ಬೆಂಗಳೂರು: ಹಣವನ್ನು ಸಂಪಾದಿಸುವುದು ಎಷ್ಟು ಮುಖ್ಯವೋ, ಸಂಪಾದಿಸಿದ ಹಣವನ್ನು ಉಳಿಸಿಕೊಂಡು ಬೆಳೆಸುವುದು ಕೂಡ ಅಷ್ಟೇ ಮುಖ್ಯ. ಕೆಲವರು ತಿಂಗಳಿಗೆ ಭಾರಿ ಮೊತ್ತವನ್ನು ಗಳಿಸಿದರೂ ತಿಂಗಳಾಂತ್ಯಕ್ಕೆ ಕೈಯಲ್ಲಿ ನಯಾಪೈಸೆ ಉಳಿಯುವುದಿಲ್ಲ.
ಇನ್ನೂ ಕೆಲವರು ಕಡಿಮೆ ಆದಾಯದಲ್ಲೇ ಅಗತ್ಯಗಳನ್ನು ಪೂರೈಸಿ, ಭವಿಷ್ಯಕ್ಕಾಗಿ ಹಣ ಉಳಿಸುತ್ತಾರೆ. ಪ್ರಾಚೀನ ಭಾರತದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ವ್ಯಕ್ತಿಯಲ್ಲಿರುವ ಕೆಲವು ಕೆಟ್ಟ ಅಭ್ಯಾಸಗಳೇ ಅವರ ಆರ್ಥಿಕ ಹಿನ್ನಡೆಗೆ ಮೂಲ ಕಾರಣ. ಚಾಣಕ್ಯರ ಪ್ರಕಾರ ಯಾವ ಅಭ್ಯಾಸಗಳಿರುವವರ ಬಳಿ ಸಂಪತ್ತು ನಿಲ್ಲುವುದಿಲ್ಲ ಎಂಬುದರ ಮಾಹಿತಿ ಇಲ್ಲಿದೆ.
ಅತಿಯಾದ ಹಾಗೂ ವಿವೇಚನಾರಹಿತ ಖರ್ಚು (ದುಂದುವೆಚ್ಚ)
ಹಣದ ನಿಜವಾದ ಮೌಲ್ಯ ತಿಳಿಯದೆ ಮನಬಂದಂತೆ ಖರ್ಚು ಮಾಡುವುದರಿಂದ ಸಂಪತ್ತು ಕ್ರಮೇಣ ಕರಗಿಹೋಗುತ್ತದೆ. ಅಗತ್ಯವಿರಲಿ, ಇಲ್ಲದಿರಲಿ ಕಣ್ಣಿಗೆ ಕಂಡಿದ್ದನ್ನೆಲ್ಲಾ ಖರೀದಿಸುವುದು, ಸಣ್ಣಪುಟ್ಟ ಖರ್ಚುಗಳ ಲೆಕ್ಕ ಇಡದಿರುವುದು ಕೊನೆಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತದೆ. ಮುಖ್ಯವಾಗಿ ಆದಾಯ ಹೆಚ್ಚಾದಂತೆಲ್ಲಾ ಜೀವನಶೈಲಿಯ ಆಡಂಬರವನ್ನೂ ಹೆಚ್ಚಿಸಿಕೊಳ್ಳುತ್ತಾ ಹೋದರೆ ಉಳಿತಾಯಕ್ಕೆ ಜಾಗವೇ ಇರುವುದಿಲ್ಲ ಎಂದು ಚಾಣಕ್ಯರು ಎಚ್ಚರಿಸುತ್ತಾರೆ.
ಉಳಿತಾಯವನ್ನು ಕಡೆಗಣಿಸುವುದು
“ತಿಂಗಳ ಎಲ್ಲಾ ಖರ್ಚುಗಳು ಮುಗಿದ ನಂತರ ಉಳಿಯುವ ಹಣವನ್ನು ಉಳಿತಾಯ ಮಾಡೋಣ” ಎಂದು ಯೋಚಿಸುವುದು ಬಹುತೇಕರಲ್ಲಿ ಕಂಡುಬರುವ ಸಾಮಾನ್ಯ ತಪ್ಪು. ಹೀಗೆ ಮಾಡುವುದರಿಂದ ತಿಂಗಳ ಕೊನೆಗೆ ಉಳಿಸಲು ಏನೂ ಇರುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ಭವಿಷ್ಯದ ತುರ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಹಣವನ್ನು ಸಂರಕ್ಷಿಸಿಕೊಳ್ಳಬೇಕು. ತಿಂಗಳ ಆದಾಯ ಕೈ ಸೇರಿದ ತಕ್ಷಣವೇ ಅದರಲ್ಲಿ ಒಂದು ನಿರ್ದಿಷ್ಟ ಪಾಲನ್ನು ಉಳಿತಾಯಕ್ಕೆಂದು ಮೀಸಲಿಟ್ಟು, ಉಳಿದ ಮೊತ್ತದಲ್ಲಿ ತಿಂಗಳ ಖರ್ಚುಗಳನ್ನು ನಿಭಾಯಿಸುವುದೇ ಜಾಣತನ.
ಇತರರನ್ನು ನೋಡಿ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವುದು
ಪಕ್ಕದ ಮನೆಯವರು ಕಾರು ಕೊಂಡರು, ಸ್ನೇಹಿತರು ದುಬಾರಿ ಮೊಬೈಲ್ ಖರೀದಿಸಿದರು ಅಥವಾ ಸಂಬಂಧಿಕರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ನೋಡಿ ನಾವೂ ಅನುಕರಿಸಲು ಹೋದರೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಪ್ರದರ್ಶನಕ್ಕೋಸ್ಕರ ಬದುಕುವ ಬದಲು ನಮ್ಮ ಆದಾಯವೆಷ್ಟು? ನಮ್ಮ ಕುಟುಂಬದ ಜವಾಬ್ದಾರಿಗಳೇನು? ಭವಿಷ್ಯದ ಅಗತ್ಯಗಳೇನು? ಎಂಬುದನ್ನು ಅರಿತು ಆರ್ಥಿಕ ತೀರ್ಮಾನಗಳನ್ನು ಕೈಗೊಳ್ಳಬೇಕು. ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಕಷ್ಟಕ್ಕೆ ಆಹ್ವಾನ ನೀಡಿದಂತೆ.
ಆದಾಯ ಮೀರಿ ಸಾಲ ಮಾಡುವುದು

ಅನಗತ್ಯ ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಲು ಕ್ರೆಡಿಟ್ ಕಾರ್ಡ್ ಅಥವಾ ವೈಯಕ್ತಿಕ ಸಾಲಗಳ (Personal Loans) ಮೇಲೆ ಪದೇಪದೇ ಅವಲಂಬಿತರಾದರೆ, ಅದು ಭವಿಷ್ಯದ ಆದಾಯವನ್ನು ಮೊದಲೇ ನುಂಗಿಹಾಕುತ್ತದೆ. ಮನೆ, ಶಿಕ್ಷಣ ಅಥವಾ ವ್ಯಾಪಾರಕ್ಕಾಗಿ ಮಾಡುವ ಸಾಲ ಆರ್ಥಿಕ ಬೆಳವಣಿಗೆಗೆ ಪೂರಕವಾಗಬಹುದು. ಆದರೆ ಕೇವಲ ಆಡಂಬರದ ಜೀವನಕ್ಕಾಗಿ ಸಾಲ ಮಾಡಿ, ಮರುಪಾವತಿಸುವ ಸಾಮರ್ಥ್ಯವಿಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟು ಖಚಿತ. ಆದ್ದರಿಂದ ಯಾವುದೇ ಸಾಲ ಪಡೆಯುವ ಮುನ್ನ ಅದರ ಅಗತ್ಯತೆ, ಬಡ್ಡಿ ದರ ಹಾಗೂ ಮರುಪಾವತಿಯ ಸಾಮರ್ಥ್ಯವನ್ನು ಅವಲೋಕಿಸುವುದು ಅನಿವಾರ್ಯ.











