ಬೆಂಗಳೂರು: ಮಳೆ ಹೆಚ್ಚಾದ ಹಿನ್ನೆಲೆ ರಾಜ್ಯದ ಜಲಾಶಯಗಳು ಭರ್ತಿಯಾಗುತ್ತಿವೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ. ಹಾರಂಗಿ ಜಲಾಶಯದಲ್ಲಿ 25 ಸಾವಿರ ಕ್ಯೂಸೆಕ್ಸ್ ನೀರನ್ನ ಹೊರ ಬಿಡಲಾಗುವುದು. ಆದ್ದರಿಂದ ಕುಶಾಲನಗರ, ಪಿರಿಯಾಪಟ್ಟಣ ಮತ್ತಿ ಕೆ ಆರ್ ನಗರ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಬೇಕು. ಒಳಹರಿವು ಹೆಚ್ಚಾಗಿರುವ ಕಬಿನಿ ಅಣೆಕಟ್ಟಿನಿಂದ ಬರೋಬ್ಬರಿ 40 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಇದರಿಂದಾಗಿ ಎಚ್.ಡಿ.ಕೋಟೆ, ಟಿ.ನರಸೀಪುರ, ಕೊಳ್ಳೆಗಾಲ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲಗಲಿನ ಸುತ್ತಮುತ್ತಲ ಜನರಿಗೆ ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಭರ್ತಿಯಾಗಿರುವ ಕೃಷ್ಣ ರಾಜ ಸಾಗರ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಪರಿಣಾಮ ಈ ಡ್ಯಾಂನಿಂದ ಸುಮಾರು 70 ಸಾವಿರ ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಹೀಗಾಗಿ ಶ್ರೀರಂಗಪಟ್ಟಣ, ಟಿ ನರಸೀಪುರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೇಮಾವತಿ ಅಣೆಕಟ್ಟಿನ ನೀರಿನ ಮಟ್ಟವೂ ಹೆಚ್ಚಾಗಿದೆ. ಇಂದಿನ ನೀರಿನ ಸಂಗ್ರಹ ಮಟ್ಟ 36.137 ಟಿಎಂಸಿ ಇದೆ. ಒಳ ಹರಿವು 38.715 ಕ್ಯೂಸೆಕ್ ನೀರು ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಎಚ್ಚರದಿಂದ ಇರಬೇಕು ಎಂದು ಮಾಹಿತಿ ನೀಡಲಾಗಿದೆ. ಆರಂಭದಲ್ಲಿಯೇ ಮಳೆ ಜೋರಾಗಿರುವ ಕಾರಣ, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಈಬಾರಿಯ ಬೆಳೆಗೆ, ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎಂಬ ಸಮಾಧಾನ ಅವರದ್ದಾಗಿದೆ. ಈಗಾಗಲೇ ರೈತರು ಕೃಷಿ ಕೆಲಸಗಳನ್ನು ಶುರು ಮಾಡಿಕೊಂಡಿದ್ದಾರೆ. ಮಳೆ, ಚಳಿ ಎಲ್ಲವು ಒಟ್ಟಾಗಿ ಇರುವುದರಿಂದ ಜನಕ್ಕೆ ಹೊರಗೆ ಹೋಗುವುದಕ್ಕೆ ಈ ಚಳಿ ಜಾಸ್ತಿಯಾದಂತ ಫೀಲ್ ಇದೆ.





















