ನವದೆಹಲಿ: ಭಾರತದಲ್ಲಿ ವಾಟ್ಸಾಪ್ (WhatsApp), ಟೆಲಿಗ್ರಾಂ (Telegram) ಸೇರಿದಂತೆ ವಿವಿಧ ಮೆಸೇಜಿಂಗ್ ಆ್ಯಪ್ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಮಹತ್ವದ ನಿಯಮವೊಂದನ್ನು ಜಾರಿಗೆ ತರಲು ಸಜ್ಜಾಗಿದೆ. 2027ರ ಜನವರಿ 1ರಿಂದ ಜಾರಿಗೆ ಬರಲಿರುವ ಹೊಸ ‘ಸಿಮ್-ಬೈಂಡಿಂಗ್’ (SIM-binding) ನಿಯಮಗಳ ಪ್ರಕಾರ, ಖಾತೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಕಾರ್ಡ್ ಫೋನ್ನಲ್ಲೇ ಇರುವುದು ಕಡ್ಡಾಯವಾಗಲಿದೆ.
ಈ ಹೊಸ ನಿಯಮಗಳನ್ನು ಪಾಲಿಸಲು ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಸಂಬಂಧಪಟ್ಟ ಕಂಪನಿಗಳಿಗೆ 2026ರ ಡಿಸೆಂಬರ್ 31ರವರೆಗೆ ಗಡುವು ನೀಡಿದೆ.
ಹೊಸ ನಿಯಮದಲ್ಲೇನಿದೆ?
ಪ್ರಸ್ತಾವಿತ ನಿಯಮಗಳ ಅಡಿಯಲ್ಲಿ, ನೋಂದಾಯಿತ ಸಿಮ್ ಕಾರ್ಡ್ ಅನ್ನು ಫೋನ್ನಿಂದ ತೆಗೆದರೆ, ನಿಷ್ಕ್ರಿಯಗೊಳಿಸಿದರೆ ಅಥವಾ ಮತ್ತೊಂದು ಸಿಮ್ ಕಾರ್ಡ್ ಬದಲಾಯಿಸಿದರೆ ಮೆಸೇಜಿಂಗ್ ಸೇವೆಗಳ ಲಭ್ಯತೆಗೆ ತೊಂದರೆಯಾಗಲಿದೆ. ಅಂದರೆ, ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್ ಫೋನ್ನಲ್ಲಿ ಸಕ್ರಿಯವಾಗಿದ್ದರೆ ಮಾತ್ರ ಬಳಕೆದಾರರು ಈ ಸೇವೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ನಿರ್ಧಾರಕ್ಕೆ ಕಾರಣವೇನು?
ಡಿಜಿಟಲ್ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಸ್ತುತ ಹಲವು ಮೆಸೇಜಿಂಗ್ ಆ್ಯಪ್ಗಳಲ್ಲಿ ಒಮ್ಮೆ ನೋಂದಣಿ ಮಾಡಿದ ನಂತರ, ಫೋನ್ನಲ್ಲಿ ಆ ಸಿಮ್ ಇಲ್ಲದಿದ್ದರೂ ಆ್ಯಪ್ಗಳನ್ನು ಬಳಸಲು ಸಾಧ್ಯವಾಗುತ್ತಿದೆ. ಸೈಬರ್ ಅಪರಾಧಿಗಳು ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಆನ್ಲೈನ್ ವಂಚನೆ, ಫಿಶಿಂಗ್ ಹಾಗೂ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ.

ಯಾವೆಲ್ಲಾ ಆ್ಯಪ್ಗಳಿಗೆ ಅನ್ವಯ?
ವಾಟ್ಸಾಪ್ ಮತ್ತು ಟೆಲಿಗ್ರಾಂ ಮಾತ್ರವಲ್ಲದೆ ಸಿಗ್ನಲ್ (Signal), ಅರಟ್ಟೈ (Arattai), ಶೇರ್ಚಾಟ್ (ShareChat), ಜೋಶ್ (Josh) ಹಾಗೂ ಜಿಯೋಚಾಟ್ (JioChat) ನಂತಹ ಇತರೆ ಮೆಸೇಜಿಂಗ್ ವೇದಿಕೆಗಳಿಗೂ ಈ ನಿರ್ದೇಶನಗಳು ಅನ್ವಯವಾಗಲಿವೆ.
ಜೊತೆಗೆ, ಮೆಸೇಜಿಂಗ್ ಆ್ಯಪ್ಗಳ ವೆಬ್ ಆವೃತ್ತಿಗಳ (Web versions) ಸುರಕ್ಷತೆಗೂ ನಿಯಮ ರೂಪಿಸಲಾಗಿದೆ. ಈ ಮೊದಲು ಪ್ರತಿ ಆರು ಗಂಟೆಗೊಮ್ಮೆ ವೆಬ್ ಸೆಷನ್ಗಳು ಸ್ವಯಂಚಾಲಿತವಾಗಿ ಲಾಗ್-ಔಟ್ ಆಗಬೇಕು ಎಂಬ ನಿಯಮ ಚರ್ಚೆಯಲ್ಲಿತ್ತಾದರೂ, ಸದ್ಯ ಸರ್ಕಾರ ಅಪಾಯದ ಸಾಧ್ಯತೆಯನ್ನು (Risk-based approach) ಆಧರಿಸಿ ಬಳಕೆದಾರರನ್ನು ಲಾಗ್-ಔಟ್ ಮಾಡುವ ವಿಧಾನವನ್ನು ಪರಿಗಣಿಸಿದೆ.












