಿನ ಜಿ ಜಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪೂರ್ವ ಸಿದ್ದತಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಧಾನಸಭೆಯಲ್ಲಿ ಶಾಸಕರು ಮಾಡಿದ ಕಾನೂನು, ನಿರ್ಣಯಗಳನ್ನು ವಿಧಾನ ಪರಿಷತ್ಗೆ ಕಳುಹಿಸಲಾಗುತ್ತದೆ, ಅದನ್ನು ಅವರು ಪರೀಶಿಲನೆಯನ್ನು ನಡೆಸಿ ಅದು ಸರಿಯಾಗಿ ಇದ್ದೇಯೇ ಇಲ್ಲವೆ, ಇದು ರಾಜ್ಯಕ್ಕೆ ಅಗತ್ಯವೇ ಎಂದು ಚರ್ಚೆಯನ್ನು ಮಾಡುವುದರ ಮೂಲಕ ಪಾಸಾಗುತ್ತಿತ್ತು ಆದರೆ ಈಗ ವಿಧಾನ ಪರಿಷತ್ ಎಂದರೆ ಹಣವಂತರ ಚಾವಡಿಯಾಗಿದೆ, ಹಣವನ್ನು ಇದ್ದವರು ತಮ್ಮ ಸ್ವಾರ್ಥಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ, ತಮ್ಮ ವ್ಯವಹಾರವನ್ನು ಉಳಿಸಿಕೊಳ್ಳಲು ಅಧಿಕಾರಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಅಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜನ ಸಂಘ ಹಾಗೂ ಬಿಜೆಪಿ 8 ಬಾರಿ ಗೆಲುವನ್ನು ಸಾಧಿಸಿದೆ, ವಿಧಾನ ಪರಿಷತ್ನಲ್ಲಿ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಬುದ್ದಿವಂತರ ಇರಬೇಕಾದ ಪರಿಷತ್ ಆಗಬೇಕಿದೆ ಆದರೆ ಇಂದು ಅದು ಹಣವಂತರ ಪರಿಷತ್ ಆಗುತ್ತಿದೆ, ಸೂಕ್ತವಾದ ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡುತ್ತಿಲ್ಲ, ಇದ್ದಲ್ಲದೆ ಚುನಾವಣೆಯಲ್ಲಿ ಸ್ಪರ್ದೇ ಮಾಡುವವರು ಸಹಾ ಅಂತಹವರೇ ಆಗಿದ್ದಾರೆ, ತಮ್ಮ ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದಾರೆ ಸೇವಾಭಾವನೆಯಿಂದ ಅಲ್ಲ ಎಂದ ಅವರು, ಬಿಜೆಪಿ ತನ್ನ ಕಾರ್ಯಕರ್ತರಾದ ಕೆ.ಎಂ.ಸುರೇಶ್ರವರಿಗೆ ಅಗ್ನೇಯ ಪದವೀಧರ ಕ್ಷೇತ್ರ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಅಲ್ಲದೆ ಆತನ ಗೆಲುವಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ಈ ಚುನಾವಣೆ 5 ಜಿಲ್ಲೆಯ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ, ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ ಸಹಾ ಬಿಜೆಪಿ ಜಯವನ್ನು ಸಾಧಿಸಿದೆ ಎಂದರು.
ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಚುನಾವಣೆಗೆ ಜನತಾದಳದ ಮುಖಂಡರನ್ನು ಭೇಟಿ ಮಾಡಿ ಸಹಕಾರವನ್ನು ಕೊರಲಾಗಿದೆ. ಅವರು ಸಹಾ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿಯ ಬಗ್ಗೆ ಮಾತನಾಡುತ್ತಿದ್ದಾರೆ ಇದಕ್ಕೂ ಮುನ್ನಾ ಪಕ್ಷದ ಕಾರ್ಯಕರ್ತರು ಪಕ್ಷದ ನಾಯಕರುಗಳ ಮೇಲೆ ವಿಶ್ವಾಸ, ನಂಬಿಕೆ ಇರಬೇಕಿದೆ ಆಗ ಮತದಾರರಿಗೆ ನಿಮ್ಮ ಮೇಲೆ ನಂಬಿಕೆ ಬರಲು ಸಾಧ್ಯವಿದೆ ಎಂದು ತಿಳಿಸಿದರು.
ಈ ಸಭೆಗೆ ಶಾಸಕರಾದ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಿವಯೋಗಿ ಸ್ವಾಮಿ, ಜಿಲ್ಲಾ ಆಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಮುಖಂಡರುಗಳಾದ ಎನ್.ಆರ್.ಲಕ್ಷ್ಮೀಕಾಂತ, ರಾಜಣ್ಣ, ಅನಿಲ್ ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಆಗ್ನೇಯ ಚುನಾವಣಾ ಸಹಾ ಪ್ರಭಾರಿ ರಘುಚಂದನ್, ಉಪಾಧ್ಯಕ್ಷರಾದ ಡಾ.ಸಿದ್ಧಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದ, ಮಾಧುರಿ ಗೀರೀಶ್, ಮೋಹನ್ ಕುಮಾರ್, ಕೇಶವ ಪ್ರಸಾದ್, ಕಾಡುಗೊಲ್ಲ ಸಂಘದ ರಾಜ್ಯಧ್ಯಕ್ಷರಾದ ರಾಜಣ್ಣ, ರಾಮದಾಸ್, ನಗರಾಧ್ಯಕ್ಷ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪಕ್ಷದ ಅಗ್ನೇಯ ಪದವೀಧರ ಕ್ಷೇತ್ರ ಅಭ್ಯರ್ಥಿ ಕೆ.ಎಂ.ಸುರೇಶ್ ಸೇರಿದಂತೆ ಭಾರತೀಯ ಜನತಾ ಪಾರ್ಟಿಯ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿದಿಗಳು, ಜಿಲ್ಲೆಯ ಎಲ್ಲಾ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾ ಅಧ್ಯಕ್ಷರು ಸೇರಿದಂತೆ ಸರ್ವ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.










