ಇಂದಿನ ದಿನಗಳಲ್ಲಿ ಐಟಿ ಕೆಲಸ ಎಂದರೆ ಕೈತುಂಬಾ ಸಂಬಳ, ಐಷಾರಾಮಿ ಜೀವನ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಅದೇ ಕೆಲಸದ ಹಿಂದಿರುವ ಅತಿಯಾದ ಮಾನಸಿಕ ಒತ್ತಡಕ್ಕೆ ಬೇಸತ್ತು, ನೆಮ್ಮದಿಯ ಜೀವನಕ್ಕಾಗಿ ಮಹಿಳೆಯೊಬ್ಬರು ತಮ್ಮ 9 ವರ್ಷಗಳ ಐಟಿ ಮ್ಯಾನೇಜರ್ ವೃತ್ತಿಯನ್ನು ತೊರೆದು ಆಟೋ ರಿಕ್ಷಾ ಚಾಲನೆಯನ್ನು ಆಯ್ದುಕೊಂಡಿದ್ದಾರೆ. ಸದ್ಯ ಈ ಅಪರೂಪದ ಹಾಗೂ ಧೈರ್ಯದ ನಿರ್ಧಾರದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಉದ್ಯಮಿ ಮತ್ತು ಸಿಇಒ ಆಗಿರುವ ನೆಜ್ರಿನ್ ಮಿಧ್ಲಾಜ್ (Nezrin Midhlaj) ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪ್ರಯಾಣಿಸುತ್ತಿದ್ದ ಆಟೋದ ಮಹಿಳಾ ಚಾಲಕಿಯೊಂದಿಗೆ ಮಾತನಾಡಿದಾಗ ಈ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಇಂದು ನಾನು ಒಬ್ಬ ಮಹಿಳಾ ಆಟೋ ಚಾಲಕಿಯನ್ನು ಭೇಟಿಯಾದೆ. ಆಕೆ ತುಂಬಾ ಆತ್ಮವಿಶ್ವಾಸದಿಂದ, ಅಚ್ಚುಕಟ್ಟಾದ ಉಡುಪಿನಲ್ಲಿ, ಜೀವನದಲ್ಲಿ ಸಂಪೂರ್ಣ ನೆಮ್ಮದಿಯಿಂದ ಇದ್ದಂತೆ ಕಾಣುತ್ತಿದ್ದರು. ಪುರುಷ ಪ್ರಧಾನ ಕ್ಷೇತ್ರದಲ್ಲಿದ್ದೀರಿ, ಹೇಗನ್ನಿಸುತ್ತದೆ? ಎಂದು ನಾನು ಕೇಳಿದಾಗ ಆಕೆ ನೀಡಿದ ಉತ್ತರ ನನ್ನ ಮನಸ್ಸಿನಲ್ಲಿ ಉಳಿದುಹೋಯಿತು” ಎಂದು ನೆಜ್ರಿನ್ ಬರೆದುಕೊಂಡಿದ್ದಾರೆ.
ಒತ್ತಡದ ಬದುಕಿನಿಂದ ನೆಮ್ಮದಿಯೆಡೆಗೆ…
ಆ ಮಹಿಳಾ ಚಾಲಕಿ ಈ ಹಿಂದೆ ಬರೋಬ್ಬರಿ 9 ವರ್ಷಗಳ ಕಾಲ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆದರೆ ಕಾರ್ಪೊರೇಟ್ ವಲಯದ ನಿರಂತರ ಒತ್ತಡ, ಡೆಡ್ಲೈನ್ಗಳು ಮತ್ತು ಮಾನಸಿಕ ತೊಳಲಾಟದಿಂದ ಮುಕ್ತಿ ಪಡೆಯಲು ಅವರು ಆ ಕೆಲಸಕ್ಕೆ ರಾಜೀನಾಮೆ ನೀಡಿದರು. ಈಗ ಅವರು ಸ್ವಂತ ಆಟೋ ಓಡಿಸುತ್ತಾ, ಯಾವುದೇ ಬಾಸ್ ಕಾಟವಿಲ್ಲದೆ ತಿಂಗಳಿಗೆ ಸುಮಾರು 60,000 ರೂಪಾಯಿ ಸಂಪಾದಿಸುತ್ತಿದ್ದಾರೆ. “ಎಲ್ಲಕ್ಕಿಂತ ಮುಖ್ಯವಾಗಿ ನಾನು ಈಗ ತುಂಬಾ ಸಂತೋಷವಾಗಿದ್ದೇನೆ” ಎಂದು ಆ ಮಹಿಳೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದರಿಂದ ಪ್ರಭಾವಿತರಾದ ಉದ್ಯಮಿ ನೆಜ್ರಿನ್, “ನಾವು ಹಲವು ಬಾರಿ ಕೇವಲ ಹುದ್ದೆ ಮತ್ತು ಸ್ಥಾನಮಾನಗಳ ಬೆನ್ನತ್ತಿ, ನಮ್ಮನ್ನು ಜೀವಂತವಾಗಿಡುವ ನಿಜವಾದ ಸಂತೋಷ ಯಾವುದು ಎಂಬುದನ್ನೇ ಮರೆತುಬಿಡುತ್ತೇವೆ. ಪ್ರತಿ ಯಶಸ್ಸಿನ ಕಥೆಯೂ ಒಂದೇ ರೀತಿ ಇರುವುದಿಲ್ಲ. ಪ್ರತಿಷ್ಠೆಗಿಂತ ನೆಮ್ಮದಿಯನ್ನು ಆರಿಸಿಕೊಳ್ಳುವುದು ಅತ್ಯಂತ ಧೈರ್ಯದ ನಿರ್ಧಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ:
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಐಟಿ ಉದ್ಯೋಗಿಯೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿ, “ನಾನು 18 ವರ್ಷಗಳಿಂದ ಐಟಿಯಲ್ಲಿದ್ದೇನೆ. ಇಮೇಲ್ ಮೂಲಕ ಮುಗಿಸಬಹುದಾದ ಮೀಟಿಂಗ್ಗಳು, 3 ಗಂಟೆಗಳ ಕಾಲ ನಡೆಯುವ ‘ಕ್ವಿಕ್ ಕಾಲ್ಗಳು’ ಮತ್ತು ಮಧ್ಯರಾತ್ರಿ 3 ಗಂಟೆಗೆ ಬರುವ ಆಫೀಸ್ ಸಮಸ್ಯೆಗಳನ್ನು ಎದುರಿಸಿ ಬದುಕುಳಿದಿದ್ದೇನೆ. ನನಗೀಗ ಎಷ್ಟು ತಾಳ್ಮೆ ಬಂದಿರಬಹುದು ಊಹಿಸಿ!” ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, “ಅವರು ಸರಳ ಮತ್ತು ಸಂತೋಷದ ಜೀವನವನ್ನು ಬಯಸಿದ್ದಾರೆ. ಅವರ ನಿರ್ಧಾರಕ್ಕೆ ಹೆಮ್ಮೆಯಾಗುತ್ತಿದೆ, ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ” ಎಂದು ಹಾರೈಸಿದ್ದಾರೆ.
ಒತ್ತಡದಲ್ಲಿ ಬದುಕುವುದಕ್ಕಿಂತ, ಸ್ವತಂತ್ರವಾಗಿ ಒತ್ತಡವಿಲ್ಲದೆ ಬದುಕುವುದು ಎಷ್ಟೋ ಮೇಲು” ಎಂದು ಹಲವರು ಕಮೆಂಟ್ ಮಾಡುವ ಮೂಲಕ ಈ ಮಹಿಳೆಯ ಯಶಸ್ಸಿನ ಕಥೆಗೆ ಹ್ಯಾಟ್ಸ್ ಆಫ್ ಎಂದಿದ್ದಾರೆ.
https://www.instagram.com/reel/DX9VyA-PVmu/?utm_source=ig_web_button_share_sheet
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















