ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ತೂಕ ಹೆಚ್ಚಾಗುವುದು ಬಹುತೇಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ದೇಹದ ತೂಕ ಇಳಿಸಿಕೊಳ್ಳಲು ಅನೇಕರು ಕಠಿಣ ಡಯಟ್, ಜಿಮ್, ವ್ಯಾಯಾಮಗಳನ್ನು ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗದೆ ನಿರಾಶರಾಗುತ್ತಾರೆ. ಆದರೆ, ನಮ್ಮ ಪುರಾತನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಅದ್ಭುತ ಮಾರ್ಗಗಳಿವೆ.
ನಮ್ಮ ದೈನಂದಿನ ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದ ವೈದ್ಯರಾದ ಡಾ. ಅಪರ್ಣಾ ಚಾಪರ ಅವರು ತೂಕ ಇಳಿಕೆಗೆ ಸಹಕಾರಿಯಾಗುವ 5 ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಆಯುರ್ವೇದ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಅವುಗಳ ವಿವರ ಇಲ್ಲಿದೆ:
1. ಊಟಕ್ಕೆ ಮುಂಚಿತವಾಗಿ ಉಗುರುಬೆಚ್ಚಗಿನ ನೀರು ಕುಡಿಯುವುದು:
ಆಯುರ್ವೇದದ ಪ್ರಕಾರ ನಮ್ಮ ಜೀರ್ಣಾಂಗ ವ್ಯವಸ್ಥೆಯು ಒಂದು ಅಗ್ನಿಯಂತಿದೆ. ಊಟ ಮಾಡುವ ಅರ್ಧ ಗಂಟೆ ಮುಂಚಿತವಾಗಿ ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ನಿಧಾನವಾಗಿ ಸಿಪ್ ಮಾಡುತ್ತಾ ಕುಡಿಯಬೇಕು. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿನ ಕಲ್ಮಶಗಳನ್ನು (ಟಾಕ್ಸಿನ್ಸ್) ಹೊರಹಾಕುತ್ತದೆ. ಅಲ್ಲದೆ, ಊಟಕ್ಕೆ ಮುನ್ನ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಾಗಿ, ಅತಿಯಾಗಿ ತಿನ್ನುವುದನ್ನು ತಡೆಯಬಹುದು.
2. ರಾತ್ರಿ 7 ಗಂಟೆಯೊಳಗೆ ಊಟ ಮುಗಿಸುವುದು:
ಸೂರ್ಯಾಸ್ತದ ನಂತರ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆಯು ಸಹಜವಾಗಿಯೇ ನಿಧಾನಗೊಳ್ಳುತ್ತದೆ. ಆದ್ದರಿಂದ ರಾತ್ರಿಯ ಊಟವನ್ನು ಸಾಧ್ಯವಾದಷ್ಟು ಬೇಗ, ಅಂದರೆ ರಾತ್ರಿ 7 ಗಂಟೆಯೊಳಗೆ ಮುಗಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನೀವು ಮಲಗುವ ವೇಳೆಗೆ ಆಹಾರ ಸಂಪೂರ್ಣವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಕೊಬ್ಬಾಗಿ ಮಾರ್ಪಡುತ್ತದೆ.
3. ಊಟದ ನಂತರ ನಡಿಗೆ:
ಆಯುರ್ವೇದದ ನಿಯಮಗಳ ಪ್ರಕಾರ ಊಟ ಮಾಡಿದ ತಕ್ಷಣ ಕುರ್ಚಿಯಲ್ಲಿ ಕೂರುವುದು ಅಥವಾ ಮಲಗುವುದು ಮಾಡಬಾರದು. ತಿಂದ ನಂತರ ಕನಿಷ್ಠ 100 ರಿಂದ 500 ಹೆಜ್ಜೆಗಳವರೆಗೆ ಅತ್ಯಂತ ನಿಧಾನವಾಗಿ ಮತ್ತು ಪ್ರಶಾಂತವಾಗಿ ನಡೆಯಬೇಕು. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುವುದಿಲ್ಲ ಮತ್ತು ಆಹಾರ ಸರಾಗವಾಗಿ ಜೀರ್ಣವಾಗುತ್ತದೆ. ಜೊತೆಗೆ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
4. ಹಗಲು ನಿದ್ದೆಯನ್ನು ತಪ್ಪಿಸುವುದು:
ಮಧ್ಯಾಹ್ನದ ಊಟದ ನಂತರ ದಣಿವು ಆರಿಸಿ ಕೊಳ್ಳಲು ಸ್ವಲ್ಪ ಸಮಯ ನಿದ್ದೆ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ಆದರೆ ಹಗಲಿನಲ್ಲಿ ಮಲಗುವುದರಿಂದ ದೇಹದಲ್ಲಿ ‘ಕಫ ದೋಷ’ ಹೆಚ್ಚಾಗುತ್ತದೆ ಎಂದು ಆಯುರ್ವೇದ ಎಚ್ಚರಿಸುತ್ತದೆ. ಕಫ ಹೆಚ್ಚಾದರೆ ದೇಹದಲ್ಲಿ ಬದ್ಧತೆ ಮತ್ತು ಆಲಸ್ಯ ಉಂಟಾಗಿ ಮೆಟಬಾಲಿಸಂ (ಜೀವ ರಾಸಾಯನಿಕ ಕ್ರಿಯೆ) ಮಂದಗತಿಯಾಗುತ್ತದೆ. ಇದರಿಂದ ಕೊಬ್ಬು ಸಂಗ್ರಹವಾಗುತ್ತದೆ. ಆದ್ದರಿಂದ ತೂಕ ಇಳಿಸಬೇಕೆಂದರೆ ಹಗಲು ನಿದ್ದೆಯನ್ನು ಸಂಪೂರ್ಣವಾಗಿ ಬಿಟ್ಟು, ರಾತ್ರಿ ಮಾತ್ರ 7-8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡಬೇಕು.











