Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಮೀಣ ಮಕ್ಕಳ ಬದುಕು ಬಂಗಾರವಾಗಿಸಲು ಪಣತೊಟ್ಟ ಸಮಾಜಸೇವಕ; ಜಿ.ಎಂ. ಲವಕುಮಾರ್ ಗೆ ಗೌರವ ಡಾಕ್ಟರೇಟ್ ಪ್ರದಾನ

---Advertisement---

ಸುದ್ದಿಒನ್,  ಚಿತ್ರದುರ್ಗ, ಸೆಪ್ಟೆಂಬರ್. 20 : ಸಮಾಜದಲ್ಲಿ ತಾನು ಪಡೆದುಕೊಂಡಿದ್ದನ್ನು ಮರಳಿ ಸಮಾಜಕ್ಕೇ ಕೊಡುವ ಮನಸ್ಸುಗಳು ಬೆರಳೆಣಿಕೆಯಷ್ಟು ಮಾತ್ರ. ಅಂತಹ ಅಪರೂಪದ ಸೇವಾಮನೋಭಾವ, ಶೈಕ್ಷಣಿಕ ಕಾಳಜಿ ಮತ್ತು ಜನಪರ ಕಳಕಳಿಯೊಂದಿಗೆ ಮಾದರಿಯಾಗಿ ನಿಂತಿರುವವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯ ಹೆಮ್ಮೆಯ ಪುತ್ರ, ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ಜಿ. ಎಂ. ಲವಕುಮಾರ್. (ಸಂಪರ್ಕ ಸಂಖ್ಯೆ :  96115 57555)

 

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಗ್ರಾಮೀಣ ಭಾಗದ  ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾ, ಸಾಮಾಜಿಕ ಕಳಕಳಿಯ ಹೆಜ್ಜೆಗಳನ್ನು ಇಡುತ್ತಿರುವ ಇವರ ನಿಸ್ವಾರ್ಥ ಕಾಯಕವನ್ನು ಗುರುತಿಸಿ, ದಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಂಡ್ ರಿಸರ್ಚ್ ಯೂನಿವರ್ಸಿಟಿಯು ಪ್ರತಿಷ್ಠಿತ “ಗೌರವ ಡಾಕ್ಟರೇಟ್” ನೀಡಿ ಗೌರವಿಸಿದೆ. ಪಾಂಡಿಚೇರಿಯ ಹೋಟೆಲ್ ಅಣ್ಣಾಮಲೈ ಇಂಟರ್ನ್ಯಾಷನಲ್ನಲ್ಲಿ ನಡೆದ ವಾರ್ಷಿಕ ಗೋಲ್ಡನ್ ಐಕಾನಿಕ್ ಅವಾರ್ಡ್ಸ್ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗಿದ್ದು, ಅರ್ಹ ವ್ಯಕ್ತಿಗೆ ಸಂದ ಗೌರವ ಇದಾಗಿದೆ.

ಗ್ರಾಮೀಣ ಪ್ರತಿಭೆಯಿಂದ ಯಶಸ್ವಿ ಉದ್ಯಮದವರೆಗೆ….

ದಿವಂಗತ ಶಿವಮೂರ್ತಪ್ಪ ಹಾಗೂ ನಾಗರತ್ನಮ್ಮ ದಂಪತಿಯ ಪುತ್ರರಾಗಿ 1976ರ ಮಾರ್ಚ್ 1ರಂದು ಜನಿಸಿದ ಲವಕುಮಾರ್ ಅವರು ಬಾಲ್ಯದಿಂದಲೇ ಸರಳತೆ ಮತ್ತು ಪರಿಶ್ರಮವನ್ನು ಮೈಗೂಡಿಸಿಕೊಂಡವರು. ಚಿತ್ರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಹಾಗೂ ಎಸ್.ಜೆ.ಎಂ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿದ ನಂತರ, ಸರಸ್ವತಿ ಲಾ ಕಾಲೇಜಿನಲ್ಲಿ ಎಲ್ಎಲ್ಬಿ ಪೂರೈಸಿದರು. ಶಿಕ್ಷಣದ ನಂತರ ಸುಮಾರು ಏಳು ವರ್ಷಗಳ ಕಾಲ ವ್ಯಾಪಾರ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವ ಪಡೆದ ಅವರು, 2004ರಲ್ಲಿ ಸ್ವಂತ ಉದ್ಯಮಕ್ಕೆ ಕಾಲಿಟ್ಟರು. ಪ್ರಸ್ತುತ ಭೀಮಸಮುದ್ರದ ಸುಮುಖ್ ಎಂಟರ್ಪ್ರೈಸಸ್’ ಮೂಲಕ ಅಡಿಕೆ ವ್ಯಾಪಾರದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಇವರು, ವ್ಯಾಪಾರದ ಜೊತೆಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ಸರ್ಕಾರಿ ಶಾಲೆಗೆ ಹೊಸ ಕಾಯಕಲ್ಪ: ಶೈಕ್ಷಣಿಕ ಕ್ರಾಂತಿ

ಲವಕುಮಾರ್ ಅವರ ಜೀವನದ ಅತ್ಯಂತ ಮಹತ್ವದ ಮತ್ತು ಶ್ಲಾಘನೀಯ ಮೈಲಿಗಲ್ಲೆಂದರೆ ಶಿಕ್ಷಣ ಸೇವೆ. ಗ್ರಾಮೀಣ ಭಾಗದ ಯಾವುದೇ ಮಗು ಬಡತನದಿಂದಾಗಿ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ದೃಢ ಸಂಕಲ್ಪದೊಂದಿಗೆ, ತಾವು ಓದಿದ ಚಿತ್ರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 2022ರ ಸೆಪ್ಟೆಂಬರ್‌ ನಲ್ಲಿ ಐದು ವರ್ಷಗಳ ಅವಧಿಗೆ ದತ್ತು ಪಡೆದರು. ಇವರು ಶಾಲೆ ದತ್ತು ಪಡೆಯುವ ಸಂದರ್ಭದಲ್ಲಿ ಕೇವಲ 39 ಮಕ್ಕಳಿದ್ದು, ಶಾಲೆಯನ್ನು ಮುಚ್ಚುವ ಸ್ಥಿತಿಗೆ ತಲುಪಿತ್ತು. ಅಲ್ಲದೆ ಮಕ್ಕಳಿಗೆ ಕೂರಲು ಸರಿಯಾದ ಡೆಸ್ಕ್ಗಳೂ ಇರಲಿಲ್ಲ. ಆದರೆ ಲವಕುಮಾರ್ ಅವರು ಶಾಲೆಗೆ ಕಾಯಕಲ್ಪ ನೀಡಿ, ಸುಸಜ್ಜಿತ ಡೆಸ್ಕ್ಗಳು, ಸ್ಮಾರ್ಟ್ ಕ್ಲಾಸ್, ಸಿಸಿ ಕ್ಯಾಮೆರಾ ಹಾಗೂ ಹೆಚ್ಚುವರಿ ಸಮವಸ್ತ್ರ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪೆನ್, ಪೆನ್ಸಿಲ್, ಪುಸ್ತಕಗಳನ್ನು ಮತ್ತು ಇನ್ನಿತರ ಕಲಿಕಾ ಸಾಮಾಗ್ರಿಗಳನ್ನು ಪ್ರತಿವರ್ಷ ಉಚಿತವಾಗಿ ನೀಡುವುದರ ಜೊತೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಸೇರಿದಂತೆ ಆಡಳಿತ ವ್ಯವಸ್ಥೆಯಲ್ಲಿ ಸದಾ ಭಾಗವಹಿಸುತ್ತಾರೆ.

ಇವರ ಪರಿಶ್ರಮ ಮತ್ತು ಶಾಸಕ ಎಂ. ಚಂದ್ರಪ್ಪ ಅವರ 60 ಲಕ್ಷ ರೂ.ಗಳ ಅನುದಾನದ ಸಮರ್ಪಕ ಬಳಕೆಯಿಂದಾಗಿ ಇಂದು ಸರ್ಕಾರಿ ಶಾಲೆಯ ಮುಖಚಹರೆಯೇ ಬದಲಾಗಿದೆ. ಶಾಲಾ ಆವರಣದಲ್ಲಿ 33×100 ಅಡಿ ವಿಸ್ತೀರ್ಣದ ಸುಸಜ್ಜಿತ ಆಡಿಟೋರಿಯಂ ಅನ್ನು ಲವಕುಮಾರ್ ಅವರು ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ. ಖಾಸಗಿ ಕಾನ್ವೆಂಟ್ಗಳನ್ನೂ ಮೀರಿಸುವಂತಹ ಗುಣಮಟ್ಟದ ಶಿಕ್ಷಣ ಮತ್ತು ಆಡಳಿತದಿಂದಾಗಿ, ಇಂದು ಈ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿಯ 40 ಪುಟ್ಟ ಕಂದಮ್ಮಗಳು ಹಾಗೂ 1 ರಿಂದ 7ನೇ ತರಗತಿಯ 94 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 134ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿ, ಗ್ರಾಮೀಣ ಭಾಗದಲ್ಲೇ ಕಾರ್ಪೊರೇಟ್ ಶೈಲಿಯ ಉತ್ಕೃಷ್ಟ ಶಿಕ್ಷಣ ಒದಗಿಸುವುದು ಇವರ ಪ್ರಮುಖ ಗುರಿಯಾಗಿದೆ. ಕರೋನಾ ಸಂಕಷ್ಟದ ಕಾಲದಲ್ಲೂ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್, ಹೆಲ್ತ್ ಕಿಟ್ ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಿ ಜನಪರ ಕಾಳಜಿ ಮೆರೆದಿದ್ದರು.

ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದ ಸೇವೆಗಳು :

ಲವಕುಮಾರ್ ಅವರ ಸೇವೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಕ್ಷೇತ್ರದಲ್ಲಿಯೂ ಅಪಾರ ಕಾಳಜಿ ಹೊಂದಿರುವ ಇವರು ಚಿತ್ರದುರ್ಗ ಜಿಲ್ಲಾ ಪತಂಜಲಿ ಟ್ರಸ್ಟ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಪತಂಜಲಿ ಯೋಗ ಸಂಸ್ಥೆಯ ಸಹಯೋಗದೊಂದಿಗೆ ವರ್ಷಕ್ಕೆ ಎರಡು ಬಾರಿ ಉಚಿತ ಬೃಹತ್ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಈವರೆಗೆ 850ಕ್ಕೂ ಹೆಚ್ಚು ಜನರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಕೊಡಿಸಿದ್ದು, 20ಕ್ಕೂ ಹೆಚ್ಚು ಬಡ ಜನರಿಗೆ ಸ್ವಂತ ಖರ್ಚಿನಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಜೊತೆಗೆ ಸಿರಿಗೆರೆ ಜಗದ್ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಸದಾ ಸಮಾಜಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇವರು, ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಲಾಗುವ ಒಂದು ಲಕ್ಷದ ಒಂದು ರೂಪಾಯಿ ಗೌರವ ಧನದಲ್ಲಿ ಒಬ್ಬ ಯೋಧನ ಕುಟುಂಬಕ್ಕೆ ಪ್ರತಿವರ್ಷ ಸ್ವತಃ ತಾವೇ ನೆರವು ನೀಡುತ್ತಿದ್ದಾರೆ.

ಸಿರಿಗೆರೆ ಶ್ರೀಗಳ ಆದೇಶದಂತೆ ಟಿಪಿಸಿಕೆ ಬಾಲಿಕಾ ಪ್ರೌಢಶಾಲೆ ಮತ್ತು ತರಳಬಾಳು ಕಾನ್ವೆಂಟ್ನ ಅಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ಸುಧಾರಣೆಗೆ ಶ್ರಮಿಸುತ್ತಿದ್ದು, ಪೂಜ್ಯ ಶ್ರೀಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಾಡಿನ ಜಲ ಸಂರಕ್ಷಣೆ ಮತ್ತು ರೈತರ ಹಿತದೃಷ್ಟಿಯಿಂದ ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಇವರು, ಜಿಲ್ಲಾ ಹೋರಾಟ ಸಮಿತಿಯ ಖಜಾಂಚಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇವರ ನಿರಂತರ ಸಮಾಜಮುಖಿ ಚಿಂತನೆಗೆ ತಾಯಿ ಶ್ರೀಮತಿ ನಾಗರತ್ನಮ್ಮ ಪತ್ನಿ ಶ್ರೀಮತಿ ಸೀಮಾ, ಓರ್ವ ಪುತ್ರ ಸುಮುಖ್ ಎಲ್. ಗೌಡರ್ ಹಾಗೂ ಪುತ್ರಿ ಶ್ರೇಯಾ ಎಲ್. ಗೌಡರ್ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ.

ಭವಿಷ್ಯದ ಸಂಕಲ್ಪಗಳು

ಮುಂದಿನ ದಿನಗಳಲ್ಲಿ ಸಮಾಜದ ನಿರಾಶ್ರಿತ ಕಂದಮ್ಮಗಳಿಗಾಗಿ ಮಕ್ಕಳ ಅನಾಥಾಶ್ರಮ ಹಾಗೂ ಮೂಕ ಪ್ರಾಣಿಗಳ ರಕ್ಷಣೆಗಾಗಿ ಸುಸಜ್ಜಿತ ಗೋಶಾಲೆಯನ್ನು ತೆರೆಯುವ ಮಹತ್ವಾಕಾಂಕ್ಷೆಯನ್ನು ಲವಕುಮಾರ್ ಹೊಂದಿದ್ದಾರೆ. ಶಾಲಾ ಶಿಕ್ಷಣ ಇಲಾಖೆ, ಧಾರ್ಮಿಕ ಮಠಗಳು ಹಾಗೂ ಹತ್ತು ಹಲವು ಸಂಘ-ಸಂಸ್ಥೆಗಳ ಸನ್ಮಾನಕ್ಕೆ ಭಾಜನರಾಗಿರುವ ಇವರಿಗೆ ಲಭಿಸಿರುವ ಗೌರವ ಡಾಕ್ಟರೇಟ್, ಅವರ ಮುಂದಿನ ಸಮಾಜಸೇವಾ ಪಯಣಕ್ಕೆ ಮತ್ತಷ್ಟು ಶಕ್ತಿ ತುಂಬಲಿ. ಅವರ ಸೇವಾ ಕಿರೀಟಕ್ಕೆ ಇಂತಹ ಇನ್ನೂ ನೂರಾರು ಯಶಸ್ಸಿನ ಗರಿಗಳು ಸೇರ್ಪಡೆಯಾಗಲಿ ಎಂಬುದೇ ಜನಸಾಮಾನ್ಯರ ಹಾರೈಕೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now