ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ದೇಶದ ಕೋಟ್ಯಂತರ ರೈತರಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲೇ ತಲಾ ₹2,000 ಜಮೆಯಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರದಿಂದ ಈವರೆಗೆ ಅಧಿಕೃತ ದಿನಾಂಕ ಪ್ರಕಟವಾಗಿಲ್ಲವಾದರೂ, ಅಕ್ಟೋಬರ್ 5 ರಿಂದ ನವೆಂಬರ್ 5ರ ಅವಧಿಯಲ್ಲಿ ಹಣ ಬಿಡುಗಡೆಯಾಗಬಹುದು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಅಂತಿಮ ದಿನಾಂಕ ಖಚಿತವಾಗಲಿದೆ.
23ನೇ ಕಂತಿನಿಂದ 9.44 ಕೋಟಿ ರೈತರಿಗೆ ನೆರವು
ಯೋಜನೆಯ 23ನೇ ಕಂತನ್ನು ಜೂನ್ 20 ರಂದು ಬಿಡುಗಡೆ ಮಾಡಲಾಗಿತ್ತು. ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ದೇಶದ 9.44 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ₹18,880 ಕೋಟಿಗೂ ಹೆಚ್ಚಿನ ಮೊತ್ತವನ್ನು ವರ್ಗಾಯಿಸಲಾಗಿತ್ತು. ಇದರಲ್ಲಿ 2.18 ಕೋಟಿಗೂ ಹೆಚ್ಚು ಮಹಿಳಾ ರೈತರು ಫಲಾನುಭವಿಗಳಾಗಿದ್ದಾರೆ.
ಅಕ್ಟೋಬರ್‌ನಲ್ಲೇ ಹಣ ಜಮೆಯಾಗುವ ಸಾಧ್ಯತೆ ಏಕೆ?
ಸಾಮಾನ್ಯವಾಗಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಜೂನ್ 20 ರಂದು 23ನೇ ಕಂತು ಜಮೆಯಾಗಿದ್ದು, ನಾಲ್ಕು ತಿಂಗಳ ಅವಧಿ ಅಕ್ಟೋಬರ್‌ಗೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ 24ನೇ ಕಂತು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ, ಹಿಂದಿನ ಕಂತುಗಳ ದಿನಾಂಕಗಳಲ್ಲಿ ವ್ಯತ್ಯಾಸಗಳಾಗಿರುವುದರಿಂದ, ಸರ್ಕಾರದ ಅಧಿಕೃತ ಪ್ರಕಟಣೆಯ ನಂತರವೇ ನಿಖರ ದಿನಾಂಕ ತಿಳಿಯಲಿದೆ.
ದೀಪಾವಳಿ ಹಬ್ಬಕ್ಕೆ ಮುನ್ನವೇ ರೈತರಿಗೆ ಸಿಹಿಸುದ್ದಿ?
ದೀಪಾವಳಿ ಹಬ್ಬದ ಸಂಭ್ರಮಕ್ಕೆ ಮುನ್ನವೇ ರೈತರ ಕೈಗೆ ಹಣ ತಲುಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲೇ ಹಣ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಈ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ. ರೈತರು ದಿನಾಂಕಕ್ಕಾಗಿ ಕೇವಲ ಪಿಎಂ-ಕಿಸಾನ್‌ನ ಅಧಿಕೃತ ಪ್ರಕಟಣೆಗಳನ್ನಷ್ಟೇ ಅವಲಂಬಿಸುವುದು ಒಳಿತು.
ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಲಿಂಕ್ ಮಾಡಲು ಆದ್ಯತೆ

ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಹಣಕಾಸು ಸೇವೆಗಳ ಇಲಾಖೆಯ ಪ್ರಕಾರ, ಎಲ್ಲಾ ಪಿಎಂ-ಕಿಸಾನ್ ಫಲಾನುಭವಿಗಳನ್ನು ಕೆಸಿಸಿ ಯೋಜನೆಗೆ ಸಂಪರ್ಕಿಸಲು ‘ಮಿಷನ್ ಮೋಡ್’ ಅಭಿಯಾನ ಮುಂದುವರಿದಿದೆ. ಕಾರ್ಡ್ ಪಡೆಯದ ಅರ್ಹ ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.











