ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ಸಂವಿಧಾನದಲ್ಲಿ ಹೆಣ್ಣು-ಗಂಡೆಂಬ ತಾರತಮ್ಯವಿಲ್ಲದೆ ಸಮಾನವಾದ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಆದರೆ ಮಹಿಳೆಯರ ಪ್ರತ್ಯೇಕವಾದ ಹಕ್ಕುಗಳಿಗಾಗಿ ಮಾತನಾಡಬೇಕಾದ ಅನಿವಾರ್ಯತೆಯಿದೆ ಎಂದು ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಮಮತಾ ಸಾಹುಕಾರ ವಿಷಾಧಿಸಿದರು.
ಸಮಾಜಶಾಸ್ತ್ರ ವಿಭಾಗ ಹಾಗೂ ಐ.ಕ್ಯು.ಎ.ಸಿ. ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮಹಿಳೆ ಮತ್ತು ಮಾನವ ಹಕ್ಕುಗಳ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳು ಕಳೆದಿದ್ದರೂ ಮಹಿಳೆಗೆ ಇನ್ನು ಸಮಾನತೆ ಸಿಕ್ಕಿಲ್ಲ. ಮಹಿಳೆಯ ಹಕ್ಕನ್ನು ರಕ್ಷಿಸಿದರೆ ಇಡಿ ಮಾನವೀಯತೆಯನ್ನು ರಕ್ಷಿಸಿದಂತೆ. ಸಂವಿಧಾನ ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು, ಮಹಿಳೆಯರಿಗಾಗಿಯೇ ವಿಶೇಷ ಕಾನೂರು ರಚಿಸಲು ಅವಕಾಶ. ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಆಚರಣೆಗಳನ್ನು ತ್ಯಜಿಸುವುದು ಪ್ರತಿಯೊಬ್ಬರ ಕರ್ತವ್ಯ ಇವು ಪ್ರಮುಖ ಅಂಶಗಳಾಗಿವೆ ಎಂದರು.
ಭೇಟಿ ಬಚಾವೋ ಭೇಟಿ ಪಡಾವೋ, ಆರ್ಥಿಕ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸ್ವಹಾಯ ಸಂಘಗಳು, ಸುಕನ್ಯಾ ಸಮೃದ್ದಿ ಯೋಜನೆ, ಸುರಕ್ಷತೆಗಾಗಿ 181 ಮಹಿಳಾ ಸಹಾಯವಾಣಿ, ಸಖಿ ಒನ್ ಸ್ಟಾಪ್ ಸೆಂಟರ್, ಪೋಕ್ಸೊ ಕಾಯಿದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯನ್ನು ಮಹಿಳೆಯರ ಸುರಕ್ಷತೆಗಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇಷ್ಟೆಲ್ಲಾ ಕಾನೂನುಗಳಿದ್ದರು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ವೈರಲ್ ಮಾಡುವುದು. ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಮಾತೃತ್ವ ರಜೆಯಲ್ಲಿ ತಾರತಮ್ಯ, ಕಡಿಮೆ ವೇತನ, ಗ್ರಾಮೀಣ ಭಾಗಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣದಿಂದ ಇನ್ನು ವಂಚಿತರಾಗುತ್ತಿದ್ದಾರೆ. ಮುಟ್ಟಿನ ನೈರ್ಮಲ್ಯ, ಪೌಷ್ಠಿಕಾಂಶವುಳ್ಳ ಆಹಾರದ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
ವಿಶ್ವ ಸಂಸ್ಥೆಯ ವರದಿ ಪ್ರಕಾರ ಜಗತ್ತಿನಲ್ಲಿ ಪ್ರತಿ ಮೂರು ಮಹಿಳೆಯರಲ್ಲಿ ಓರ್ವ ಮಹಿಳೆ ತನ್ನ ಜೀವಿತಾವಧಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಇದು ಕೇವಲ ಮಹಿಳೆಯ ಸಮಸ್ಯೆಯಲ್ಲ. ಮಾನವ ಹಕ್ಕುಗಳ ಉಲ್ಲಂಘನೆ. ಇದರ ವಿರುದ್ದ ಸಮಾಜ ಎಚ್ಚೆತ್ತುಕೊಳ್ಳಬೇಕು. ಮಹಿಳಾ ಸಬಲೀಕರಣವೆಂದರೆ ಕೇವಲ ಸರ್ಕಾರದಿಂದಾಗುವುದಲ್ಲ. ಕುಟುಂಬದ ಪ್ರೋತ್ಸಾಹ, ಹೆಣ್ಣಿಗೂ ಕಡ್ಡಾಯ ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮುಖ್ಯ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಣ್ಣ, ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರದ
ಎಸ್.ಬಿ.ಪಾಟೀಲ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಡಾ.ವಿಜಯಲಕ್ಷ್ಮಿ ಆರ್. ಇವರುಗಳು ವೇದಿಕೆಯಲ್ಲಿದ್ದರು.











