ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಮೊದಲ ಬಾರಿಗೆ ಗೋನೂರು ಕೆರೆಗೆ ಆಗಮಿಸಿದ ಭದ್ರೆಗೆ ಬುಧವಾರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಿಂದ ಸ್ವಾಗತ ಕೋರಲಾಯಿತು.
ಗೋನೂರು ಸಮೀಪದ 111 ಕಿಮೀ ಕಾಲುವೆ ಬಳಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಭದ್ರೆಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಬಸವಕೇಂದ್ರ ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮುರುಗೇಂದ್ರ ಸ್ವಾಮೀಜಿ ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.
ಕಾಲುವೆಯಲ್ಲಿ ಭದ್ರೆ ಹರಿದಿರುವುದ ಕಂಡು ಸಂತಸ ವ್ಯಕ್ತಪಡಿಸಿದ ಮಹಿಳೆಯರು, ರೈತಾಪು ಸಮಾದಾಯ ಭದ್ರೆ ಮೈಮೇಲೆ ಎರಚಿಕೊಂಡು ಧನ್ಯತಾ ಭಾವ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಬಾಗಿನ ಸಮರ್ಪಣೆ ನಂತರ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಚಿತ್ರದುರ್ಗ ನೆಲಕ್ಕೆ ಭದ್ರೆ ತರುವಲ್ಲಿ ಮೂರು ದಶಕಗಳಷ್ಟು ಸುದೀರ್ಘ ಹೋರಾಟವಿದೆ. ಇದರಲ್ಲಿ ಪತ್ರಕರ್ತಕರ್ತರು, ಸಂಘ ಸಂಸ್ಥೆಗಳು, ಮಠಾಧಿಪತಿಗಳು, ಜನ ಪ್ರತಿನಿಧಿಗಳ ಸಹಕಾರವಿದೆ. ಸಮೀಕ್ಷೆ ಕಾರ್ಯಕ್ಕೆ ಐವತ್ತು ಕೋಟಿ ರೂಪಾಯಿ ಬಜೆಟ್ ನಲ್ಲಿ ಕಾಯ್ದಿರಿಸುವುದರ ಮೂಲಕ ಆರಂಭಗೊಂಡ ಭದ್ರಾ ಮೇಲ್ದಂಡೆ ಯೋಜನೆ ಕನಸು ಗೋನೂರು ಕೆರೆವರೆಗೆ ನೀರು ಹರಿಯುವ ತನಕ ಸಾಕಾರಗೊಂಡಿದೆ ಎಂದರು.
ಕಾಮಗಾರಿ ಕುಂಟುತ್ತ ಸಾಗಿದ ವೇಳೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 6300 ಕೋಟಿಯಷ್ಟು ಅನುದಾನ ಒದಗಿಸುವುದರ ಮೂಲಕ ವೇಗ ನೀಡಲಾಗಿತ್ತು. ಎಲ್ಲ ಸರ್ಕಾರಗಳು ಯೋಜನೆ ಕಾರ್ಯಗತಕ್ಕೆ ಅದರದ್ದೇ ಆದ ಕೊಡುಗೆ ನೀಡಿವೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 13 ಸಾವಿರ ಕೋಟಿ ರೂಪಾಯಿ ಅಗತ್ಯವಿದ್ದು ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ನೀಡಲಿದೆ ಎಂದರು.
ಬಸವಕೇಂದ್ರ ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಇಂತಹದ್ದೊಂದು ಗಳಿಗೆಗಾಗಿ ಮೂರು ದಶಕಗಳು ಕಾಯಬೇಕಾಯಿತು. ಚಿತ್ರದುರ್ಗ ಜನರ ದಾಹ ಇಂಗಿಸಲು ಭದ್ರೆ 164 ಕಿಮೀ ಸಾಗಿ ಬಂದಿದ್ದಾಳೆ.ಇದೊಂದು ಸಮಗ್ರ ಜನ ಸಮುದಾಯದ ಹೋರಾಟ, ರಾಜಕಾರಣಿಗಳು, ಮಠಾಧೀಶರು, ಭೂಮಿ ಕೊಟ್ಟ ರೈತರು ಎಲ್ಲರ ಪಾತ್ರ ಇದೆ.ಎಲ್ಲರನ್ನೂ ಜಾಗೃತಗೊಳಿಸುವ ಹೋರಾಟವಾಗಿದೆ. ಇದರಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ದಶಕಗಳ ಕಾಲ ಈ ವಿಚಾರದ ಬೆನ್ನು ಹತ್ತಿ ಬರೆದಿದ್ದಾರೆ.ಅನೇಕರು ಟೀಕೆ, ಟಿಪ್ಪಣಿ ಮಾಡಿದಾಗಲೂ ಪತ್ರಕರ್ತರು ಎಚ್ಚರಿಸಿದ್ದಾರೆ. ಮುರುಘಾ ಮಠದ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಹೋರಾಟಗಾರರಲ್ಲಿ ಸಾಮ್ರಾಜ್ಯವನ್ನೇ ಗೆದ್ದಂತಹ ಭಾವನೆ ಬಂದಿದೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಭದ್ರೆ ಬಂದಿರುವುದು ರೈತಾಪಿ ಸಮುದಾಯದಲ್ಲಿ ಆಶಾಕಿರಣ ಬಂದಂತಾಗಿದೆ. ಇಂಥದ್ದೊಂದು ಕಾರ್ಯಕ್ರಮ ಕನಸೋ, ನನಸೋ ಎಂದು ಗೊತ್ತಾಗುತ್ತಿಲ್ಲ. ಆರು ಸಾವಿರ ಕೋಟಿ ವೆಚ್ಚದಿಂದ ಆರಂಭಗೊಂಡ ಯೋಜನೆ ಇಂದು 23 ಸಾವಿರ ಕೋಟಿಗೆ ಬಂದು ನಿಂತಿದೆ ಸರ್ಕಾರಗಳು ಇಚ್ಚಾಶಕ್ತಿ ಪ್ರದರ್ಶಿಸಿದ್ದರೆ ಹದಿನೆಂಟು ಸಾವಿರ ಕೋಟಿ ಉಳಿಯುತ್ತಿತ್ತು ಎಂದರು.
97 ರಲ್ಲಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹೋರಾಟದ ಮೊದಲ ಸಮಾವೇಶ ನಡೆದಿತ್ತು . ಖಾಸಗಿ ಬಸ್ ಮಾಲೀಕರ ಸಂಘದವರು ಅಂದು ಸಮಾವೇಶಕ್ಕೆ ಬರುವವರಿಗೆ ಬಸ್ ಗಳ ಸೌಲಭ್ಯ ಕಲ್ಪಿಸುವುದರ ಮೂಲಕ ದನಿಗೂಡಿಸಿತ್ತು. ಅಂದಿನಿಂದ ಇಂದಿನವರೆಗೂ ಬೆಂಬಲ ನೀಡಲಾಗುತ್ತಿದೆ.
ವಿವಿ ಸಾಗರಕ್ಕೆ ಭದ್ರೆ ನೀರು ಬಂದಿದ್ದು ನೋಡಿ ರೈತರು ಅಡಿಕೆ ಕಟ್ಟಿದರು. ನೀರಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಲಿಂಗಾರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರವಿಶಂಕರ್ ಮಾತನಾಡಿ, ಪ್ರಾಯೋಗಿಕವಾಗಿ ಮೂರು ಟಿಎಂಸಿ ನೀರು ನಿಗಧಿಯಾಗಿದೆ. ಬರ ಪರಿಸ್ಥಿತಿ ಕಾರಣಕ್ಕೆ ಜಲಾಶಯದಲ್ಲಿನ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷಾರ್ಥ ನೀರು ಹಾಯಸಲಾಗಿದೆ ಎಂದರು.
ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಬರಲಿಲ್ಲ. ಅಲ್ಲಿ 186 ಅಡಿಗೆ 175 ಸಂಗ್ರಹವಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರು ಆಕ್ಚೇಪ ಎತ್ತಿದರೂ ಸರ್ಕಾರ ಪ್ರಾಯೋಗಿಕವಾಗಿ ಹರಿಸಲು ತಿಳಿಸಿದೆ.ಹಳೆಯ ಕಾಲುವೆಯಾದ ಕಾರಣಕ್ಕೆ 700 ಕ್ಯೂಸೆಕ್ ಡ್ರಾ ಮಾಡುತ್ತಿದ್ದು ಇದರ ಪ್ರಕಾರ 25 ದಿನ ಹರಿಸಲು ತೊಂದರೆ ಇಲ್ಲ. ಇನ್ನೂ ಹೆಚ್ಚು ಮಾಡುವುದಾದರೆ 2 ನೇ ಮೋಟಾರ್ ಆನ್ ಮಾಡಿದರೆ ದಿನಗಳ ಸಂಖ್ಯೆ ಕಡಿಮೆ ಆಗಬಹುದು ಎಂದರು.
ನೀರಾವರಿ ಅನುಷ್ಠಾನ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್,ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸಿಪಿಐ ಕಾರ್ಯದರ್ಶಿ ಸುರೇಶ್ ಬಾಬು,ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಸಿ.ಟಿ.ಕೃಷ್ಣಮೂರ್ತಿ, ಕಾರ್ಯನಿರತರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿನಾಯಕ ತೊಡರನಾಳ್,ಶಿಮುಲ್ ನಿರ್ದೇಶಕ ಜಿ.ಬಿ.ಶೇಖರ್, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಬಿಜೆಪಿ ಮುಖಂಡ ಹನುಮಂತೇ ಗೌಡ ಉಪಸ್ಥಿತರಿದ್ದರು. ಸಮಿತಿ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಪ್ರಾಸ್ತಾವಿಕ ಮಾತನಾಡಿದರು.
ನೀರಾವರಿ ಹೋರಾಟದ ಹಾದಿಯಲ್ಲಿ ಅಗಲಿದ ನಾಯಕರುಗಳಾದ ಹೆಚ್.ಹನುಮಂತಪ್ಪ, ಎಂ.ಜಯಣ್ಣ, ಮುರುಘರಾಜೇಂದ್ರ ಒಡೆಯರ್, ಟಿ.ನುಲೇನೂರು ಎಂ.ಶಂಕರಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಮೌನಾಚರಣೆ ಮೂಲಕ ಸ್ಮರಿಸಲಾಯಿತು. ಹೋರಾಟವ ಮುನ್ನಡೆಸಿದ ಪಿ.ಕೋದಂಡರಾಮಯ್ಯ ಹಾಗೂ ಡಾ.ಬಂಜಗೆರೆ ಜಯಪ್ರಕಾಶ್ ಅವರನ್ನು ನೆನಪು ಮಾಡಿಕೊಳ್ಳಲಾಯಿತು. ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣದಲ್ಲಿ ಶ್ರಮಿಸಿದ ತಾಂತ್ರಿಕ ವರ್ಗವ ಅಭಿನಂದಿಸುವ ಸಲುವಾಗಿ ಐದು ಮಂದಿ ಇಂಜಿನಿಯರ್ ಗಳಿಗೆ ಕಾರ್ಯಕ್ರಮದಲ್ಲಿ ಹಸಿರು ಶಾಲು ಹೊದಿಸಿ ಗೌರವಿಸಲಾಯಿತು.











