ಸುದ್ದಿಒನ್, ಚಿತ್ರದುರ್ಗ.ಜುಲೈ.22: ತಾಲೂಕಿನ ಹೊರವಲಯದ ಮೆದೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎರಡನೇ ವಾರ್ಡ್‌ನ ಜಯಂತಿ ನಗರದಲ್ಲಿ ಕಳೆದ ಒಂದು ವಾರದಿಂದ ತೀವ್ರ ಕುಡಿಯುವ ನೀರಿನ ಅಭಾವ ತಲೆದೂರಿದ್ದು, ಸಾರ್ವಜನಿಕರು ನೀರಿಗಾಗಿ ದಿನನಿತ್ಯ ಪರದಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರ ಈ ಜ್ವಲಂತ ಸಮಸ್ಯೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಆಡಳಿತಾಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮ ಪಂಚಾಯತಿಯ ಮಾಜಿ ಸದಸ್ಯರಾದ ದುಗ್ಗಪ್ಪ ಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಚೆ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ಇಂತಹ ಸಮಸ್ಯೆಗಳು ತಲೆದೂರುತ್ತಿರಲಿಲ್ಲ. ಆದರೆ, ಪ್ರಸ್ತುತ ಆಡಳಿತಾಧಿಕಾರಿಯಾಗಿ ನಿಯೋಜನೆಗೊಂಡಿರುವ ಬೆಸ್ಕಾಂ ಗ್ರಾಮಾಂತರ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜಪ್ಪ ಅವರು ಪಂಚಾಯತಿ ಕಚೇರಿಯತ್ತ ಮುಖ ಮಾಡುತ್ತಿಲ್ಲ. ಇದರಿಂದಾಗಿ ಪಂಚಾಯತಿ ಆಡಳಿತ ಸಂಪೂರ್ಣ ಕಸಿದುಬಿದ್ದಿದೆ ಎಂದು ಅವರು ಆರೋಪಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ, ವಾರ್ಡಿನಲ್ಲಿ ಕಳೆದ ಎರಡು ತಿಂಗಳಿಂದ ಬೀದಿ ದೀಪಗಳು ಕೆಟ್ಟುಹೋಗಿದ್ದರೂ ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಕತ್ತಲಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದಿರುವುದರಿಂದ ಸಾರ್ವಜನಿಕರು ತಮ್ಮ ದಿನನಿತ್ಯದ ಕಷ್ಟಗಳನ್ನು ನಮ್ಮ ಬಳಿಯೇ ಬಂದು ತೋಡಿಕೊಳ್ಳುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಜಯಂತಿನಗರದ ಕುಡಿಯುವ ನೀರು ಹಾಗೂ ಬೀದಿ ದೀಪದ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ದುಗ್ಗಪ್ಪ ಎಸ್ ಅವರು ಆಗ್ರಹಿಸಿದ್ದಾರೆ.











