ಸುದ್ದಿಒನ್, ಚಿತ್ರದುರ್ಗ, ಜುಲೈ. 25 ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳಲ್ಲಿ ರಾಜ್ಯದ ಪಾಲಿನ ಹಣವನ್ನು ರಾಜ್ಯವನ್ನು ಕೊಟ್ಟಿದ್ದು, ಕೇಂದ್ರ ಸರ್ಕಾರ ತನ್ನ ಪಾಲಿನ 8 ಸಾವಿರ ಕೋಟಿ ರೂ. ಹಣವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ ಎಂದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಟ್ಟು 40718 ಕೋಟಿ ರೂ. ಗಳ ಪೈಕಿ ಕೇಂದ್ರ ಸರ್ಕಾರ ಈವರೆಗೆ ಕೇವಲ 11786 ಕೋಟಿ ರೂ. ಮಾತ್ರ ನೀಡಿದ್ದು, ರಾಜ್ಯ ಸರ್ಕಾರ 28922 ಕೋಟಿ ರೂ. ಒದಗಿಸಿದೆ. ಈ ಕುರಿತಂತೆ ನಾವು ಈಗಾಗಲೆ ಖರ್ಚಾದ ಅನುದಾನ ಕುರಿತು ಹಣ ಬಳಕೆ ಪ್ರಮಾಣಪತ್ರ ನೀಡಿದ್ದೇವೆ. ಇನ್ನೂ 8 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರ ಹಣ ನೀಡಬೇಕಿದೆ. ಕೇಂದ್ರ ಸರ್ಕಾರ ನೀಡಿರುವ ವಾಗ್ದಾನದಂತೆ ನಡೆದುಕೊಳ್ಳುತ್ತಿಲ್ಲ. ಮುಖ್ಯಮಂತ್ರಿ ಗಳು ನೀಡಿರುವ ಸೂಚನೆಯಂತೆ ಇನ್ನೆರಡು ದಿನಗಳಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 01 ಕೋಟಿ ರೂ. ಅನುದಾನ ಬಿಡುಗಡೆ ಆಗಲಿದೆ.

ಬಹುಗ್ರಾಮ ಕುಡಿಯುವ ನೀರು ಯೋಜನೆಗಳಲ್ಲಿ 69 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 137 ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದರು.










