ಚಿತ್ರದುರ್ಗ. ಆಗಸ್ಟ್03: ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಂಡು ಎಲ್ಲ ಮನೆಗಳಿಗೆ ನೀರು ಬರುವುದನ್ನು ಖಾತ್ರಿಪಡಿಸಿಕೊಂಡು ಕೂಡಲೇ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಂಡು ಹರ್ ಘರ್ ಜಲ್ ಗ್ರಾಮ ಎಂದು ಘೋಷಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ಕ್ಷೇತ್ರ ಭೇಟಿ ಪರಿಶೀಲನಾ ಅಂದೋಲನದ ಅಂಗವಾಗಿ ಈಚೆಗೆ ಹಿರಿಯೂರು ತಾಲ್ಲೂಕಿನ ಧರ್ಮಪುರ, ಶ್ರವಣಗೆರೆ, ಹರಿಯಬ್ಬೆ, ಮುಂಗಸವಳ್ಳಿ, ಸೂಗೂರು, ಅಬ್ಬಿನಹೊಳೆ, ಗುಳ್ಯಾ ಮತ್ತು ಮಸ್ಕಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಹಳೇ ಪೈಪ್‍ಲೈನ್‍ಗೆ ಹೋಗುವ ನೀರನ್ನು ಸ್ಥಗಿತಗೊಳಿಸಿ, ಜಲಜೀವನ್ ಮಿಷನ್ ಪೈಪ್‍ಲೈನ್‍ನಲ್ಲಿ ನೀರು ಸರಬರಾಜು ಮಾಡಲು ತಿಳಿಸಿದ ಅವರು, ಜೆಜೆಎಂ ಯೋಜನೆಯಡಿ ಅಳವಡಿಸಿರುವ ಗೃಹ ನಳ ಸಂಪರ್ಕದ ಗುಣಮಟ್ಟ ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ ಎಫ್‍ಟಿಕೆ ನೀರಿನ ಗುಣಮಟ್ಟ ಸೇರಿದಂತೆ ವಿವಿಧ ವರದಿಗಳನ್ನು ಪರಿಶೀಲಿಸಿದರು.
ಗ್ರಾಮದ ಶಾಲೆ ಮತ್ತು ಅಂಗನವಾಡಿಗಳಿಗೆ ಕಡ್ಡಾಯವಾಗಿ ಕಾರ್ಯಾತ್ಮಕ ಗೃಹ ನಳ ಸಂಪರ್ಕ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತ್ವರಿತವಾಗಿ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಗಳಿಂದ ಹಸಿಕಸ ಮತ್ತು ಒಣಕಸ ವಿಂಗಡಿಸಿ, ತ್ಯಾಜ್ಯವನ್ನು ಸ್ವಚ್ಛವಾಹಿನಿಯ ಮೂಲಕ ಸಂಗ್ರಹಿಸಿ, ನಂತರ ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ವೈಜ್ಞಾನಿಕ ಹಸಿ ಮತ್ತು ಒಣಕಸ ವಿಂಗಡೆ ಮಾಡಿ ವಿಲೇವಾರಿ ಮಾಡಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಹಸೇನ್ ಭಾಷಾ, ಸಹಾಯಕ ಅಭಿಯಂತರ ಷಣ್ಮುಖಪ್ಪ, ಕಿರಿಯ ಅಭಿಯಂತರ ತಿಪ್ಪೇಸ್ವಾಮಿ, ಸಪೋರ್ಟ್ ಇಂಜಿನಿಯರ್‍ಗಳಾದ ಆಕಾಶ್, ದಿವ್ಯಾ, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ನಾಡರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಲಕ್ಷ್ಮಿಕಾಂತ್, ಶ್ರೀನಿವಾಸ್, ಶಬೀನಾ ತಾಜ್ ಬೇಗಂ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಸದಸ್ಯರು, ನೀರಗಂಟಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













