ಮೈಸೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಬದಲಾವಣೆಯ ಚರ್ಚೆ ಬಲು ಜೋರಾಗಿದೆ. ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂತ ಪಕ್ಷದಲ್ಲಿಯೇ ಹಲವರು ಹೇಳ್ತಿದ್ದಾರೆ. ಆದರೆ ಈ ಹೇಳಿಕೆಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಎಚ್ಚರಿಕೆಯನ್ನು ಕೊಟ್ಟಿದ್ದರು. ಯಾರೂ ಕೂಡ ಸಿಎಂ ರೇಸ್ ವಿಚಾರವಾಗಿ ಮಾತನಾಡಬಾರದು ಅಂತ. ಇದೀಗ ಚಾಮುಂಡಿ ಬೆಟ್ಟದಲ್ಲಿ ಇದೇ ವಿಚಾರಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಆಷಾಢ ಮಾಸದ ಎರಡನೇ ಶುಕ್ರವಾರವಾಗಿರುವ ಕಾರಣ ಶಕ್ತಿ ದೇವತೆ ಚಾಮುಂಡೇಶ್ವರಿಗೆ ಡಿಕೆ ಶಿವಕುಮಾರ್ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಮಾಧ್ಯಮದವರು ಪ್ರಶ್ನೆ ಮಾಡಿದರು. ಸಿಎಂ ರೇಸ್ ನಿಂದ ನೀವೂ ದೂರ ಉಳಿದ್ರಾ ಅಂತ. ಆಗ ಡಿಸಿಎಂ ಡಿಕೆ ಶಿವಕುಮಾರ್ ಅವರು, ಪ್ರಯತ್ನ ವಿಫಲ ಆದ್ರೂ ಪ್ರಾರ್ಥನೆ ವಿಫಲ ಆಗಲ್ಲ. ನಾನು ನನಗೆ ಏನು ಬೇಕೋ ಅದನ್ನೇ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಬುದ್ದಿವಾದ ಹೇಳಿದ್ದಾರೆ. ಹೈಕಮಾಂಡ್ ಕೂಡ ಕೆಲವು ವಿಚಾರಗಳನ್ನ ಹೇಳಿದೆ.
ಇಲ್ಲಿ ರಾಜಕೀಯ ಚರ್ಚೆ ಬೇಡ. ನಾನು ಚಾಮುಂಡಿ ಬೆಟ್ಟಕ್ಕೆ ಬಂದಿದ್ದೇನೆ. ಇಡೀ ಕುಟುಂಬ ಸಮೇತ ಚಾಮುಂಡೇಶ್ವರಿ ದರ್ಶನ ಮಾಡಿದ್ದೇನೆ. ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ತಾಯೊಯ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದರು. ಆಷಾಢ ಮಾಸವಾದ ಕಾರಣ ತಾಯಿ ಚಾಮುಂಡೇಶ್ವರಿಗೆ ಕುಟುಂಬ ಸಮೇತ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿಎಂ ವಿಚಾರಕ್ಕೆ ಆಗುತ್ತಿರುವ ಚರ್ಚೆಗೆ ಯಾವ ರೀತಿಯಲ್ಲಿ ಉತ್ತರ ಸಿಗುತ್ತೆ ಎಂದು ಎಲ್ಲರು ಕಾಯುತ್ತಿದ್ದಾರೆ.










