ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಪ್ರೀಮಿಯಂ ಷೋ ಜು.24 ರಂದು ಬಿಡುಗಡೆಗೊಳಿಸುತ್ತಿದ್ದು, ಜಿಲ್ಲಾಡಳಿತದ ಗಮನಕ್ಕೆ ಬಾರದೆ ಒಂದು ಟೋಕನ್‍ಗೆ 150 ರೂ.ಗಳಂತೆ ಮಾರಾಟ ಮಾಡುತ್ತಿದ್ದು, ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆಯ ಜಂಟಿ ನಿರ್ದೇಶಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಪಡಿತರ ಚೀಟಿದಾರರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್‍ಗಳನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಲನಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತರು ಪ್ರತಿ ಜಿಲ್ಲೆಯ ಜಂಟಿ ನಿರ್ದೇಶಕರು ಹಾಗೂ ಉಪ ನಿರ್ದೇಶಕರುಗಳಿಗೆ ಸೂಚಿಸಿದ್ದಾರೆಯೇ ವಿನಃ ಒಂದು ಟೋಕನ್‍ಗೆ 150 ರೂ. ಪಡೆಯಬೇಕೆಂದು ಸೂಚಿಸಿಲ್ಲ. ಹಾಗಾಗಿ ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಒತ್ತಾಯಿಸಿದರು.
ಗೌರವಾಧ್ಯಕ್ಷ ರಾಜಣ್ಣ ಕೆ, ಸಹ ಕಾರ್ಯದರ್ಶಿ ತಿಮ್ಮಯ್ಯ ಎಂ. ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










