Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್ಟಿ ಜನಾಂಗಕ್ಕೆ ಕಾಂಗ್ರೆಸ್‍ನಿಂದ ಘೋರ ಅನ್ಯಾಯ : ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 20 : ಎಸ್ಟಿ ಹಾಗೂ ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತಿದೆ ಎಂದು ಬಿಜೆಪಿ ಎಸ್.ಟಿ. ಜಿಲ್ಲಾ ಮೋರ್ಚಾದ ಜಿಲ್ಲಾಧ್ಯಕ್ಷ ರಾಜು ದೂರಿದ್ದಾರೆ.

ಚಿತ್ರದುಗ್ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾಜಿ ಸಚಿವ ಹಾಗೂ ಶಾಸಕ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಮತ್ತು ರೈತ ಮೋರ್ಚಾದವತಿಯಿಂದ ನಡೆದಿದ್ದು ಇದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಟಿ ಹಾಗೂ ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅನ್ಯಾಯ ವಾಗುತ್ತಿದೆ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಸುಮಾರು 187 ಕೋಟಿ ರೂಪಾಯಿ ನಿಧಿಯನ್ನು ಅಕ್ರಮವಾಗಿ ವರ್ಗಾಯಿಸಿ, ಕಳ್ಳತನ ಮಾಡಲಾಗಿದೆ. ಈ ಹಣವನ್ನು ಬಡವರ ಕಲ್ಯಾಣಕ್ಕೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಹೊಲಗಳಿಗೆ ಗಂಗಾ ಕಲ್ಯಾಣ ಯೋಜನೆಗೆ ಹಾಗೂ ಮನೆಗಳ ನಿರ್ಮಾಣಕ್ಕೆ ಬಳಸುವ ಬದಲು, ಆಂಧ್ರಪ್ರದೇಶದ ಚುನಾವಣೆ, ಲೋಕಸಭಾ ಚುನಾವಣೆ ಹಾಗೂ ಹೈಕಮಾಂಡ್‍ಗೆ ನೀಡಲು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿದರು.

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಸ್ಟಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಅದನ್ನು ಮತ್ತೆ ಶೇ. 3 ಕ್ಕೆ ಇಳಿಸಿ ಜನಾಂಗಕ್ಕೆ ಮಹಾ ಅನ್ಯಾಯ ಎಸಗಿದೆ. ಇದರಿಂದಾಗಿ ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಎಸ್ಟಿ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸಾವಿರಾರು ವೈದ್ಯಕೀಯ ಹಾಗೂ ತಾಂತ್ರಿಕ ಸೀಟುಗಳು ಕೈತಪ್ಪಿ ಹೋಗಿವೆ. ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಸಿದ್ದರಾಮಯ್ಯನವರು ತಮ್ಮ ಹಿಂದಿನ ಹಾಗೂ ಪ್ರಸ್ತುತ ಆಡಳಿತಾವಧಿಯಲ್ಲಿ ನಾಯಕ ಮತ್ತು ದಲಿತ ಜನಾಂಗವನ್ನು ನಿರಂತರವಾಗಿ ತುಳಿಯುವ ಕೆಲಸ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಹಾಗೂ ಡಾ. ಹೆಚ್.ಸಿ. ಮಹದೇವಪ್ಪನವರಂತಹ ದಲಿತ ನಾಯಕರು ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದೆ, ಜನಾಂಗದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ನಾಗೇಂದ್ರ ಅವರು ತಾವೇನು ತಪ್ಪು ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದರೆ, ನೇರವಾಗಿ ಟಿವಿ ಚಾನೆಲ್‍ನಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಎಸೆದು. ತಕ್ಷಣವೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಈ ಹೋರಾಟವನ್ನು ವಿಧಾನಸೌಧ ಚಲೋ ಮತ್ತು ತೀವ್ರ ಸ್ವರೂಪದ ಚಳವಳಿಯಾಗಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ ಅವರು. ಬಡವರ ಮತ್ತು ವಿದ್ಯಾರ್ಥಿಗಳ ಹಕ್ಕಿನ ಹಣವನ್ನು ಅಕೌಂಟ್‍ಗಳ ಮೂಲಕ ದುರುಪಯೋಗಪಡಿಸಿ ಕೊಂಡಿರುವುದು ಇಡೀ ರಾಜ್ಯಕ್ಕೆ ತಿಳಿದಿದೆ. ಮುಂಬರುವ ಚುನಾವಣೆಗಳಲ್ಲಿ ನಾಯಕ ಜನಾಂಗ ಹಾಗೂ ರಾಜ್ಯದ ಜನತೆ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆÉ ಎಂದು ಎಚ್ಚರಿಕೆಯನ್ನು ನೀಡಿದರು.

ಜಿಲ್ಲಾ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಜಗದೀಶ್ ಮಾತನಾಡಿ, ಎಸ್‍ಟಿ ಸಮುದಾಯದ ಏಳಿಗೆಗಾಗಿ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ಬೃಹತ್ ಮೊತ್ತದ ಹಣವನ್ನು ನೇರವಾಗಿ ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ ಹಾಗೂ ವಿದ್ಯಾರ್ಥಿ ವೇತನದಂತಹ ಮಹತ್ವದ ಯೋಜನೆಗಳಿಗೆ ತಲುಪಬೇಕಿದ್ದ ಹಣವು ದುರುಪಯೋಗಗೊಂಡಿದ್ದು, ಸಚಿವ ನಾಗೇಂದ್ರ ಅವರು ಇದಕ್ಕೆ ನೇರ ಹೊಣೆ ಇಂತಹ ಖಜಾನೆ ಲೂಟಿ ಇತಿಹಾಸದಲ್ಲೇ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಸುಮಾರು 4.38 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಗೊಳಿಸಲು ಮುಂದಾಗಿರುವುದು ಬಡವರಿಗೆ ಮಾಡುತ್ತಿರುವ ವಂಚನೆ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ ಪರಿಶೀಲನೆ ನೆಪವೊಡ್ಡಿ ಬಡವರ ಸೌಲಭ್ಯಗಳನ್ನು ಕಡಿತಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆಪಾದಿಸಿದರು. ಕಳೆದ ಒಂದೂವರೆ ವರ್ಷದ ಆಡಳಿತದಲ್ಲಿ ರಸ್ತೆ, ಚರಂಡಿ ಹಾಗೂ ವಿದ್ಯುತ್‍ನಂತಹ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದೆ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸ್ವತಃ ಆಡಳಿತರೂಢ ಶಾಸಕರೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಅವರು ಎತ್ತಿ ತೋರಿಸಿದರು. ಸಚಿವ ನಾಗೇಂದ್ರ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಮತ್ತು ಸಂತ್ರಸ್ತ ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿ ಸಿದರು. ಇದೇ ಸಮಯದಲ್ಲಿ ಪ್ರಖ್ಯಾತ್ ಜೋಗಿ ಮದಕರಿ ನಾಯಕ ಹಾಗೂ ಚಿಂತನ್ ವಿ ಕಿತ್ತೂರು ರಾಣಿ ಚನ್ನಮ್ಮ ವೇಷದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಜಿಲ್ಲಾ ಎಸ್.ಸಿ. ಮೋರ್ಚಾದ ಅಧ್ಯಕ್ಷರಾದ ಪರಶುರಾಮ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ಭರಮಸಾಗರ ಮಂಡಲದ ಎಸ್.ಟಿ.ಮೋರ್ಚಾದ ಅಧ್ಯಕ್ಷರಾದ ನವೀನ್ ಕುಮಾರ್, ಎಸ್.ಟಿ. ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಪಂಡು, ಹಿರಿಯೂರು ಎಸ್.ಟಿ.ಮೋರ್ಚಾದ ಅಧ್ಯಕ್ಷರಾದ ಪ್ರರ್ಜಿವ್ ರೈತ ಮೋರ್ಚಾದ ನಗರಾಧ್ಯಕ್ಷ ಲಕ್ಷ್ಮೀನರಸಿಂಹಸ್ವಾಮಿ, ನಗರಸಭೆಯ ಮಾಜಿ ಸದಸ್ಯರಾದ ನಾಗರಾಜ್, ಮುಖಂಡರಾದ ತಿಪ್ಪೇಸ್ವಾಮಿ, ಮಹಮ್ಮದ್ ದೆಸ್ತಗೀರ್, ಪ್ರಕಾಶ್ ನರಸಿಂಹಮೂರ್ತಿ ಪ್ರಶಾಂತ್ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now