Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಲ್‌ಪಿಜಿ ಗ್ರಾಹಕರೇ ಗಮನಿಸಿ : ಅಕ್ಟೋಬರ್.1ರೊಳಗೆ ತಪ್ಪದೇ ಈ ಕೆಲಸ ಮಾಡಿ

---Advertisement---

ದೆಹಲಿ.ಸೆ.21: ಅಡುಗೆ ಅನಿಲ ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸಬ್ಸಿಡಿ ದರದಲ್ಲಿ ಗೃಹಬಳಕೆಯ ಎಲ್‌ಪಿಜಿ ರೀಫಿಲ್ ಪಡೆಯಲು 2026ರ ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಸಬ್ಸಿಡಿಯು ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡಲು ಹಾಗೂ ನಕಲಿ, ಅನರ್ಹ ಸಂಪರ್ಕಗಳನ್ನು ರದ್ದುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 19ರ ವೇಳೆಗೆ ದೇಶದ ಶೇಕಡಾ 89.9 ರಷ್ಟು ಅಂದರೆ ಬರೋಬ್ಬರಿ 27.43 ಕೋಟಿ ಸಕ್ರಿಯ ಗ್ರಾಹಕರು ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಈಗಾಗಲೇ ಪರಿಶೀಲನೆ ಮುಗಿಸಿರುವ ಗ್ರಾಹಕರು ಮತ್ತೆ ಈ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ. ಆದರೆ, ಇನ್ನೂ ಈ ಪ್ರಕ್ರಿಯೆ ಪೂರ್ಣಗೊಳಿಸದ ಗ್ರಾಹಕರು ಅಕ್ಟೋಬರ್ 1ರಿಂದ ಸಬ್ಸಿಡಿ ದರದಲ್ಲಿ ಸಿಲಿಂಡರ್ ಬುಕ್ ಮಾಡುವ ಮುನ್ನ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಮುಗಿಸುವುದು ಅನಿವಾರ್ಯವಾಗಿದೆ.

ಗ್ರಾಹಕರ ಅನುಕೂಲಕ್ಕಾಗಿ ಸರ್ಕಾರ ಹಲವು ಸುಲಭ ಮಾರ್ಗಗಳನ್ನು ಒದಗಿಸಿದೆ. ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿಯ ಮೂಲಕ ಮನೆ ಬಾಗಿಲಲ್ಲೇ ಬಯೋಮೆಟ್ರಿಕ್ ದೃಢೀಕರಣ ಮಾಡಿಸಿಕೊಳ್ಳಬಹುದು. ಅಥವಾ ಸಂಬಂಧಿತ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ಈ ಕೆಲಸ ಪೂರ್ಣಗೊಳಿಸಬಹುದು. ಇದಲ್ಲದೆ, ಮನೆಯಲ್ಲೇ ಕುಳಿತು ಮೊಬೈಲ್ ಆ್ಯಪ್‌ಗಳ ಮೂಲಕವೂ ಪ್ರಕ್ರಿಯೆ ನಡೆಸಲು ಅವಕಾಶವಿದೆ. ಇಂಡೇನ್ ಗ್ರಾಹಕರು ‘IndianOil ONE’, ಭಾರತ್ ಗ್ಯಾಸ್ ಬಳಕೆದಾರರು ‘HelloBPCL’ ಮತ್ತು ಹೆಚ್‌ಪಿ ಗ್ಯಾಸ್ ಬಳಕೆದಾರರು ‘HP PAY’ ಆ್ಯಪ್‌ಗಳನ್ನು ಬಳಸಬಹುದು. ಈ ದೃಢೀಕರಣಕ್ಕೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ, ಸಂಪೂರ್ಣ ಉಚಿತವಾಗಿರುತ್ತದೆ.

ಒಂದು ವೇಳೆ ಬಯೋಮೆಟ್ರಿಕ್ ದೃಢೀಕರಣ ಮಾಡಿಸದಿದ್ದರೆ ಸಿಲಿಂಡರ್ ಸಂಪರ್ಕ ರದ್ದಾಗುವುದಿಲ್ಲ, ಆದರೆ ಸಬ್ಸಿಡಿ ಸೌಲಭ್ಯ ಸ್ಥಗಿತಗೊಳ್ಳಲಿದೆ. ಅಂತಹ ಗ್ರಾಹಕರು ಮಾರುಕಟ್ಟೆ ದರದಲ್ಲೇ ಸಿಲಿಂಡರ್ ಪಡೆಯಬೇಕಾಗುತ್ತದೆ. ಸಬ್ಸಿಡಿ ದುರ್ಬಳಕೆ ತಡೆಗಟ್ಟಲು ಸರ್ಕಾರ 2023ರ ಅಕ್ಟೋಬರ್‌ನಿಂದಲೇ ಈ ಅಭಿಯಾನವನ್ನು ನಡೆಸುತ್ತಿದ್ದು, ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಎಸ್‌ಎಂಎಸ್, ವಾಟ್ಸಾಪ್ ಸೇರಿದಂತೆ ಹಲವು ಮಾಧ್ಯಮಗಳನ್ನು ಬಳಸುತ್ತಿದೆ. ಯಾವುದೇ ಸಹಾಯ ಅಥವಾ ಗೊಂದಲಗಳಿದ್ದಲ್ಲಿ ಗ್ರಾಹಕರು 1800 2333 555 ಟೋಲ್-ಫ್ರೀ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Join WhatsApp

Join Now

Join Telegram

Join Now