ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 09 : ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ಪ್ರಮುಖರು ಹೋರಾಟ ನಡೆಸಿದ ಪರಿಣಾಮ ಭದ್ರಾ ನೀರು ಜಿಲ್ಲೆ ಪ್ರವೇಶಿಸಿದ್ದು, ತಾಯಿ ಭದ್ರೆಯನ್ನು ಸ್ವಾಗತಿಸಲು ನಾಳೆ ಸೆ.10ರ ಗುರುವಾರ ಬೆಳಗ್ಗೆ 10.30ಕ್ಕೆ ಗೋನೂರು ಬಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ತಿಳಿಸಿದೆ.
ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಜಿಲ್ಲೆಯ ಮಠಾಧೀಶರು, ಹಾಲಿ-ಮಾಜಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ತಾಯಿ ಭದ್ರೆಯನ್ನು ಸ್ವಾಗತಿಸುವ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟಿರುವ ಮೊಳಕಾಲ್ಮೂರು, ಹೊಳಲ್ಕೆರೆ ಹಾಗೂ ವಿವಿಧ ತಾಲ್ಲೂಕುಗಳಲ್ಲಿನ ಹಳ್ಳಿಗಳ ಕೆರೆಗಳನ್ನು ಸೇರಿಸಬೇಕು ಹಾಗೂ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಕಲ್ಪಿಸಬೇಕೆಂಬ ಎರಡನೇ ಹಂತದ ಹೋರಾಟ ಆರಂಭಿಸಬೇಕಿದೆ. ಮುಖ್ಯವಾಗಿ ಹೋರಾಟ ಮುನ್ನಡೆಸಿ ನಮ್ಮನ್ನು ಅಗಲಿರುವ ಸಮಿತಿಯ ಹೋರಾಟಗಾರರು, ವಿವಿಧ
ಕ್ಷೇತ್ರದ ಮುಂಚೂಣಿ ನಾಯಕರನ್ನು ಸ್ಮರಿಸಬೇಕಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿ ಭದ್ರೆ ಹಾಗೂ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕೆಂದು
ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶ ಬಾಬು (ಸಂಪರ್ಕ: 9900882955) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











