ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ 14ನೇ ಆರೋಪಿ ಪ್ರದೋಷ್ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೈಲಿನಲ್ಲಿ ಬೇರೆ ಕೈದಿಯ ಹೆಸರಿನಲ್ಲಿ ಮೊಬೈಲ್ ನಂಬರ್ ಪಡೆದು, ಅದನ್ನು ವಕೀಲರ ನಂಬರ್ ಎಂದು ನೋಂದಾಯಿಸಿ ಪತ್ನಿಯೊಂದಿಗೆ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ಈಗಾಗಲೇ ಮಾಫಿ ಸಾಕ್ಷಿಯಾಗಲು ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ.
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ವಕೀಲರು ಹಾಗೂ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ನಿಗದಿತ ದೂರವಾಣಿ ಸಂಖ್ಯೆಗಳ ವ್ಯವಸ್ಥೆ ಇರುತ್ತದೆ. ಈ ಸಂಖ್ಯೆಗಳ ವಿವರಗಳನ್ನು ಜೈಲು ದಾಖಲೆಗಳಲ್ಲಿ ನೋಂದಾಯಿಸಲಾಗುತ್ತದೆ.ಈ ನಂಬರ್‌ಗಳನ್ನು ನೋಂದಾಯಿಸುವ ಜವಾಬ್ದಾರಿ ಜೈಲು ಸಿಬ್ಬಂದಿ ಮೌನೇಶ್. ಹೆಚ್.ಕೋರಿ ಅವರಿಗೆ ವಹಿಸಲಾಗಿತ್ತು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಪ್ರದೋಷ್ ಬೇರೆ ಕೈದಿಯ ಹೆಸರಿನಲ್ಲಿ ಒಂದು ನಂಬರ್ ಪಡೆದುಕೊಂಡಿದ್ದಾನೆ ಎಂಬ ಆರೋಪ ಇದೀಗ ಬೆಳಕಿಗೆ ಬಂದಿದೆ.

ಪೊಲೀಸ್ ದೂರಿನ ಪ್ರಕಾರ, ಜೈಲು ಸಿಬ್ಬಂದಿ ಮೌನೇಶ್ ಅವರ ಸಹಾಯದಿಂದ ಪ್ರದೋಷ್ ಬೇರೆ ಕೈದಿಯ ಹೆಸರಿನಲ್ಲಿ ನಂಬರ್ ನೋಂದಾಯಿಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆ ನಂಬರ್ ಅನ್ನು ವಕೀಲರ ನಂಬರ್ ಎಂದು ದಾಖಲಿಸಿ, ಅದನ್ನು ಬಳಸಿಕೊಂಡು ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದನು ಎಂಬ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಜೈಲು ನಿಯಮ ಉಲ್ಲಂಘನೆ ಹಾಗೂ ನಂಬರ್ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ಸಹಕರಿಸಿದ ಆರೋಪದಡಿ ಜೈಲು ಸಿಬ್ಬಂದಿ ಮೌನೇಶ್ ಮತ್ತು ಆರೋಪಿ ಪ್ರದೋಷ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳಾಗಿದ್ದಾರೆ. ಪ್ರದೋಷ್ 14ನೇ ಆರೋಪಿಯಾಗಿದ್ದು, ಪ್ರಕರಣದಿಂದ ಮಾಫಿ ಸಾಕ್ಷಿಯಾಗಿ ಹೊರಬರಲು ಅರ್ಜಿ ಸಲ್ಲಿಸಿರುವುದು ಈಗಾಗಲೇ ನ್ಯಾಯಾಲಯದ ಗಮನ ಸೆಳೆದಿದೆ. ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ್ದರೂ, ಕರ್ನಾಟಕ ಹೈಕೋರ್ಟ್ ಅದನ್ನು ತಿರಸ್ಕರಿಸಿತ್ತು.
ಇದೀಗ ಜೈಲಿನಲ್ಲಿ ಬೇರೆ ಕೈದಿಯ ಹೆಸರಿನಲ್ಲಿ ನಂಬರ್ ಪಡೆದುಕೊಂಡಿರುವ ಆರೋಪದ ಕುರಿತು ಪ್ರತ್ಯೇಕ ದೂರು ದಾಖಲಾಗಿರುವುದರಿಂದ, ಪೊಲೀಸರು ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ನಂಬರ್ ನೋಂದಣಿ ಪ್ರಕ್ರಿಯೆಯಲ್ಲಿ ಯಾರ್ಯಾರ ಪಾತ್ರವಿದೆ ಎಂಬುದರ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ.









