ಬೆಂಗಳೂರು: ರಂಗಭೂಮಿಯಲ್ಲಿ ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಉದ್ದೇಶದಿಂದ ರೂಪುಗೊಂಡಿರುವ ಕಲಾದ್ಯುತಿ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ತಂಡದ ಮೊದಲ ನಾಟಕವಾಗಿ ಪ್ರದರ್ಶನಗೊಂಡು ಯಶಸ್ವಿಯಾದ ‘ಉಂಡಾಡಿ ಗುಂಡ’ ಬಳಿಕ, ಇದೀಗ ‘ಮಳೆ ನಿಲ್ಲುವವರೆಗೆ’ ಎಂಬ ರೋಚಕ ಥ್ರಿಲ್ಲರ್ ನಾಟಕವನ್ನು ಪ್ರೇಕ್ಷಕರ ಮುಂದಿಡುತ್ತಿದೆ.
ಸೆಪ್ಟೆಂಬರ್ 17ರಂದು ಸಂಜೆ 7.30ಕ್ಕೆ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ‘ಮಳೆ ನಿಲ್ಲುವವರೆಗೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ನಾಟಕದ ಪ್ರಮುಖ ಆಕರ್ಷಣೆ ಎಂದರೆ, ಖ್ಯಾತ ನಟ ರಾಜೇಶ್ ನಟರಂಗ ಅವರು ಬರೋಬ್ಬರಿ 20 ವರ್ಷಗಳ ಬಳಿಕ ರಂಗಭೂಮಿಗೆ ಮರಳುತ್ತಿರುವುದು. ರಂಗಭೂಮಿಯೊಂದಿಗೆ ಆತ್ಮೀಯ ನಂಟು ಹೊಂದಿರುವ ರಾಜೇಶ್ ನಟರಂಗ, ನಟನಾಗಿ ಈಗಾಗಲೇ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ‘ಮಳೆ ನಿಲ್ಲುವವರೆಗೆ’ ಮೂಲಕ ಮತ್ತೊಮ್ಮೆ ರಂಗದ ಮೇಲೆ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳಿಗೆ ನೆಚ್ಚಿನ ನಟನ ಅಭಿನಯವನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಪ್ರಸಿದ್ಧ ನಟ ಹಾಗೂ ಲೇಖಕ ಎಲ್.ಎಸ್. ಸುಧೀಂದ್ರ ಅವರು ಜರ್ಮನ್ ಕಥೆಯೊಂದನ್ನು ಆಧರಿಸಿ ಕನ್ನಡಕ್ಕೆ ರೂಪಾಂತರಿಸಿದ್ದ ಈ ನಾಟಕವನ್ನು ಶರತ್ ಪರ್ವತವಾಣಿ ನಿರ್ದೇಶಿಸುತ್ತಿದ್ದಾರೆ.
‘ಮಳೆ ನಿಲ್ಲುವವರೆಗೆ’ ನಾಟಕವು ಆರಂಭದಲ್ಲಿ ಸರಳವಾದ ಆಟದಂತೆ ಶುರುವಾಗಿ, ಕ್ರಮೇಣ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ. ವಿಭಿನ್ನ ಪಾತ್ರಗಳ ನಡುವಿನ ಘಟನೆಗಳು, ಸಸ್ಪೆನ್ಸ್ ಹಾಗೂ ರೋಚಕ ತಿರುವುಗಳ ಮೂಲಕ ಪ್ರೇಕ್ಷಕರನ್ನು ಕೊನೆಯವರೆಗೂ ಕುತೂಹಲದಲ್ಲಿಡುವ ರೀತಿಯಲ್ಲಿ ನಾಟಕ ರೂಪುಗೊಂಡಿದೆ.

ಪ್ರತಿ ಕ್ಷಣವೂ ಮುಂದೇನಾಗಲಿದೆ ಎಂಬ ನಿರೀಕ್ಷೆ ಮೂಡಿಸುವ ಈ ನಾಟಕ, ಹಿರಿಯ ಪ್ರೇಕ್ಷಕರ ಜೊತೆಗೆ ಹೊಸ ತಲೆಮಾರಿನ ಯುವಕರಿಗೂ ವಿಭಿನ್ನ ರಂಗಾನುಭವ ನೀಡುವ ಉದ್ದೇಶ ಹೊಂದಿದೆ.
ನಾಟಕದ ರಚನೆ ಹಾಗೂ ಕನ್ನಡ ರೂಪಾಂತರ ಮಾಡಿರುವ ಎಲ್.ಎಸ್. ಸುಧೀಂದ್ರ ಅವರು ಕ್ಲಾಸ್-1 ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಸರ್ಕಾರಿ ಸೇವೆಯಲ್ಲಿದ್ದರೂ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ರಂಗಭೂಮಿಗೆ ಪೂರಕವಾಗುವ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಸುಧೀಂದ್ರ ಅವರು ಇದೀಗ ನಮ್ಮೊಂದಿಗಿಲ್ಲದ ಹಿನ್ನೆಲೆಯಲ್ಲಿ, ಅವರ ಕುಟುಂಬವನ್ನು ರಿಚರ್ಡ್ ಲೂಯಿಸ್ ಅವರ ಸಹಕಾರದೊಂದಿಗೆ ‘ಕಲಾದ್ಯುತಿ ಪ್ರೊಡಕ್ಷನ್ಸ್’ ಸಂಪರ್ಕಿಸಿದೆ. ಸಾಕಷ್ಟು ಪ್ರಯತ್ನದ ಬಳಿಕ ನಾಟಕದ ಪ್ರತಿಯನ್ನು ಪಡೆದು, ಅದಕ್ಕೆ ಹೊಸ ಸ್ಪರ್ಶ ನೀಡಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.
ಜಾಹೀರಾತು ನಿರ್ಮಾಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಬೆಳವಾಡಿ ಅವರು ನಾಟಕದ ಸೆಟ್ ವಿನ್ಯಾಸ ಮಾಡಲಿದ್ದಾರೆ.
20 ವರ್ಷಗಳ ಬಳಿಕ ರಾಜೇಶ್ ನಟರಂಗ ಅವರ ರಂಗಪ್ರವೇಶ ಹಾಗೂ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಮಳೆ ನಿಲ್ಲುವವರೆಗೆ’ ನಾಟಕವು ಬೆಂಗಳೂರಿನ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆ ಮೂಡಿಸಿದೆ.










