Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೃಹ ಜ್ಯೋತಿ ಯೋಜನೆ : ಇಂದಿನಿಂದ ಮನೆ-ಮನೆಗೆ ಬರಲಿದ್ದಾರೆ ಸಿಬ್ಬಂದಿ, ದಾಖಲೆಗಳ ನವೀಕರಣ ಕಡ್ಡಾಯ

---Advertisement---

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಉಚಿತ ವಿದ್ಯುತ್ ಯೋಜನೆ ‘ಗೃಹ ಜ್ಯೋತಿ’ಯ ಫಲಾನುಭವಿಗಳ ದತ್ತಾಂಶವನ್ನು ಅಪ್ ಡೇಟ್ ಮಾಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅರ್ಹ ಫಲಾನುಭವಿಗಳ ನಿಖರ ಮಾಹಿತಿಯನ್ನು ಹೊಂದಿಸುವ ಸಲುವಾಗಿ, ಇಂದಿನಿಂದ (ಜುಲೈ 1, 2026) ರಾಜ್ಯಾದ್ಯಂತ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಅಭಿಯಾನ ಆರಂಭವಾಗಲಿದೆ.

ಈ ಕುರಿತು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್ಸ್) ಸರ್ಕಾರ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದು, ಮುಂದಿನ ಎರಡು ತಿಂಗಳ ಒಳಗಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ.

ಅನೇಕ ನಾಗರಿಕರು ಮನೆ ಬದಲಾಯಿಸಿರುವುದು ಅಥವಾ ಅವರ ವೈಯಕ್ತಿಕ ವಿವರಗಳಲ್ಲಿ ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಈ ಪರಿಶೀಲನೆ ಅತ್ಯಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸಿಬ್ಬಂದಿಯು ಮನೆ-ಮನೆಗೆ ಭೇಟಿ ನೀಡಿ ಸಂಗ್ರಹಿಸುವ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ಮರು-ಪರಿಶೀಲಿಸಿ ನವೀಕರಿಸಲಾಗುತ್ತದೆ.

ಯಾವೆಲ್ಲಾ ವಿವರಗಳನ್ನು ನೀಡಬೇಕು?
ನಿಮ್ಮ ಮನೆಗೆ ಭೇಟಿ ನೀಡುವ ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ನಿಗದಿತ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿ ರೇಷನ್ ಕಾರ್ಡ್ ವಿವರಗಳು (ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಸಂಖ್ಯೆ), ಕರ್ನಾಟಕದ ಮತದಾರರ ಗುರುತಿನ ಚೀಟಿ (ಎಪಿಕ್ ಸಂಖ್ಯೆ) ಹಾಗೂ ಅರ್ಜಿದಾರರ ಪ್ರಸ್ತುತ ಭಾವಚಿತ್ರವನ್ನು ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಫಲಾನುಭವಿಯ ಸಾಮಾಜಿಕ ಪ್ರವರ್ಗ (ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತರು ಅಥವಾ ಇತರೆ), ಅವರ ವೃತ್ತಿಯ ಹಿನ್ನೆಲೆ (ಸರ್ಕಾರಿ, ಖಾಸಗಿ ಉದ್ಯೋಗ, ವ್ಯಾಪಾರ ಅಥವಾ ಕೂಲಿ ಕಾರ್ಮಿಕ) ಮತ್ತು ಅವರು ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಸಹ ಪಡೆದುಕೊಳ್ಳಲಾಗುತ್ತದೆ.

ಈ ಹೊಸ ಕ್ರಮದಿಂದಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಗೃಹ ಜ್ಯೋತಿ ಯೋಜನೆಯ ಮೂಲ ನಿಯಮಗಳಲ್ಲಾಗಲಿ ಅಥವಾ ಉಚಿತ ವಿದ್ಯುತ್ ಸೌಲಭ್ಯದಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ ಸರ್ಕಾರದ ಬಳಿಯಿರುವ ಅರ್ಹರ ಜೇಷ್ಟತಾ ಪಟ್ಟಿಯನ್ನು ಪಾರದರ್ಶಕವಾಗಿ ನವೀಕರಿಸಲು ಮಾತ್ರ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಂಗ್ರಹವಾದ ದಿನನಿತ್ಯದ ಪ್ರಗತಿ ವರದಿಯನ್ನು ಸರ್ಕಾರಕ್ಕೆ ನೇರವಾಗಿ ಸಲ್ಲಿಸಲು ಇಲಾಖೆಗಳಿಗೆ ಸೂಚಿಸಲಾಗಿದ್ದು, ಸಾರ್ವಜನಿಕರು ತಮ್ಮ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಿಬ್ಬಂದಿಯೊಂದಿಗೆ ಸಹಕರಿಸಲು ಕೋರಲಾಗಿದೆ.

Join WhatsApp

Join Now

Join Telegram

Join Now