ವಾಷಿಂಗ್ಟನ್ : ಭೂಮಿಯ ಕಕ್ಷೆಯಲ್ಲಿ ತಾನು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿರುವುದನ್ನು ಅಮೆರಿಕ ಮೊದಲ ಬಾರಿಗೆ ಬಹಿರಂಗವಾಗಿ ದೃಢಪಡಿಸಿದೆ. ಶತ್ರು ದೇಶಗಳ ಯಾವುದೇ ಆಕ್ರಮಣಕಾರಿ ಕ್ರಮಗಳಿಂದ ತನ್ನ ಹಾಗೂ ತನ್ನ ಮಿತ್ರರಾಷ್ಟ್ರಗಳ ಪಡೆಗಳನ್ನು ರಕ್ಷಿಸಲು ಈ ರಕ್ಷಣಾ ವ್ಯವಸ್ಥೆಗಳು ಸಮರ್ಥವಾಗಿವೆ ಎಂದು ಯುಎಸ್ ಸ್ಪೇಸ್ ಫೋರ್ಸ್ ತಿಳಿಸಿದೆ. ಅಮೆರಿಕದ ಈ ಮಹತ್ವದ ಹೇಳಿಕೆಯು ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯೇ ಎಂಬ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಬಾಹ್ಯಾಕಾಶ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಮುಖ ಜಾಗತಿಕ ಒಪ್ಪಂದವಾದ 1967ರ ಬಾಹ್ಯಾಕಾಶ ಒಪ್ಪಂದದ ನಾಲ್ಕನೇ ವಿಧಿಯು ಭೂಮಿಯ ಕಕ್ಷೆಯಲ್ಲಿ ಅಥವಾ ಬಾಹ್ಯಾಕಾಶದಲ್ಲಿ ಪರಮಾಣು ಬಾಂಬ್ ಅಥವಾ ಇತರ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಇರಿಸುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಅಲ್ಲದೆ, ಚಂದ್ರ ಮತ್ತು ಇತರ ಖಗೋಳ ಕಾಯಗಳನ್ನು ಕೇವಲ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಹಾಗೂ ಅಲ್ಲಿ ಯಾವುದೇ ಸೇನಾ ನೆಲೆ ಅಥವಾ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಬಾರದು ಎಂದು ಈ ಒಪ್ಪಂದ ನಿರ್ಬಂಧಿಸುತ್ತದೆ. ಆದರೆ, ಭೂಮಿಯ ಕಕ್ಷೆಯಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವುದರ ಮೇಲೆ ಈ ಒಪ್ಪಂದವು ಯಾವುದೇ ಸಂಪೂರ್ಣ ನಿಷೇಧವನ್ನು ಹೇರಿಲ್ಲ.
ತಾನು ಕಕ್ಷೆಯಲ್ಲಿ ನಿಯೋಜಿಸಿರುವ ಶಸ್ತ್ರಾಸ್ತ್ರಗಳ ಸ್ವರೂಪ, ಅವುಗಳ ಸಂಖ್ಯೆ ಅಥವಾ ನಿಖರ ಸ್ಥಳದ ಕುರಿತು ಅಮೆರಿಕ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕೇವಲ “ಸ್ಪೇಸ್ ಕಂಟ್ರೋಲ್” ಅಂದರೆ ಬಾಹ್ಯಾಕಾಶ ನಿಯಂತ್ರಣ ಸಾಮರ್ಥ್ಯದ ಶಸ್ತ್ರಾಸ್ತ್ರಗಳು ಇವು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಇಂತಹ ವ್ಯವಸ್ಥೆಗಳು ಶತ್ರುಗಳ ಉಪಗ್ರಹಗಳನ್ನು ಹಾನಿಗೊಳಿಸದೆಯೇ ಅವುಗಳ ಸಿಗ್ನಲ್ ಜಾಮ್ ಮಾಡುವ ಎಲೆಕ್ಟ್ರಾನಿಕ್ ವಾರ್ಫೇರ್, ಸೈಬರ್ ದಾಳಿ ತಂತ್ರಜ್ಞಾನ ಅಥವಾ ನೇರವಾಗಿ ಹೊಡೆದುರುಳಿಸುವ ವ್ಯವಸ್ಥೆಗಳನ್ನು ಒಳಗೊಂಡಿರಬಹುದು. ಆದರೆ ಅಮೆರಿಕ ಈ ಬಗ್ಗೆ ಸ್ಪಷ್ಟತೆ ನೀಡಿಲ್ಲ.
ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ನಿಯೋಜನೆಗೆ ಸ್ಪಷ್ಟ ನಿಷೇಧವಿಲ್ಲದಿದ್ದರೂ, ಯುದ್ಧದ ಸಂದರ್ಭದಲ್ಲಿ ಇವುಗಳ ಬಳಕೆ ಅಂತಾರಾಷ್ಟ್ರೀಯ ಕಾನೂನಿನ ಇತರೆ ನಿಯಮಗಳ ಅಡಿಯಲ್ಲಿ ತನಿಖೆಗೆ ಒಳಪಡಬಹುದು. ಸಶಸ್ತ್ರ ಸಂಘರ್ಷದ ವೇಳೆ ನಾಗರಿಕ ಅಥವಾ ವಾಣಿಜ್ಯ ಉಪಗ್ರಹಗಳಿಗೆ ಆಗುವ ಹಾನಿ ಹಾಗೂ ಪ್ರಮಾಣಾನುಗುಣತೆಯ ನಿಯಮಗಳನ್ನು ಪರಿಗಣಿಸಬೇಕಾಗುತ್ತದೆ. ಮುಖ್ಯವಾಗಿ, ಉಪಗ್ರಹವೊಂದನ್ನು ಭೌತಿಕವಾಗಿ ಹೊಡೆದುರುಳಿಸಿದರೆ ಅದರಿಂದ ಕಕ್ಷೆಯಲ್ಲಿ ಅಪಾರ ಪ್ರಮಾಣದ ಬಾಹ್ಯಾಕಾಶ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ದಶಕಗಳ ಕಾಲ ಕಕ್ಷೆಯಲ್ಲೇ ಉಳಿಯುವ ಈ ಅವಶೇಷಗಳು ಸಂಘರ್ಷದಲ್ಲಿ ಭಾಗಿಯಾಗದ ಇತರೆ ದೇಶಗಳ ಮತ್ತು ಖಾಸಗಿ ಸಂಸ್ಥೆಗಳ ಉಪಗ್ರಹಗಳಿಗೂ ಭಾರೀ ಬೆದರಿಕೆಯೊಡ್ಡುವ ಅಪಾಯವಿರುತ್ತದೆ.











