ವಿಶೇಷ ವರದಿ :
ಡಾ. ಟಿ ಮಹಂತೇಶ ಮತ್ತು ಡಾ. ರಿದ್ಯಾ ಮೆನನ್
ಮಾರುತಿ ದಂತ ಚಿಕಿತ್ಸಾಲಯ, ಚಿತ್ರದುರ್ಗ
ಫೋನ್ : 8971102253
ಸುದ್ದಿಒನ್, ಚಿತ್ರದುರ್ಗ, ಜುಲೈ. 01 :
ಪ್ರತಿ ವರ್ಷ ಸಾವಿರಾರು ಮಕ್ಕಳು ಮತ್ತು ಹದಿಹರೆಯದವರು ಶೌಚಾಲಯದಲ್ಲಿ ಜಾರಿ ಬೀಳುವುದು, ಸೈಕಲ್‌ನಿಂದ ಬೀಳುವುದು ಅಥವಾ ಆಟದ ಮೈದಾನದಲ್ಲಿ ಕ್ರಿಕೆಟ್ ಅಥವಾ ಇನ್ನಿತರ ಆಟಗಳನ್ನು ಆಡುವಾಗ ಅನಿರೀಕ್ಷಿತ ಅಪಘಾತಗಳಿಂದಾಗಿ ಹಲ್ಲು ಕಳೆದುಕೊಳ್ಳುತ್ತಾರೆ. ಅನೇಕ ಬಾರಿ ಹಲ್ಲು ಸಂಪೂರ್ಣವಾಗಿ ಅದರ ಕುಳಿಯಿಂದ ಹೊರಗೆ ಬೀಳುತ್ತದೆ. ಆದರೆ ಕಾಲು ಅಥವಾ ಕೈ ಗೆ ಗಾಯವಾದಾಗ, ಹೆಚ್ಚಿನ ಜನರಿಗೆ ಪ್ರಥಮ ಚಿಕಿತ್ಸಾ ಕ್ರಮಗಳು ತಿಳಿದಿರುತ್ತವೆ. ಅದೇ ರೀತಿ ಹಲ್ಲುಗಳಿಗೆ ತೊಂದರೆ ಅಥವಾ ಪೆಟ್ಟು ಬಿದ್ದು ತುರ್ತು ಪರಿಸ್ಥಿತಿ ಉಂಟಾದರೆ ಯಾವ ಪ್ರಾಥಮಿಕ ಮತ್ತು ತುರ್ತು ಚಿಕಿತ್ಸಾ ಕ್ರಮಗಳನ್ನು ಅನುಸರಿಸಬೇಕೆಂದು ಬಹಳ ಕಡಿಮೆ ಜನರಿಗೆ ಮಾತ್ರ ತಿಳಿದಿದೆ.
ಮಕ್ಕಳ ದಂತ ವೈದ್ಯರ ಪ್ರಕಾರ, ಅಪಘಾತದ ನಂತರದ ಪ್ರಾರಂಭಿಕ 15 ರಿಂದ 30 ನಿಮಿಷಗಳು ನಿರ್ಣಾಯಕವಾಗಿವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ “ಸುವರ್ಣ ಸಮಯ” ಎನ್ನುತ್ತಾರೆ . ಈ ” ಸುವರ್ಣ ಸಮಯ “ದಲ್ಲಿ ತ್ವರಿತ ಮತ್ತು ಸರಿಯಾದ ಕ್ರಮವನ್ನು ಕೈಗೊಂಡರೆ ನೈಸರ್ಗಿಕ ಹಲ್ಲನ್ನು ಉಳಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುವುದನ್ನು ತಪ್ಪಿಸಬಹುದು . ಆರಂಭಿಕ ನಿರ್ವಹಣೆಯ ಬಗ್ಗೆ ಇರುವ ಜ್ಞಾನದ ಕೊರತೆಯು ಹಲ್ಲಿನ ನಷ್ಟಕ್ಕೆ ಕಾರಣವಾಗಬಹುದು. ಇದು ಮಕ್ಕಳ ಮಾತು ಕಲಿಯುವಿಕೆ, ಮುಖದ ಸೌಂದರ್ಯ ಮತ್ತು ಒಟ್ಟಾರೆ ಮುಖದ ಬೆಳವಣಿಗೆ ಮತ್ತು ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.
ಹಲ್ಲು ಸಂಪೂರ್ಣವಾಗಿ ಉದುರಿಹೋದಾಗ, ಅದು ತಕ್ಷಣ “ಸಾಯುವುದಿಲ್ಲ.” ಹಲ್ಲಿನ ಬೇರು ಪೆರಿಯೊಡಾಂಟಲ್ ಲಿಗಮೆಂಟ್ (PDL) ಕೋಶಗಳು ಎಂಬ ಸೂಕ್ಷ್ಮ ನಾರುಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಈ ಸಣ್ಣ ಜೀವಕೋಶಗಳು ಬಿದ್ದ ಹಲ್ಲನ್ನು ತನ್ನ ಕುಳಿಯಲ್ಲಿ ಮರು ನೆಡಲ್ಪಟ್ಟ ನಂತರ ದವಡೆಯ ಮೂಳೆಗೆ ಮತ್ತೆ ಜೋಡಿಸಲು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಮತ್ತು ಹಲ್ಲು ತನ್ನ ಮೂಲ ಸ್ಥಿತಿಗೆ ಮರಳಲು ಅನುಕೂಲವಾಗುತ್ತದೆ. ಆದಾಗ್ಯೂ, ಅವು ಬಹಳ ದುರ್ಬಲವಾಗಿರುತ್ತವೆ ಮತ್ತು ಬಾಯಿಯ ಹೊರಗೆ ಅಲ್ಪಾವಧಿಗೆ ಮಾತ್ರ ಬದುಕಬಲ್ಲವು. ಸೂಕ್ತ ವಾತಾವರಣದಲ್ಲಿ ಹಲ್ಲನ್ನು ತೇವವಾಗಿರಿಸಿದರೆ, ಈ ಜೀವಕೋಶಗಳಲ್ಲಿ ಹಲವು ಜೀವಂತವಾಗಿರುತ್ತವೆ. ಇದು ದಂತವೈದ್ಯರು ಯಶಸ್ವಿಯಾಗಿ ಹಲ್ಲನ್ನು ಮರು ಸ್ಥಾಪಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ಹಲ್ಲು 15-20 ನಿಮಿಷಗಳಿಗಿಂತ ಹೆಚ್ಚು ಕಾಲ ಒಣಗಿದರೆ, ಪಿಡಿಎಲ್ ಕೋಶಗಳು ಸಾಯಲು ಪ್ರಾರಂಭಿಸುತ್ತವೆ. ಈ ಜೀವಕೋಶಗಳು ಕಳೆದುಹೋದ ನಂತರ, ದೇಹವು ಇನ್ನು ಮುಂದೆ ಹಲ್ಲುಗಳನ್ನು ತನ್ನ ಭಾಗವಾಗಿ ಗುರುತಿಸುವುದಿಲ್ಲ. ಈಗ ಹಲ್ಲನ್ನು ತನ್ನ ಕುಳಿಯಲ್ಲಿ ಮರು ಸ್ಥಾಪಿಸಿದರೆ ಹಲ್ಲಿನ ಬೇರು ಕರಗಲು ಶುರುವಾಗುತ್ತದೆ ಮತ್ತು ಮರು ಸ್ಥಾಪನೆಯು ಸಂಪೂರ್ಣ ವಿಫಲವಾಗುತ್ತದೆ. ಸರಳವಾಗಿ ಹೇಳುವುದಾದರೆ – ಈ ಕೋಶಗಳನ್ನು ರಕ್ಷಿಸುವುದು ಹಲ್ಲನ್ನು ಉಳಿಸುವ ರಹಸ್ಯವಾಗಿದೆ ಮತ್ತು ಅದಕ್ಕಾಗಿಯೇ ಬಾಯಿಯಿಂದ ಹೊರ ಬಂದ ಹಲ್ಲನ್ನು ಸರಿಯಾದ ಶೇಖರಣಾ ಮಾಧ್ಯಮದಲ್ಲಿ ದಂತ ವೈದ್ಯರ ಬಳಿಗೆ ತರುವುದು ತುಂಬಾ ಮುಖ್ಯವಾಗಿದೆ.
ಪೋಷಕರು ,ಶಿಕ್ಷಕರು ಮತ್ತು ಸಾಮಾನ್ಯ ಜನಗಳು ಕೆಲವು ಸರಳ ಹಂತಗಳನ್ನು ಮನಸಿನಲ್ಲಿಟ್ಟುಕೊಂಡು ಸರಿಯಾದ ಶೇಖರಣ ಮಾಧ್ಯಮದಿಂದ ದಂತ ವೈದ್ಯರಲ್ಲಿ ತಂದರೆ ಹಲ್ಲನ್ನು ಸಂರಕ್ಷಿಸಬಹುದು.
1. ಹಲ್ಲನ್ನು ಸರಿಯಾಗಿ ಎತ್ತಿಕೊಳ್ಳಿ : ಯಾವಾಗಲೂ ಹಲ್ಲಿನ ಮೇಲ್ಭಾಗವನ್ನು ಹಿಡಿದುಕೊಳ್ಳಿ – ಎಂದರೆ ಸಾಮಾನ್ಯವಾಗಿ ಬಾಯಲ್ಲಿ ಕಂಡುಬರುವ ಪ್ರಕಾಶಮಾನವಾದ ಹೊಳಪುಳ್ಳ ಭಾಗ. ಬೇರಿನ ಭಾಗವನ್ನು ಅಂದರೆ ಕೆಳಭಾಗ ಮುಟ್ಟುವುದನ್ನು ತಪ್ಪಿಸಿ, ಏಕೆಂದರೆ ಅದು ಹಲ್ಲನ್ನು ಮತ್ತೆ ಜೋಡಿಸಲು ಸಹಾಯ ಮಾಡುವ ದುರ್ಬಲವಾದ ಜೀವಂತ ಕೋಶಗಳಿಂದ ಸುತ್ತುವರೆದಿರುತ್ತದೆ. ಸಣ್ಣಗೀರು ಅಥವಾ ಒತ್ತಡವು ಅವುಗಳಿಗೆ ಹಾನಿ ಉಂಟು ಮಾಡಬಹುದು
2. ಅಗತ್ಯವಿದ್ದರೆ ಹುಷಾರಾಗಿ ಸ್ವಚ್ಛಗೊಳಿಸಿ : ಹಲ್ಲು ನೆಲದ ಮೇಲೆ ಬಿದ್ದು ಕೊಳೆ ಸಂಗ್ರಹವಾಗಿದ್ದರೆ ಅದನ್ನು ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯಿರಿ. ಕೊಳೆಯನ್ನು ಕೆರೆದು ತೆಗೆಯುವುದಾಗಲಿ ಅಥವಾ ಸೋಪು, ಸೋಂಕು ನಿವಾರಕಗಳು ಅಥವಾ ಯಾವುದೇ ರಾಸಾಯನಿಕಗಳನ್ನು ಉಪಯೋಗಿಸಬೇಡಿ. ತೀರ್ವವಾದ ಶುಚಿಗೊಳಿಸುವಿಕೆಯು ಹಲ್ಲನ್ನು ಉಳಿಸುವ ಕೋಶಗಳನ್ನು ನಾಶಪಡಿಸುತ್ತದೆ.
3. ಸಾಧ್ಯವಾದರೆ ಹಲ್ಲನ್ನು ಅದರ ಕುಳಿಯಲ್ಲಿ ಮತ್ತೆ ಇಡಲು ಪ್ರಯತ್ನಿಸಿ: ಹಲ್ಲನ್ನು ತಕ್ಷಣವೇ ಅದರ ಕುಳಿಯಲ್ಲಿ ಮತ್ತೆ ಸೇರಿಸಿದಾಗ ಯಶಸ್ಸಿನ ಹೆಚ್ಚಿನ ಸಾಧ್ಯತೆ ಕಂಡು ಬರುತ್ತದೆ. ಬಿದ್ದ ಹಲ್ಲನ್ನು ಅದರ ಕುಳಿಯಲ್ಲಿ ಸರಿಯಾಗಿ ಇರಿಸಿ ಎಚ್ಚರಿಕೆಯಿಂದ ನಿಧಾನವಾಗಿ ಒತ್ತಿರಿ. ನಂತರ ದಂತ ವೈದ್ಯರ ಬಳಿಗೆ ಬರುವವರೆಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹತ್ತಿ ಅಥವಾ ಸ್ವಚ್ಛವಾದ ಕರವಸ್ತ್ರವನ್ನು ನಿಧಾನವಾಗಿ ಕಚ್ಚಿಕೊಂಡು ಇರಲು ಮಗುವಿಗೆ ತಿಳಿಸಿ.
4. ಮರು ನೆಡುವಿಕೆ ಸಾಧ್ಯವಾಗದಿದ್ದರೆ, ತೇವಾಂಶವನ್ನು ಕಾಪಾಡಿಕೊಳ್ಳಿ. ತೇವಾಂಶವನ್ನು ಕಳೆದುಕೊಂಡ ಹಲ್ಲುಗಳು ಬದುಕುಳಿಯುವ ಸಾಧ್ಯತೆಯೂ ತುಂಬಾ ಕಡಿಮೆ. ತಜ್ಞರು ತೇವಾಂಶವನ್ನು ಹಲ್ಲಿನ “ಜೀವನರೇಖೆ” ಎಂದು ಕರೆಯುತ್ತಾರೆ. ಸೂಕ್ತವಾದ ಮಾಧ್ಯಮದಲ್ಲಿ ಹಲ್ಲನ್ನು ಸಂರಕ್ಷಿಸಿದರೆ ಹಲ್ಲಿನ ಬೇರಿನ ಜೀವಕೋಶಗಳು ಜೀವಂತವಾಗಿ ಉಳಿದುಕೊಂಡು ಹಲ್ಲನ್ನು ಸಂರಕ್ಷಿಸಲು ಸಹಾಯವಾಗುತ್ತದೆ. ಇದಕ್ಕಾಗಿ ನಾವು ಈ ಕೆಳಕಂಡ ವಸ್ತುಗಳನ್ನು ಉಪಯೋಗಿಸಬಹುದು.
ತಂಪಾದ ಹಾಲು – ಹಾಲು ಸುಲಭವಾಗಿ ಎಲ್ಲಾ ಕಡೆ ಲಭ್ಯವಿರುತ್ತದೆ. ಸರಿಯಾದ pH ಮತ್ತು ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಬೇರು ಕೋಶಗಳನ್ನು ಗಂಟೆಗಟ್ಟಲೆ ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದು ಯಶಸ್ವಿ ಮರು ನೆಡುವಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಲಾಲಾರಸ (Saliva) – ಹಾಲು ಲಭ್ಯವಿಲ್ಲದಿದ್ದರೆ, ಮಗುವಿಗೆ ಸಾಕಷ್ಟು ವಯಸ್ಸಾದವರಾಗಿದ್ದರೆ ಮತ್ತು ಪ್ರಜ್ಞೆ ಹೊಂದಿದ್ದರೆ, ನೀವು ಹಲ್ಲನ್ನು ಕೆನ್ನೆಯ ಭಾಗದಲ್ಲಿ ಇಡಬಹುದು. ಇದು ನೈಸರ್ಗಿಕ ವಾತಾವರಣದಲ್ಲಿ ಅದನ್ನು ತೇವವಾಗಿರಿಸುತ್ತದೆ. ಮಕ್ಕಳು ತುಂಬಾ ಚಿಕ್ಕವರಿದ್ದರೆ ಇದನ್ನು ಪ್ರಯತ್ನಿಸಬಾರದು. ಚಿಕ್ಕ ಮಕ್ಕಳ ಹಲ್ಲನ್ನು ನುಂಗುವ ಸಾಧ್ಯತೆ ಇರುತ್ತದೆ.

ಲವಣಯುಕ್ತ (Saline) ದ್ರಾವಣ – ಆಸ್ಪತ್ರೆಗಳು, ಚಿಕಿತ್ಸಾಲಯಗಳಲ್ಲಿ ಅಥವಾ ಕೆಲವೊಮ್ಮೆ ಮನೆಯಲ್ಲಿ ಕಾಂಟ್ಯಾಕ್ಟ್ ಲೆನ್ಸ್ ದ್ರಾವಣವಾಗಿ ಕಂಡುಬರುತ್ತದೆ. ಇದು ತಾತ್ಕಾಲಿಕವಾಗಿ ಹಲ್ಲನ್ನು ರಕ್ಷಿಸುವ ಸುರಕ್ಷಿತ ಆಯ್ಕೆಯಾಗಿದೆ.
ತೆಂಗಿನ ನೀರು – ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತೆಂಗಿನ ಕಾಯಿಯ ನೀರನ್ನು ಬಳಸಬಹುದು. ಇದು ಬೇರು ಕೋಶಗಳನ್ನು ಜೀವಂತವಾಗಿಡಲು ಸಹಾಯ ಮಾಡುವ ಲವಣಗಳ ನೈಸರ್ಗಿಕ ಸಮತೋಲನವನ್ನು ಹೊಂದಿರುತ್ತದೆ. ಹಲ್ಲುಗಳನ್ನು ಸಂರಕ್ಷಿಸುವಲ್ಲಿ ಇದು ಹಾಲಿನಷ್ಟೇ ಪರಿಣಾಮಕಾರಿ ಎಂದು ಅಧ್ಯಯನಗಳು ತೋರಿಸುತ್ತವೆ.
ಮೊಟ್ಟೆಯ ಬಿಳಿ ಭಾಗ – ಇದು ಸಹ ಒಂದು ಪರಿಣಾಮಕಾರಿ ಆಯ್ಕೆ. ಮೊಟ್ಟೆಯ ಬಿಳಿ ಭಾಗವು ಹಲ್ಲಿನ ಬೇರಿನ ಜೀವಕೋಶಗಳಿಗೆ ಅಗತ್ಯವಾದ ಪ್ರೋಟೀನ್ ಮತ್ತು ತೇವಾಂಶವನ್ನು ಒದಗಿಸುತ್ತದೆ, ದಂತ ಆರೈಕೆ ಲಭ್ಯವಾಗುವವರೆಗೆ ಬೇರು ಕೋಶಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.
ಹ್ಯಾಂಕ್ಸ್ ಬ್ಯಾಲೆನ್ಸ್ಡ್ ಸಾಲ್ಟ್ ಸೊಲ್ಯೂಷನ್ (HBSS): ಇದನ್ನು ಜೀವಂತ ಕೋಶಗಳನ್ನು ಸಂರಕ್ಷಿಸಲು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹೆಚ್ಚಾಗಿ ಶಾಲೆಗಳು, ಕ್ರೀಡಾ ಅಕಾಡೆಮಿಗಳು ಮತ್ತು ದಂತ ತುರ್ತು ಚಿಕಿತ್ಸಾ ಪೆಟ್ಟಿಗೆಗಳಲ್ಲಿ ಇರುತ್ತದೆ. ಸಾರ್ವಜನಿಕರಿಗೆ ಸಾಮಾನ್ಯವಾಗಿ ತಕ್ಷಣಕ್ಕೆ ಸಿಗುವುದು ಕಷ್ಟ. ಲಭ್ಯವಿದ್ದರೆ ಬಳಸಿದರೆ ಇದೊಂದು ಅತ್ಯುತ್ತಮ ಆಯ್ಕೆ.
ಏನು ಮಾಡಬಾರದು:
ಹಲ್ಲುಗಳನ್ನು ಟಿಶ್ಯೂ ಅಥವಾ ಬಟ್ಟೆಯಲ್ಲಿ ಸುತ್ತುವುದು, ಮೇಜಿನ ಮೇಲೆ ಇಡುವುದು ಅಥವಾ ನಂಜುನಿರೋಧಕ, ಆಲ್ಕೋಹಾಲ್ ಅಥವಾ ಟ್ಯಾಪ್ ನೀರಿನಿಂದ ಜೋರಾಗಿ ತೊಳೆಯುವುದು ಮುಂತಾದ ಸಾಮಾನ್ಯ ತಪ್ಪುಗಳನ್ನು ಮಾಡಬಾರದು. ನೀರು ಶುದ್ಧವಾಗಿದ್ದರೂ ಸಹ ಜೋರಾಗಿ ತೊಳೆದರೆ, ಸೂಕ್ಷ್ಮವಾದ ಬೇರಿನ ಕೋಶಗಳು ಸಾಯಲು ಕಾರಣವಾಗಬಹುದು. ಡೆಟಾಲ್ ನಂತಹ ನಂಜುನಿರೋಧಕಗಳು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ – ಆದರೆ ಹಲ್ಲನ್ನು ಮತ್ತೆ ಜೋಡಿಸಲು ಅಗತ್ಯವಿರುವ ಕೋಶಗಳನ್ನು ಸಹ ಕೊಲ್ಲುತ್ತವೆ.
ಮಕ್ಕಳ ದಂತವೈದ್ಯರು ಈ ಸರಳ ಕ್ರಮಗಳನ್ನು “ದಂತ ಪ್ರಥಮ ಚಿಕಿತ್ಸೆ” ಎಂದು ಕರೆಯುತ್ತಾರೆ. ಇದೊಂದು ಪ್ರತಿಯೊಬ್ಬ ಪೋಷಕರು ಮತ್ತು ಶಿಕ್ಷಕರು ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ. ಅಪಘಾತವಾದ ನಂತರ ಮೇಲೆ ತಿಳಿಸಿದಂತೆ ಹಲ್ಲನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ದಂತ ವೈದ್ಯರಲ್ಲಿ ತೆಗೆದುಕೊಂಡು ಬಂದರೆ ನೈಸರ್ಗಿಕ ಹಲ್ಲನ್ನು ಮತ್ತು ಮಗುವಿನ ಮುಗ್ಧ ನಗುವನ್ನು ಉಳಿಸಿಕೊಳ್ಳಬಹುದು.

























