Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸರ್ಕಾರಿ ಯೋಜನೆ ಹೆಸರಲ್ಲಿ ಖಾಸಗಿ ಫೈನಾನ್ಸ್ ವಂಚನೆ : ಸಾರ್ವಜನಿಕರು ಎಚ್ಚರ ವಹಿಸಿ : ಎಂ.ಪಿ.ಪ್ರವೀಣ್ ಮನವಿ

---Advertisement---

 

ಚಿತ್ರದುರ್ಗ. ಸೆ.09: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸೇರಿದಂತೆ ವಿವಿಧ ಜನಕಲ್ಯಾಣ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ ಸಲಹೆ ನೀಡಿದ್ದಾರೆ.

ಸ್ವಯಂ ಉದ್ಯೋಗ ಆರಂಭಿಸಲು ಹಾಗೂ ಸಣ್ಣ ವ್ಯಾಪಾರ ವಿಸ್ತರಿಸಲು ಸಾಲದ ನಿರೀಕ್ಷೆಯಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದ ಜನರನ್ನು ಕೆಲ ಅಸಂಘಟಿತ ಖಾಸಗಿ ಫೈನಾನ್ಸ್ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಆರೋಪಗಳು ಕೇಳಿಬರುತ್ತಿವೆ.

‘ನಿಮಗೆ ರೂ.5ರಿಂದ ರೂ.10 ಲಕ್ಷದವರೆಗೆ ಮುದ್ರಾ ಸಾಲ ಮಂಜೂರಾಗಿದೆ’ ಎಂದು ನಕಲಿ ಮಂಜೂರಾತಿ ಪತ್ರಗಳನ್ನು ತೋರಿಸಿ, ಪ್ರೊಸೆಸಿಂಗ್ ಶುಲ್ಕ, ವಿಮೆ, ಅಗ್ರಿಮೆಂಟ್ ಶುಲ್ಕ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಮುಂಗಡ ಹಣ ವಸೂಲಿ ಮಾಡಲಾಗುತ್ತಿದೆ. ಹಣ ಪಡೆದ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸುವ ಪ್ರಕರಣಗಳೂ ನಡೆಯುತ್ತಿವೆ. ಅದೇ ರೀತಿ, ಸರ್ಕಾರಿ ಯೋಜನೆಯಡಿ ಶೇ.35ರಷ್ಟು ಸಹಾಯಧನ  ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆಯುವ ಪ್ರಯತ್ನವೂ ನಡೆಯುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸರ್ಕಾರಿ ಸಾಲ ಕೊಡಿಸುವುದಾಗಿ ಹೇಳಿ, ಬಳಿಕ ಖಾಸಗಿ ಸಂಸ್ಥೆಗಳ ಮೂಲಕ ಹೆಚ್ಚಿನ ಬಡ್ಡಿದರ ಹಾಗೂ ಅಧಿಕ ಸೇವಾ ಶುಲ್ಕ ವಿಧಿಸಿ ಸಾಲದ ಸುಳಿಗೆ ಸಿಲುಕಿಸುವ ಸಾಧ್ಯತೆಯೂ ಇದೆ.
ನಕಲಿ ಸಂದೇಶಗಳ ಬಗ್ಗೆ ಎಚ್ಚರ: ಸರ್ಕಾರಿ ಲೋಗೋ ಹಾಗೂ ಅಧಿಕಾರಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ವೆಬ್‍ಸೈಟ್, ಲಿಂಕ್, ಎಸ್‍ಎಂಎಸ್ ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಜನರನ್ನು ಸಂಪರ್ಕಿಸಲಾಗುತ್ತಿದೆ. ಬ್ಯಾಂಕ್ ಖಾತೆ ವಿವರ, ಎಟಿಎಂ ಮಾಹಿತಿ, ಒಟಿಪಿ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಪಡೆದು ಹಣ ವಂಚಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು.

ಮುದ್ರಾ ಸಂಸ್ಥೆಯಿಂದ ನೇರ ಸಾಲವಿಲ್ಲ: ‘ಮುದ್ರಾ’ ಸಂಸ್ಥೆಯು ಸಾರ್ವಜನಿಕರಿಗೆ ನೇರವಾಗಿ ಸಾಲ ವಿತರಿಸುವ ಸಂಸ್ಥೆಯಲ್ಲ. ಅರ್ಹ ಸಾಲಗಾರರಿಗೆ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಅರ್ಹ ಎನ್‍ಬಿಎಫ್‍ಸಿಗಳು ಹಾಗೂ ನೋಂದಾಯಿತ ಮೈಕ್ರೋಫೈನಾನ್ಸ್ ಸಂಸ್ಥೆಗಳಂತಹ ಸಾಲ ನೀಡುವ ಸಂಸ್ಥೆಗಳ ಮೂಲಕ ಮುದ್ರಾ ಸಾಲ ಸೌಲಭ್ಯ ದೊರೆಯುತ್ತದೆ.

ಸಾಲ ಮಂಜೂರಾತಿಗಾಗಿ ಯಾವುದೇ ಅಪರಿಚಿತ ವ್ಯಕ್ತಿ ಅಥವಾ ಮಧ್ಯವರ್ತಿಗೆ ಮುಂಗಡ ಹಣ ನೀಡುವ ಮುನ್ನ ಸಂಸ್ಥೆಯ ಅಧಿಕೃತತೆ ಹಾಗೂ ಸಾಲದ ವಿವರಗಳನ್ನು ಪರಿಶೀಲಿಸಬೇಕು.

ಬ್ಯಾಂಕ್‍ಗೆ ನೇರವಾಗಿ ಭೇಟಿ ನೀಡಿ: ಸಾಲ ಪಡೆಯಲು ಆಸಕ್ತಿ ಹೊಂದಿರುವವರು ಸಮೀಪದ ಬ್ಯಾಂಕ್ ಶಾಖೆಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಮುದ್ರಾ ಮತ್ತು ಇತರ ಸರ್ಕಾರಿ ಸಾಲಗಳಿಗಾಗಿ  ಅಧಿಕೃತ ಪೋರ್ಟಲ್ www.mudra.org.inಅಥವಾudyamimitra.in ಮೂಲಕ ಅರ್ಜಿ ಸಲ್ಲಿಸಬೇಕು. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಎಸ್‍ಎಂಎಸ್ ಅಥವಾ ವಾಟ್ಸಾಪ್ ಸಂದೇಶಗಳನ್ನು ನಂಬಬಾರದು. ಯಾವುದೇ ಕಾರಣಕ್ಕೂ ಒಟಿಪಿ, ಪಾಸ್‍ವರ್ಡ್ ಅಥವಾ ಬ್ಯಾಂಕ್ ಖಾತೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಬಾರದು.

ಖಾಸಗಿ ಪೈನಾನ್ಸ್ ಅಥವಾ ಮದ್ಯವರ್ತಿಗಳು ಸರ್ಕಾರಿ ಯೋಜನೆಯ ಹೆಸರಿನಲ್ಲಿ ವಂಚಿಸಲು ಯತ್ನಿಸಿದರೆ ಕೂಡಲೇ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಬಹುದು.
ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಬರುವ ಯಾವುದೇ ಸಾಲದ ಆಮಿಷಕ್ಕೆ ಒಳಗಾಗದೆ, ಅಧಿಕೃತ ಮೂಲಗಳಿಂದ ಮಾಹಿತಿ ಪಡೆದು ವ್ಯವಹರಿಸಬೇಕು. ಜಾಗೃತಿಯೇ ಹಣಕಾಸಿನ ಸುರಕ್ಷತೆಗೆ ಅತಿ ದೊಡ್ಡ ಅಸ್ತ್ರ ಎಂದು ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ.ಪ್ರವೀಣ್ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now