ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ವೃದ್ದರು, ಬುದ್ದಿ ಮಾಂಧ್ಯರು ಹಾಗೂ ನಿಜವಾದ ನಿರಾಶ್ರಿತರನ್ನು ಗುರುತಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ಸಮುದಾಯ ಸಂಘಟನಾಧಿಕಾರಿ ಉಮೇಶ್ ಡಿ. ತಿಳಿಸಿದರು.
ಮುನ್ಸಿಪಲ್ ಕಾಂಪ್ಲೆಕ್ಸ್ ನಲ್ಲಿರುವ ಗಾಡ್ಸ್ ನಗರ ವಸತಿ ರಹಿತರ ಆಶ್ರಯ ಕೇಂದ್ರಲ್ಲಿ ವಿಶ್ವ ವಸತಿ ರಹಿತರ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಉದ್ಘಾಟಿಸಿ ಮಾತನಾಡಿದರು.
ಬಸ್‍ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಮಾರುಕಟ್ಟೆ ಇನ್ನಿತರೆ ಪ್ರದೇಶಗಳಲ್ಲಿ ಮಲಗುವ ನಿರಾಶ್ರಿತರನ್ನು ಕರೆ ತಂದು ಊಟ ವಸತಿ ಸೌಕರ್ಯ ಒದಗಿಸಿ ಮನಸ್ಸು ಪರಿವರ್ತನೆ ಮಾಡುವ ಕೆಲಸವಾಗಬೇಕು. ಕೈಕಾಲಿನಲ್ಲಿ ಶಕ್ತಿಯಿರುವವರು, ದುಡಿಮೆ ಮಾಡುವವರಿಗೆ ಇಲ್ಲಿ ಜಾಗ ಕೊಡಬಾರದು. ಯಾರಾದರೂ ದೌರ್ಜನ್ಯವೆಸಗಿ ಇಲ್ಲಿ ಬಂದು ಸೇರಿಕೊಂಡರೆ ಅಂತಹವರ ವಿರುದ್ದ ನಮ್ಮ ಗಮನಕ್ಕೆ ತನ್ನಿ. ನಿರಾಶ್ರಿತರ ಕೇಂದ್ರವೆಂದರೆ ಸಾರ್ಥಕ ಕೆಲಸವಾಗಬೇಕು. ಸರ್ಕಾರದ ಇಂತಹ ಸೌಲಭ್ಯಗಳು ನಿಜವಾದ ನಿರಾಶ್ರಿತರಿಗೆ ತಲುಪಬೇಕೆಂದು ಹೇಳಿದರು.
ಗಾಡ್ಸ್ ಸಂಸ್ಥೆಯ ಕಾರ್ಯದರ್ಶಿ ಸೂರ್ಯನಾರಾಯಣ, ಅಧ್ಯಕ್ಷೆ ಕವಿತ, ನ್ಯಾಯವಾದಿ ಮಾಧವಿ, ಸಿ.ಆರ್.ಪಿ.ಗಳಾದ ಶೃತಿ, ಜಯಶ್ರಿ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.










