ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವೊಂದರಲ್ಲಿ ಎಂಆರ್ಪಿ ದರಕ್ಕಿಂತ ಕೇವಲ 7 ರೂಪಾಯಿ ಹೆಚ್ಚು ಪಡೆದ ಅಂಗಡಿಯೊಂದಕ್ಕೆ ಅಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬರೋಬ್ಬರಿ 7 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.
ದೇವಾಲಯದ ಆವರಣದಲ್ಲಿರುವ ಅಂಗಡಿಯೊಂದರಲ್ಲಿ ಗ್ರಾಹಕರೊಬ್ಬರು 18 ರೂಪಾಯಿ ಮುಖಬೆಲೆಯ ಒಂದು ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು ಖರೀದಿಸಿದ್ದರು. ಆದರೆ ಅಂಗಡಿಯವರು ಅದಕ್ಕೆ 25 ರೂಪಾಯಿ ವಸೂಲಿ ಮಾಡಿದ್ದರು. ಹೆಚ್ಚಿನ ಹಣ ಏಕೆ ಎಂದು ಪ್ರಶ್ನಿಸಿದಾಗ, ತಾವು ಎಂಆರ್ಪಿಗಿಂತ ಹೆಚ್ಚು ದರಕ್ಕೆ ಮಾರಾಟ ಮಾಡಲು ಅಧಿಕಾರ ಹೊಂದಿದ್ದೇವೆ ಎಂದು ಅಂಗಡಿಯ ಸಿಬ್ಬಂದಿ ಉಡಾಫೆಯಾಗಿ ಉತ್ತರಿಸಿದ್ದರು. ಇದರಿಂದ ಅಸಮಾಧಾನಗೊಂಡ ಗ್ರಾಹಕರು, ಅನ್ಯಾಯದ ವ್ಯಾಪಾರ ಪದ್ಧತಿ ಮತ್ತು ಸೇವಾ ನ್ಯೂನತೆಯ ವಿರುದ್ಧ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅಂಗಡಿಯ ಮಾಲೀಕರು, ಆ 25 ರೂಪಾಯಿ ಹಣವು 20 ರೂಪಾಯಿಯ ತಂಪು ಪಾನೀಯ ಮತ್ತು 5 ರೂಪಾಯಿಯ ಬಿಸ್ಕತ್ತು ಪ್ಯಾಕೆಟ್ಗೆ ಸಂಬಂಧಿಸಿದ್ದೇ ಹೊರತು ನೀರಿನ ಬಾಟಲಿಗೆ ಅಲ್ಲ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಸಾಬೀತುಪಡಿಸಲು ಯಾವುದೇ ಸಿಸಿಟಿವಿ ದೃಶ್ಯಾವಳಿ ಅಥವಾ ಎಲೆಕ್ಟ್ರಾನಿಕ್ ಬಿಲ್ ದಾಖಲೆಗಳನ್ನು ಒದಗಿಸಲು ಅಂಗಡಿಯವರಿಗೆ ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಗ್ರಾಹಕರು ಹಾಜರುಪಡಿಸಿದ ಡಿಜಿಟಲ್ ಪಾವತಿ ದಾಖಲೆ, ಎಂಆರ್ಪಿ ಮುದ್ರಿತ ನೀರಿನ ಬಾಟಲಿಯ ಫೋಟೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಪರಿಶೀಲಿಸಿದ ಆಯೋಗವು ಅಂಗಡಿಯ ತಪ್ಪನ್ನು ದೃಢಪಡಿಸಿತು. ಇದೇ ವೇಳೆ ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ದೇವಾಲಯದ ಆಡಳಿತ ಮಂಡಳಿಗೆ ಈ ಅಕ್ರಮದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿ ಆಡಳಿತ ಮಂಡಳಿಯ ಮೇಲಿನ ಆರೋಪವನ್ನು ವಜಾಗೊಳಿಸಿತು.
ದಿನನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರಗಳಲ್ಲಿ ಜನರಿಗೆ ಪರ್ಯಾಯ ವ್ಯವಸ್ಥೆಗಳಿಲ್ಲದ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಬೆಲೆ ವಸೂಲಿ ಮಾಡುವುದು ಗಂಭೀರ ಅಪರಾಧ ಎಂದು ಆಯೋಗ ಕಟುವಾಗಿ ಅಭಿಪ್ರಾಯಪಟ್ಟಿದೆ. ಕೇವಲ ಹೆಚ್ಚುವರಿ ಹಣ ಮರುಪಾವತಿಸಿದರೆ ಅಥವಾ ಸಣ್ಣ ಮೊತ್ತದ ಪರಿಹಾರ ನೀಡಿದರೆ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಬೀಳುವುದಿಲ್ಲ ಎಂದು ಹೇಳಿದ ಆಯೋಗದ ಪೀಠವು, 7 ರೂಪಾಯಿ ಹೆಚ್ಚುವರಿ ಹಣವನ್ನು ಗ್ರಾಹಕರಿಗೆ ಹಿಂತಿರುಗಿಸುವುದರ ಜೊತೆಗೆ 10,000 ರೂಪಾಯಿ ಪರಿಹಾರ ಹಾಗೂ 5,000 ರೂಪಾಯಿ ನ್ಯಾಯಾಲಯದ ವೆಚ್ಚವನ್ನು ನೀಡುವಂತೆ ಆದೇಶಿಸಿದೆ. ಇದರೊಂದಿಗೆ, ಭವಿಷ್ಯದಲ್ಲಿ ಇಂತಹ ಅಕ್ರಮ ವ್ಯಾಪಾರ ಮರುಕಳಿಸದಂತೆ ಎಚ್ಚರಿಕೆ ನೀಡಲು 7 ಲಕ್ಷ ರೂಪಾಯಿ ದಂಡವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಜಮಾ ಮಾಡುವಂತೆ ಅಂಗಡಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.











