ಬೆಂಗಳೂರು: ಜಮೀರ್ ಅಹ್ಮದ್ ಖಾನ್ ಗೆ ಹಣ ನೀಡಿರುವ ಬಗ್ಗೆ ಇದೀಗ ರಾಧಿಕಾ ಕುಮಾರಸ್ವಾಮಿ ವಿಚಾರಣೆ ಎದುರಿಸಿರುವ ಮಾಹಿತಿ ಲಭ್ಯವಾಗಿದೆ. ಜಮೀರ್ ಹಾಗೂ ರಾಧಿಕಾ ಕುಮಾರಸ್ವಾಮಿ ನಡುವೆ ಎರಡು ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಈಗ ಜಮೀರ್ ಕೇಸಲ್ಲಿ ರಾಧಿಕಾ ಕುಮಾರಸ್ವಾಮಿ ವಿಚಾರಣೆಯನ್ನ ಎದುರಿಸಿದ್ದಾರೆ.
2022ರಲ್ಲಿ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಅಂದಿನ ಎಸಿಪಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದ್ದರು. ಐದು ಕಡೆಗಳಲ್ಲಿ ದಾಳಿ ನಡೆಸಿದ್ದರು. ಅದಕ್ಕೂ ಮೊದಲು ಇಡಿ ಅಧಿಕಾರಿಗಳು ಕೂಡ ದಾಳಿ ನಡೆಸಿದ್ದರು. ಅಂದಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ಲೋಕಾಯುಕ್ತ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ಇದರ ನಡುವೆ ಪ್ರಮುಖವಾದಂತ ಸಾಕ್ಷಿಯಾದಂತ ರಾಧಿಕಾ ಕುಮಾರಸ್ವಾಮಿ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ.

ನಿಮ್ಮ ಹಾಗೂ ಜಮೀರ್ ಅಹ್ಮದ್ ಖಾನ್ ನಡುವಿನ ಹಣಕಾಸು ವ್ಯವಹಾರದ ವಿಚಾರ ಏನು, ಎರಡು ಕೋಟಿ ಹಣ ವರ್ಹಾವಣೆಯಾಗಿದೆಯಲ್ಲ ಎಂದು ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ರಾಧಿಕಾ ಕುಮಾರಸ್ವಾಮಿ ಅವರು, ಹೌದು ಎರಡು ಕೋಟಿ ಹಣದ ವ್ಯವಹಾರ ನಡೆದಿದೆ. ಯಶ್ ಹಾಗೂ ರಮ್ಯಾ ಅವರ ಲಕ್ಕಿ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದು. ಅದರಿಂದ ಬಂದಂತ ಲಾಭದ ಹಣದಲ್ಲಿ ಎರಡು ಕೋಟಿಯನ್ನು ಜಮೀರ್ ಅಹ್ಮದ್ ಅವರಿಗೆ ನೀಡಿದ್ದೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಎಲ್ಲವನ್ನು ಕಲೆ ಹಾಕಿ ಇದೀಗ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.


















