ಚಿತ್ರದುರ್ಗ. ಸೆ.16: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ (ವಿ.ವಿ.ಸಾಗರ) ಜಲಾಶಯದಿಂದ ಬಲದಂಡೆ ನಾಲೆಯ ಮೂಲಕ ಸುವರ್ಣಮುಖಿ ನದಿಯ 4 ಚೆಕ್ ಡ್ಯಾಂಗಳಿಗೆ ಸೆಪ್ಟೆಂಬರ್ 17 ರಿಂದ 0.10 ಟಿ.ಎಂ.ಸಿ ನೀರನ್ನು ಹರಿಸಲಾಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದಂತೆ, ಕುಂದಲಗುರ ಬಳಿಯ ವಿತರಣಾ ತೊಟ್ಟಿಯಿಂದ ನದಿಗೆ ನೀರನ್ನು ಹರಿಸಲು ಅಗತ್ಯ ಕ್ರಮ ವಹಿಸಲಾಗಿದೆ.
ಸಾರ್ವಜನಿಕ ಸುರಕ್ಷತೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಕಾಲುವೆ, ಚೆಕ್ ಡ್ಯಾಂ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ-ಜಾನುವಾರುಗಳನ್ನು ಇಳಿಸುವುದು, ಈಜಾಡುವುದು ಅಥವಾ ಇನ್ನಿತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ನೀರಾವರಿ ಕಾಲುವೆ ಅಥವಾ ಕಟ್ಟಡಗಳನ್ನು ಹಾನಿಗೊಳಿಸುವುದು ಮತ್ತು ಅನಧಿಕೃತವಾಗಿ ಪಂಪ್ಸೆಟ್ಗಳನ್ನು ಅಳವಡಿಸಿ ನೀರು ಎತ್ತುವುದು ನೀರಾವರಿ ಕಾಯ್ದೆಯಡಿ ಅಪರಾಧವಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಎಚ್ಚರಿಸಿದ್ದಾರೆ.











